ಪ್ರತಾಪ್ ಸಿಂಹರಿಂದ ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನ: ಡಿಸಿಎಂ ಡಿ.ಕೆ. ಶಿವಕುಮಾರ್

Banglore:

Font size:

ಪ್ರತಾಪ್ ಸಿಂಹರಿಂದ ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಸೆ.15:

“ಪ್ರತಾಪ್ ಸಿಂಹರಿಗೆ ಅವರ ಪಕ್ಷದಲ್ಲಿ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ತಾನು ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ಸರ್ಕಾರ ನಿರ್ಧಾರದ ವಿರುದ್ಧ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, “ನ್ಯಾಯ ಪೀಠದಿಂದ ನ್ಯಾಯ ಸಿಕ್ಕಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ನಾವು ತಲೆಬಾಗುತ್ತೇವೆ. ನಮ್ಮದು ಪ್ರಜಾಪ್ರಭುತ್ವದ ವ್ಯವಸ್ಥೆ. ನಾವಿಂದು ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದೇವೆ. ನಮ್ಮ ಮತ ನಮ್ಮ ಹಕ್ಕು. ಬ್ಯಾಲೆಟ್ (ಮತ) ಬುಲೆಟ್ ಗಿಂತ ಶಕ್ತಿಶಾಲಿ. ನಮ್ಮದು ಈ ಮತಗಳಿಂದ ಆರಿಸಲಾಗಿರುವ ಸರ್ಕಾರ. ಜನರ ಬಹುಮತದೊಂದಿಗೆ ಆರಿಸಿ ಬಂದಿರುವ ಸರ್ಕಾರದ ತೀರ್ಮಾನ ಇದು” ಎಂದು ತಿಳಿಸಿದರು.

“ನಮ್ಮ ಸಂವಿಧಾನ ಸಮಾನತೆಯ ಸಂದೇಶ ಸಾರುತ್ತದೆ. ಎಲ್ಲಾ ಧರ್ಮಗಳಿಗೂ ಧರ್ಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಚಾಮುಂಡೇಶ್ವರಿ ದೇವಿಗೆ ಪ್ರಾರ್ಥಿಸಬೇಡಿ, ಚಾಮುಂಡಿ ಬೆಟ್ಟಕ್ಕೆ ಬರಬೇಡಿ ಎಂದು ಹೇಳಲು ಹೇಗೆ ಸಾಧ್ಯ? ನಾವು ಸಂವಿಧಾನ ಬದ್ಧವಾದ ನಿರ್ಧಾರ ತೆಗೆದುಕೊಂಡಿದ್ದು, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನವನ್ನು ಸರಿಯಾಗಿ ಓದಲಿ. ಆಗ ನಿಮ್ಮ ಹಕ್ಕು ಏನಿದೆ ಎಂಬುದು ಅರ್ಥವಾಗುತ್ತದೆ. ಬಿಜೆಪಿಗರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಸಂವಿಧಾನ ಹಾಗೂ ಎಲ್ಲಾ ವರ್ಗಗಳ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

“ನ್ಯಾಯಾಲಯ ಕೂಡ ಸಂವಿಧಾನದ ಮೇಲೆ ನಡೆಯುತ್ತದೆ. ನಾವುಗಳು ಸಂವಿಧಾನದ ತತ್ವದ ಮೇಲೆ ನಡೆಯುತ್ತೇವೆ. ನಾವು ಪ್ರಮಾಣ ವಚನ ಸ್ವೀಕರಿಸುವುದು ಸಂವಿಧಾನದ ಹೆಸರಿನಲ್ಲಿ” ಎಂದರು.

Prev Post ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ: ಈ ಬಗ್ಗೆ ಕೃಷಿ ವಿವಿಗಳು ಹೆಚ್ಚಿನ‌ ಅಧ್ಯಯನ‌ ನಡೆಸಿ ಪರಿಹಾರ ಹುಡುಕಬೇಕು: ಸಿ.ಎಂ.ಸಿದ್ದರಾಮಯ್ಯ
Next Post ಯು ಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ: ಸಿಎಂ