ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಭಾರತವು ಆಹಾರ ರಫ್ತು ಮಾಡುವ ದೇಶವಾಗಿದೆ -ಸಿ.ಎನ್.ಶಿವಪ್ರಕಾಶ್
ಬೆಂಗಳೂರು, ಸೆ. 12 -
ಭಾರತದಲ್ಲಿ 2024-25ನೇ ವರ್ಷದಲ್ಲಿ 355 ಮಿಲಿಯನ್ ಟನ್ ಆಹಾರ ಧಾನ್ಯಗಳು ಮತ್ತು 367 ಮಿಲಿಯನ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸಿದ್ದು, 2019-2020ರ ವರೆಗೆ ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಭಾರತವು 2020-21 ರಿಂದ ಆಹಾರ ರಫ್ತು ಮಾಡುವ ದೇಶವಾಗಿದೆ ಎಂದು ಕಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ತಿಳಿಸಿದರು.
ಇಂದು ಬೆಂಗಳೂರಿನ ಕೃಷಿ ಸಂಸ್ಥೆಯಲಿ ಕರ್ನಾಟಕ ರಾಜ್ಯ ಕೃಷಿ ವ್ಯವಹಾರ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ, ಕೃಷಿ ತಂತ್ರಜ್ಞರ ಸಂಸ್ಥೆ ಇವರ ಸಹಯೋಗದಲ್ಲಿ “ಮುಕ್ತ ವ್ಯಾಪಾರ ಒಪ್ಪಂದ : ದೇಶದ ಕೃಷಿ ವಹಿವಾಟಿನ ಹಿತರಕ್ಷಣೆ ” ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದ ಕೃಷಿ ಕ್ಷೇತ್ರವನ್ನು ಹಾಗೂ ಕೃಷಿ ವಹಿವಾಟಿನ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಕ್ತ ವ್ಯಾಪಾರ ಒಪ್ಪಂದಗಳಿಂದ ಸಂಭವಿಸುವ ಸವಾಲುಗಳು ಮತ್ತು ಅವಕಾಶಗಳು ಕುರಿತು ವಿಸ್ತøತವಾಗಿ ವಿಚಾರ ವಿನಿಮಯ ಮಾಡುವ ಹಾಗೂ ತನ್ಮೂಲಕ ದೇಶದ ಕೃಷಿ ಕ್ಷೇತ್ರವನ್ನು ಹಾಗೂ ಕೃಷಿ ವಹಿವಾಟನ್ನು ಕಾಪಾಡುವ ಉದ್ದೇಶವಾಗಿದೆ ಎಂದರು.
ಭಾರತವು ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‍ಡಮ್, ಯುಎಇ, ಸಿಂಗಾಪೂರ್, ಸೌತ್ ಕೋರಿಯಾ, ಮೌರೀಷಿಯಸ್ ಹಾಗೂ ಮುಂತಾದ ದೇಶಗಳೊಂದಿಗೆ ಮುಕ್ತ ಹಾಗೂ ಬಹುಮುಖ ವ್ಯಾಪಾರ ಒಪ್ಪಂದಕ್ಕೆ ಯಶಸ್ವಿಯಾಗಿ ಸಹಿ ಹಾಕಿದೆ. ಭೌಗೋಳಿಕ ಮತ್ತು ರಾಜಕೀಯ ಬದಲಾದ ಸನ್ನಿವೇಶದಲ್ಲಿ ಅನೇಕ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಬಿ.ಪಾಟೀಲ್ ಅವರು, ಈ ಸಂಸ್ಥೆಯು 1968 ರಲ್ಲಿ ಪ್ರಾರಂಭವಾಗಿದ್ದು, ಇಲಿಯವರೆಗೆ ಕೃಷಿ ಉತ್ಪಾದನೆ ಕುರಿತು ಚಿಂತನ-ಮಂಥನ ನಡೆಸಲಾಗಿದೆ. ರೈತರ ಅಭ್ಯುದಯಕ್ಕಾಗಿ ಈಗ ನಮ್ಮ ಕೃಷಿ ವಹಿವಾಟಿನ ಹಿತರಕ್ಷಣೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ಚಿಂತನ-ಮಂಥನ ನಡೆಸಲಾಗುತ್ತಿದೆ ಎಂದರು.
ಈ ವೇದಿಕೆಯು ರಫ್ತುದಾರರು, ನೀತಿ ನಿರೂಪಕರು, ಶಿಕ್ಷಣ ತಜÐರು ಮತ್ತು ನವೋದ್ಯಮಗಳು ಸೇರಿಕೊಂಡು ಭಾರತೀಯ ಕೃಷಿ ರಫ್ತಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ತಂತ್ರಗಳನ್ನು ಚರ್ಚಿಸಲು ಹಾಗೂ ತನ್ಮೂಲಕ ಜಾಗತಿಕ ವ್ಯಾಪಾರ ಒಪ್ಪಂದಗಳ ಜಾಲದಲ್ಲಿ ರೈತರ ಹಿತಾಸಕ್ಕಿಗಳನ್ನು ರಕ್ಷಿಸಲು ಸೂಕ್ತ ಅವಕಾಶ ಕಲ್ಪಿಸುತ್ತದೆ ಎಂದರು.
ಈ ಕಾರ್ಯಾಗಾರದಲ್ಲಿ ಭಾರತೀಯ ಮ್ಯಾನೇಜ್‍ಮೆಂಟ್ ಸಂಸ್ಥೆ, ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ, ಸಾಮಾಜಿಕ-ಆರ್ಥಿಕ ಬದಲಾವಣೆ ಸಂಸ್ಥೆ, ರಫ್ತು-ಆಮದು ನೀತಿ ಬ್ಯಾಂಕ್ ಮುಂಬೈ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ವಿದೇಶಿ ವ್ಯಾಪಾರ ನಿರ್ದೇಶನಾಲಯದಂತಹ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳ ವಿವಿಧ ವಿಷಯ ತಜ್ಞರು ಭಾಗವಹಿಸಿ ವಿಷಯದ ಕುರಿತಾಗಿ ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ನೊಂದಾಯಿತ ರಫ್ತುದಾರರು, ಕೃಷಿ-ಸ್ಟಾರ್ಟ್‍ಆಪ್‍ಗಳು, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಫಲಾನುಭವಿಗಳು, ಗೂಗಲ್ ನೋಂದಾಯಿತ ಕೃಷಿ ಉದ್ಯಮಾಸಕ್ತರು, ಕೃಷಿ ತಂತ್ರಜ್ಞ ಸಂಸ್ಥೆಯ ಸದಸ್ಯರು, ರಾಜ್ಯದ ಕೃಷಿ ವಿಶ್ವವಿದ್ಯಾಯದ ಕೃಷಿ--ವ್ಯವಹಾರ ನಿರ್ವಹಣಾ ಸಂಸ್ಥೆ, ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಕೃಷಿ, ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಉತ್ಪನ್ನಗಳ ರಫ್ತು ಆಸಕ್ತರನ್ನು ಏಕಕಾಲಕ್ಕೆ ಒಂದೆಡೆ ಸೇರುವಂತೆ ಮಾಡಿ ಅಗತ್ಯ ಚರ್ಚೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುತ್ತಿದೆ ಎಂದರು.
ಕಾಯಾಗಾರದಲ್ಲಿ ಕಪೆಕ್ ಜನರಲ್ ಮ್ಯಾನೇಜರ್ ಡಾ.ಹೆಚ್.ಕೆ.ಶಿವಕುಮಾರ್, ಆರ್‍ಬಿಐನ ಮುಖ್ಯ ಜನರಲ್ ಮ್ಯಾನೇಜರ್ ಡಾ. ಬಾಲಕೆಂಚಪ್ಪ, ಕೃಷಿ ತಂತ್ರಜ್ಞ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಡಾ.ಎಸ್.ಬಿ. ಯೋಗಾನಂದ, ಕಾರ್ಯದರ್ಶಿ ಜಿ.ಹೆಚ್.ಯೋಗೇಶ್, ಸುಮಾರು 185 ನೊಂದಾಯಿತ ಸದಸ್ಯರುಗಳು ಉಪಸ್ಥಿತರಿದ್ದರು.








