ಶಾಂತಿ ಕದಡುವ ಪರಿಸ್ಥಿತಿಗೆ ಸರಕಾರ ಹೊಣೆ: ವಿಜಯೇಂದ್ರ ಓಲೈಕೆಯಿಂದ ಜನರಿಗೆ ತೊಂದರೆ: ಛಲವಾದಿ ನಾರಾಯಣಸ್ವಾಮಿ

BANGALORE:

Font size:

ಶಾಂತಿ ಕದಡುವ ಪರಿಸ್ಥಿತಿಗೆ ಸರಕಾರ ಹೊಣೆ: ವಿಜಯೇಂದ್ರ ಓಲೈಕೆಯಿಂದ ಜನರಿಗೆ ತೊಂದರೆ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ನಾನು, ನಮ್ಮ ವಿಪಕ್ಷ ನಾಯಕರು, ನಮ್ಮ ಶಾಸಕ ಮಿತ್ರರ ತಂಡ ಇವತ್ತು ಮದ್ದೂರಿಗೆ ಭೇಟಿ ನೀಡಲಿದ್ದೇವೆ. ಅಲ್ಲಿನ ಪರಿಸ್ಥಿತಿ, ಸತ್ಯಾಸತ್ಯತೆ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಲ್ಲಿ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಲಿದ್ದೇವೆ. ರಾಜ್ಯದಲ್ಲಿ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಇದಕ್ಕೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳು ಗಣೇಶನ ಹಬ್ಬವನ್ನು ನೆಮ್ಮದಿಯಿಂದ ಆಚರಿಸಲು ಸಾಧ್ಯ ಇಲ್ಲವಾಗಿದೆ. ಕಾಂಗ್ರೆಸ್ ಸರಕಾರ ಯಾವ ಪರಿಸ್ಥಿತಿಗೆ ನಮ್ಮ ಹಿಂದೂಗಳನ್ನು ತಳ್ಳುತ್ತಿದೆ ಎಂದು ಆಕ್ಷೇಪಿಸಿದರು. ಹಬ್ಬ ಹರಿದಿನವನ್ನು ನೆಮ್ಮದಿಯಿಂದ ಆಚರಿಸಲು ಸಾಧ್ಯ ಇಲ್ಲದ ಸ್ಥಿತಿ ನಿರ್ಮಾಣವಾಗಲು ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣ ಎಂದು ಟೀಕಿಸಿದರು.
ನಿನ್ನೆ ದಿನ ಭದ್ರಾವತಿ ಶಾಸಕರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟಬೇಕು ಎಂಬುದು ಒಂದು ಕಡೆಯಾದರೆ, ತಡ ಯಾಕೆ ಮಾಡುತ್ತೀರಿ? ಈಗಲೇ ಮುಸ್ಲಿಂ ಆಗಿ ಮತಾಂತರ ಆಗಬಹುದಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರದ ಕುಮ್ಮಕ್ಕಿನಿಂದಲೇ ದುಷ್ಟ ಶಕ್ತಿಗಳಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ, ಹಿಂದೂ ಕಾರ್ಯಕರ್ತರ ಮೇಲೆ ಅಟ್ಟಹಾಸ ಮೆರೆಯುವಂತಾಗಿದೆ. ಇದಕ್ಕೆ ಪೂರಕ ವಾತಾವರಣವನ್ನು ರಾಜ್ಯ ಸರಕಾರ ನಿರ್ಮಾಣ ಮಾಡುತ್ತಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸರಿಯಾಗಿ ಇರಬೇಕೆಂಬ ಭಯ ಇಲ್ಲವೇನೋ ಎಂಬ ಆತಂಕ ಜನರಲ್ಲಿ ಮೂಡುತ್ತಿದೆ. ಧರ್ಮಸ್ಥಳದ ವಿಚಾರ, ಚಾಮುಂಡಿ ಬೆಟ್ಟ, ನಿನ್ನೆ ಮದ್ದೂರಿನ ಘಟನೆಗಳು ಇದನ್ನು ಸಾಬೀತುಪಡಿಸುವಂತಿದೆ. ಚಿತ್ರದುರ್ಗದಲ್ಲಿ ಡಿಜೆ, ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ತೀರ್ಮಾನ ಮಾಡಿದ್ದಾಗಿ ಮಾಹಿತಿ ಬರುತ್ತಿವೆ. ಭಜರಂಗದಳದ ಕಾರ್ಯಕರ್ತ ಚಿತ್ರದುರ್ಗಕ್ಕೆ ಬರಬಾರದೆಂದು ಗಡೀಪಾರು ಮಾಡಿದ ವಿಚಾರವೂ ಕೂಡ ಕೇಳಿಸುತ್ತಿದೆ ಎಂದರು.

ಓಲೈಕೆಯಿಂದ ಜನರಿಗೆ ತೊಂದರೆ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿಗಳು ಸರ್ವರನ್ನೂ ಜೊತೆಯಾಗಿ ಒಯ್ಯುವ ಕಾರ್ಯ ಮಾಡುತ್ತಿಲ್ಲ. ಗಣೇಶ ವಿಸರ್ಜನೆ ವೇಳೆ ಆಗುತ್ತಿರುವ ಅಹಿತಕರ ಘಟನೆಗಳಿಗೆ ಸರಕಾರವೇ ಹೊಣೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಒಂದು ಕಡೆ ವಾಲಿದ್ದರಿಂದ ಇವತ್ತು ಈ ಪರಿಸ್ಥಿತಿ ಬರುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸರಕಾರ ಹೀಗೆ ನಡೆದುಕೊಂಡರೆ ಸರಿಯೇ ಎಂದು ಕೇಳಿದರು.
ಮೊನ್ನೆ ಗಣೇಶ ವಿಸರ್ಜನೆ ಸಮಯದಲ್ಲಿ ಅಚಾತುರ್ಯದ ಘಟನೆಗಳು ನಡೆದಿವೆ. ಇದು ಕಾಂಗ್ರೆಸ್ ತನ್ನ ಮತಬ್ಯಾಂಕನ್ನು ಭದ್ರ ಪಡಿಸಿಕೊಳ್ಳಲು ಕೆಲವು ರೀತಿಯ ಓಲೈಕೆಗಳನ್ನು ಮಾಡಿದ್ದರಿಂದ ಇಡೀ ರಾಜ್ಯದಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಗಣಪತಿ ವಿಸರ್ಜನೆಗೆ ನೀವು ಅವಕಾಶವನ್ನೂ ಕೊಡುತ್ತಿಲ್ಲ. ಚಿತ್ರದುರ್ಗದಲ್ಲಿ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಎಸ್ಪಿ ಆದೇಶ ಹೊರಡಿಸಿದ್ದಾರೆ. ನಮ್ಮೂರಿನಲ್ಲಿ ನಮಗೆ ನೀವು ಅನುಮತಿ ಕೊಡಬೇಕೇ ಎಂದು ಕೇಳಿದರು.

Prev Post ಪಾಕಿಸ್ತಾನದಲ್ಲಿ ತಿನ್ನಲು ಕೂಳಿಲ್ಲ; ಇಲ್ಲಿ ʼಪಾಕಿಸ್ತಾನ್‌ ಜಿಂದಾಬಾದ್‌ʼ ಕೂಗುತ್ತಾರೆ
Next Post ಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ: ಡಿಸಿಎಂ ಡಿ.ಕೆ. ಶಿವಕುಮಾರ್ ತರಾಟೆ