* ನಮ್ಮ ದೇಶದ ಅನ್ನ ತಿಂದು ಪಾಕ್ ಪರ ಜೈಕಾರವೇ?; ಪ್ರಲ್ಹಾದ ಜೋಶಿ ಕಿಡಿ * ವಿಧಾನಸೌಧದಲ್ಲಿ ಜೈಕಾರ ಕೂಗಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ * ಕಾಂಗ್ರೆಸ್‌ನ ವೋಟ್ ಬ್ಯಾಂಕ್ ವರ್ತನೆಯೇ ಇದಕ್ಕೆಲ್ಲಾ ಪ್ರಚೋದನೆ * ಗಲಭೆಗಳಿಂದಾಗಿ ರಾಜ್ಯದ ಹಲವೆಡೆ ಗಣಪತಿ ಬಿಡಲಾಗುತ್ತಿಲ್ಲ * ಕರ್ನಾಟಕದ ಘಟನೆಗಳನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲಾಗಿದೆ
ನವದೆಹಲಿ: ʼಪಾಕಿಸ್ತಾನದಲ್ಲೇ ತಿನ್ನಲು ಕೂಳಿಲ್ಲ. ಅಂಥದ್ದರಲ್ಲಿ ಇವರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ. ಭಾರತದಲ್ಲಿದ್ದು, ನಮ್ಮ ದೇಶದ ಅನ್ನ ತಿಂದು ಪಾಕ್ ಪರ ಘೋಷಣೆ ಕೂಗುತ್ತಾರೆ. ಕಾಂಗ್ರೆಸ್‌ನ ತುಷ್ಟೀಕರಣವೇ ಇದಕ್ಕೆಲ್ಲ ಕಾರಣʼ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಭದ್ರಾವತಿಯಲ್ಲಿ ʼಪಾಕಿಸ್ತಾನ ಜಿಂದಾಬಾದ್ʼ ಘೋಷಣೆ ಕೂಗಿದ್ದರ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದವರ ಮೇಲೆ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಇದೇ ಅವರಿಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಚೋದನೆ ಬಿಜೆಪಿಯದ್ದಲ್ಲ; ಕಾಂಗ್ರೆಸ್‌ನದ್ದೇ: ಮದ್ದೂರು ಗಲಭೆಗೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಪ್ರಚೋದನೆ ಎಂದಿದ್ದಾರೆ. ಪ್ರಚೋದನೆ ಬಿಜೆಪಿಯದ್ದಲ್ಲ; ಕಾಂಗ್ರೆಸ್‌ನದ್ದೇ ಎಂದು ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು.
ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ನಡೆಯುತ್ತದೆ. ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಾರೆ. ಕರ್ನಾಟಕದಲ್ಲಿ ತಾವೇನೇ ಮಾಡಿದರೂ ನಡೆಯುತ್ತದೆ. ಎಂಬ ಮಾನಸೀಕತೆ ಆ ವರ್ಗದವರಲ್ಲಿದೆ. ಈ ಹಿಂದಿನ ಗಲಭೆ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
ಮಸೀದಿಯೊಳಗೆ ಕುಳಿತು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರುತ್ತಾರೆ ಎಂದರೆ ಏನರ್ಥ? ಏನೇ ಸಾಮಾಜ ವಿದ್ರೋಹಿ, ದೇಶ ವಿದ್ರೋಹಿ ಕೆಲಸ ಮಾಡಿದರೂ ಸರಿ ಕಾಂಗ್ರೆಸ್ ಸರ್ಕಾರ ನಮ್ಮನ್ನ ರಕ್ಷಣೆ ಮಾಡುತ್ತದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಬೆನ್ನಿಗಿದ್ದಾರೆ ಎಂಬ ಭಂಡ ಧೈರ್ಯ ಕಿಡಿಗೇಡಿಗಳದ್ದಾಗಿದೆ. ಹಾಗಾಗಿ ಇಂಥ ಕೃತ್ಯಗಳು ಘಟಿಸುತ್ತಿವೆ ಎಂದು ಪ್ರಲ್ಹಾದ ಜೋಶಿ ಹರಿ ಹಾಯ್ದರು.
ಕೊಪ್ಪಳದಲ್ಲಿ ಮಸೀದೆ ಮುಂದೆಯೇ ಗವಿಸಿದ್ದಪ್ಪ ಎಂಬುವರ ಕೊಲೆಯಾಗುತ್ತದೆ. ಚಿಕ್ಕಮಗಳೂರಲ್ಲಿ ಪ್ಯಾಲೆಸ್ತೇನ್ ಝೆಂಡಾ ಹಾರಿಸುತ್ತಾರೆ. ಈದ್ ಮಿಲಾದ್‌ಗೂ ಇದಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದ ಸಚಿವರು, ಕಳೆದ ವರ್ಷ ನಾಗಮಂಗಲದಲ್ಲಿ ಸಹ ಗಲಭೆ ನಡೆದಿತ್ತು. ಆಗಲೂ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಗಣೇಶ ವಿಸರ್ಜನೆಗೇ ಮುಂದಾಗುತ್ತಿಲ್ಲ: ಗಣೇಶ ಮೆರವಣಿಗೆ ಮೇಲೆ ರಾಜ್ಯದ ಅಲ್ಲಲ್ಲಿ ಕಲ್ಲು ತೂರಾಟ ಹಾಗೂ ಮೆರವಣಿಯಲ್ಲಿದ್ದ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವ ಕಾರಣ ಹಲವೆಡೆ ಇನ್ನೂ ಗಣೇಶ ವಿಸರ್ಜನೆ ಆಗಿಲ್ಲ. ಹಾವೇರಿಯಲ್ಲಿ 11 ದಿನಗಳಾದರೂ ಗಣಪತಿ ಬಿಟ್ಟಿಲ್ಲ ಎಂದು ಹೇಳಿದರು.
ಹಿಂದೂಗಳಿಗೊಂದು, ಮುಸ್ಲಿಂರಿಗೊಂದು ಕಾನೂನೇ:? ಧಾರವಾಡದ ನರೇಂದ್ರ ಗ್ರಾಮದಲ್ಲಿ ವಿನಾಕಾರಣ ಗಣೇಶ ಮೆರವಣಿಗೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಲಾಠಿ ಪ್ರಹಾರ ಮಾಡಿದ್ದಾರೆ. ಸರ್ಕಾರ ಇನ್ನೂ ಅಲ್ಲಿನ CPI ಅಮಾನತ್ತು ಮಾಡಿಲ್ಲ. ಮೆರವಣಿಗೆಯಲ್ಲಿ ಡಿಜೆ ಸೌಂಡ್ ಹಾಕುವ ಬಗ್ಗೆ ಆಕ್ಷೇಪಿಸುತ್ತಾರೆ. ದಿನ ಬೆಳಗ್ಗೆ ಮಸೀದಿಗಳಿಂದಲೂ ಪ್ರಾರ್ಥನೆ ಸೌಂಡ್ ಇರುತ್ತದೆ. ಹಾಗಾದರೆ ರಾಜ್ಯದಲ್ಲಿ ಮುಸ್ಲಿಂರಿಗೊಂದು ಕಾನೂನು, ಹಿಂದೂಗಳಿಗೆ ಇನ್ನೊಂದು ಕಾನೂನೇ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವರಿಗೆ ಮಾಹಿತಿ: ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿ ಘಟನೆಗಳ ಬಗ್ಗೆಯೂ ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲಾಗುತ್ತಿದೆ. ಅಮಿತ್ ಶಾ ಅವರೂ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಕಾಲದಲ್ಲಿ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು.
ಗಣೇಶ ಮೆರವಣಿಗೆ ನಡೆಸಬಾರದು ಎಂದರೆ ಹೇಗೆ? ರಸ್ತೆಯಲ್ಲಿ ಏಕೆ ಮಸೀದಿ ಕಟ್ಟಿದ್ದೀರಿ?ʼ ಮಸೀದಿ ಮೇಲಿನಿಂದ ಕಲ್ಲು ಹೊಡೆದದ್ದು ನಿಮ್ಮ ತಪ್ಪು. ನಿಮ್ಮನ್ನು ಮೊದಲು ಒದ್ದು ಒಳಗೆ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಬೇಕಿತ್ತು. ಆದರೆ, ಅದರ ಬದಲು ಹಿಂದೂಗಳ ಮೇಲೇ ಪ್ರಹಾರ ನಡೆಸುತ್ತಿದ್ದಾರೆ ಎಂದು ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ವೋಟ್ ಬ್ಯಾಂಕ್ ವರ್ತನೆಯೇ ಪ್ರಚೋದನೆ: ಗಲಭೆಗೆ ಬಿಜೆಪಿ ಏನು ಪ್ರಚೋದನೆ ನೀಡಿದೆ. ಸಿಎಂಗೆ ಬುದ್ಧಿಯಿಲ್ಲ. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿದೆಯೇ? ರಾಹುಲ್ ಗಾಂಧಿ ಸಹವಾಸ ಮಾಡಿ ಅವರಂತೆಯೇ ಆಡುತ್ತಿದ್ದಾರೆ. ಇವರ ವೋಟ್ ಬ್ಯಾಂಕ್ ವರ್ತನೆಯೇ ಇಂಥದ್ದಕ್ಕೆ ಪ್ರಚೋದನೆ ನೀಡುತ್ತಿದೆ. ಮುಸಲ್ಮಾನ್ ಗುಂಡಾಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಜೋಶಿ ಕಿಡಿ ಕಾರಿದರು.
ಜನ ತಕ್ಕ ಪಾಠ ಕಲಿಸುತ್ತಾರೆ: ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವನ್ನು ರಾಜ್ಯ ಮತ್ತು ದೇಶದ ಜನ ಗಮನಿಸುತ್ತಿದ್ದಾರೆ. ಜನರೇ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗೇ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಸ್ತಿತ್ವವೇ ʼಶೂನ್ಯʼವಾಗುತ್ತದೆ ಎಂದು ಎಚ್ಚರಿಸಿದರು.