ಧರ್ಮಸ್ಥಳ ಚಲೋ’ ಹಗುರವಾಗಿ ತೆಗೆದುಕೊಳ್ಳದಿರಿ ಸಿಬಿಐ ಅಥವಾ ಎನ್‍ಐಎ ಯಿಂದ ಷಡ್ಯಂತ್ರದ ತನಿಖೆ ಮಾಡಲು ವಿಜಯೇಂದ್ರ ಆಗ್ರಹ
ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ),ಸೆ. 1-ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ತಡೆದಿಲ್ಲ. ಕಾಂಗ್ರೆಸ್ ಸರಕಾರ ಕಿತ್ತೊಗೆಯುವವರೆಗೆ ಹಿಂದೂ ಕಾರ್ಯಕರ್ತರು ನೆಮ್ಮದಿಯಿಂದ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಎಚ್ಚರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ
ರಾಜ್ಯ ಬಿಜೆಪಿ ವತಿಯಿಂದ ನಡೆದ “ಧರ್ಮಸ್ಥಳ ಚಲೋ” ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದ ಭಕ್ತರ ಸಹನೆ ಕಟ್ಟೆ ಒಡೆದಿದೆ. ಆದರೆ, ಮುಖ್ಯಮಂತ್ರಿಗಳು ಎಸ್‍ಐಟಿ ತನಿಖೆ ಮಾತ್ರ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರದ ತನಿಖೆ ಸಿಬಿಐ ಅಥವಾ ಎನ್‍ಐಎ ಯಿಂದ ಆಗಲಿ ಎಂದು ಆಗ್ರಹಿಸಿದರು.
ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡದಿರಿ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಎಡಪಂಥೀಯರ ಷಡ್ಯಂತ್ರದ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಭಾರತ ಭೂಮಿಯನ್ನು ಗೌರವಿಸುವುದು ಕಾಂಗ್ರೆಸ್ಸಿಗರಿಗೆ ಅಕ್ಷಮ್ಯ ಎನಿಸಿದೆ. ಧರ್ಮಸ್ಥಳ ಚಲೋವನ್ನು ಹಗುರವಾಗಿ ತೆಗೆದುಕೊಳ್ಳದಿರಿ. ಕಾಂಗ್ರೆಸ್ ಸರಕಾರಕ್ಕೆ ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯ ಬುದ್ಧಿ ಕೊಡಲಿ ಎಂದು ನುಡಿದರು.
ಹಿಂದೂ ವಿರೋಧಿ ದುಷ್ಟ ಕಾಂಗ್ರೆಸ್ ಸರಕಾರವನ್ನು ಎಚ್ಚರಿಸುವ ಸಮಾವೇಶ ಇದು ಎಂದು ತಿಳಿಸಿದರು. ಇಲ್ಲಿ ಸ್ವಾಭಿಮಾನಿ ಹಿಂದೂ ಕಾರ್ಯಕರ್ತರು ಬಂದಿದ್ದಾರೆ. ಯಾರನ್ನೂ ದುಡ್ಡು ಕೊಟ್ಟು ಕರೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದೂ ಕಾರ್ಯಕರ್ತರಿಗೆ ಅಪಮಾನ ಮಾಡುವ ದುಷ್ಟ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದೆ ಎಂದು ಆರೋಪಿಸಿದರು.
ದುಷ್ಟ, ಹಿಂದೂ ವಿರೋಧಿ ಸರಕಾರಕ್ಕೆ ಪಾಠ ಕಲಿಸಲು ಈ ಕಾರ್ಯಕ್ರಮ ಎಂದು ವಿವರಿಸಿದರು. ಇದು ಜನವಿರೋಧಿ ಕಾಂಗ್ರೆಸ್ ಸರಕಾರ ಎಂದು ಆಕ್ಷೇಪಿಸಿದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಆದ ಬಳಿಕ ರಾಜ್ಯದ ಗೃಹ ಸಚಿವರು ಮಂಗಳೂರಿಗೆ ಬಂದಿದ್ದರು. ಆದರೆ, ಅವರನ್ನು ಸುಹಾಸ್ ಶೆಟ್ಟಿ ಮನೆಗೆ ಹೋಗಲು ಬಿಡಲಿಲ್ಲ ಎಂದು ಆರೋಪಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಒಂದು ತಿಂಗಳಿನಿಂದ ದಿನನಿತ್ಯ ಅಪಪ್ರಚಾರ ನಡೆದಿದೆ. ರಾಜ್ಯ ಸರಕಾರ ಎಸ್‍ಐಟಿ ಮೂಲಕ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ನಿರೀಕ್ಷೆ ನಮ್ಮದಾಗಿತ್ತು. ಅದು ಈಡೇರಿಲ್ಲ ಎಂದು ದೂರಿದರು. ಧರ್ಮಸ್ಥಳದ್ದು ಸಣ್ಣ ದೇವಸ್ಥಾನವಲ್ಲ; ಕೋಟ್ಯಂತರ ಭಕ್ತರಿರುವ ಪವಿತ್ರ ಕ್ಷೇತ್ರ ಇದು. ಅಯೋಗ್ಯನ ಹಿನ್ನೆಲೆ ಅರ್ಥ ಮಾಡದೆ ಎಸ್‍ಐಟಿ ರಚಿಸಿದ ರಾಜ್ಯ ಸರಕಾರಕ್ಕೆ ಒಳ್ಳೆಯದು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಪಪ್ರಚಾರ ಮಾಡುವವರನ್ನು 24 ಗಂಟೆಯಲ್ಲಿ ಒದ್ದು ಒಳಗೆ ಹಾಕಬೇಕಿತ್ತು. ಆ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿಲ್ಲ ಎಂದು ಟೀಕಿಸಿದರು. ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ಘೋಷಣೆ ಮಾಡಿ ಎಂದು ಅವರು ಆಗ್ರಹಿಸಿದರು. ಆ ಕುಟುಂಬಕ್ಕೆ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದ ಪರ- ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಮುಸುಕುಧಾರಿ ಕಾಂಗ್ರೆಸ್ಸಿಗರ ಸ್ನೇಹಿತ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಹಿಂದೂಗಳ ವಿರುದ್ಧ, ಅಲ್ಪಸಂಖ್ಯಾತರ ತುಷ್ಟೀಕರಣದ ಪರವಾಗಿದೆ. ಅದು ಅವರ ರಕ್ತದಲ್ಲಿ ಬಂದಿದೆ ಎಂದು ತಿಳಿಸಿದರು. ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನ ಕೇಳುವಂಥ ಪ್ರಶ್ನೆಯನ್ನು ಕಾಂಗ್ರೆಸ್ಸಿಗರು ಕೇಳುತ್ತಿದ್ದರು ಎಂದು ಆಕ್ಷೇಪಿಸಿದರು.
ಭಯೋತ್ಪಾದಕರ ದಾಳಿ ತಡೆಯಲಾರದ ಕಾಂಗ್ರೆಸ್ ಸರಕಾರ ದೇಶದಲ್ಲಿತ್ತು. ಈಗ ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಮುಗಿಸಿ ಬಂದ ಸರಕಾರ ದೇಶದಲ್ಲಿದೆ ಎಂದು ತಿಳಿಸಿದರು. ಭಾರತ ಸರಕಾರದ ತಾಕತ್ತಿದು ಎಂದು ಶ್ಲಾಘಿಸಿದರು. ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತ ಬಂದಿದೆ. ಅದರ ಭಾಗವಾಗಿಯೇ ಇಲ್ಲಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು. ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂಬ ಹೇಳಿಕೆಯನ್ನು ಖಂಡಿಸಿದರು. ಕಾಂಗ್ರೆಸ್ ನಾಟಕ- ಆಟ ಇನ್ನು ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಸಿದರು. ಸಮಾಜ ಒಂದಾಗಲಿ; ಅಣ್ಣಪ್ಪನ ಆಶೀರ್ವಾದ, ಮಂಜುನಾಥನ ಅನುಗ್ರಹ ಎಲ್ಲರಿಗೂ ಇದೆ ಎಂದು ನುಡಿದರು.
ಮತಬ್ಯಾಂಕಿಗಾಗಿ ಕಾಂಗ್ರೆಸ್ ಷಡ್ಯಂತ್ರ- ಸುಧಾಕರ್ ರೆಡ್ಡಿ
ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಅವರು ಮಾತನಾಡಿ, ಇದೊಂದು ಪುಣ್ಯಭೂಮಿ; ಸಿದ್ಧ ಭೂಮಿ. ಮತಬ್ಯಾಂಕಿಗಾಗಿ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ರಾಜ್ಯದಲ್ಲಿ ಭ್ರಷ್ಟ, ಹಗರಣಗಳ ಸರಕಾರ ಇದೆ ಎಂದು ಟೀಕಿಸಿದರು. ಎಡಪಂಥೀಯರು ಮಾಡುವ ಈ ಷಡ್ಯಂತ್ರಕ್ಕೆ ದೇವರು ತಕ್ಕ ಉತ್ತರ ಕೊಡುತ್ತಾನೆ ಎಂದು ಎಚ್ಚರಿಸಿದರು. ಪ್ರಧಾನಿ, ಅವರ ತಾಯಿಯವರ ಕುರಿತು ಅವಮಾನ ಮಾಡಿದ್ದನ್ನು ಇದೇವೇಳೆ ಖಂಡಿಸಿದರು. ಅವಮಾನ ಮಾಡುವವರು ಮಾತ್ರವಲ್ಲದೇ ತಮಿಳುನಾಡಿನ ಸಂಸದ ಶಶಿಕಾಂತ್ ಸೆಂಥಿಲ್ ಬಂಧಿಸಲು ಆಗ್ರಹಿಸಿದರು.
ಸಿದ್ದರಾಮಯ್ಯನವರ ಸುತ್ತ ನಗರ ನಕ್ಸಲ್ ಗ್ಯಾಂಗ್- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಧರ್ಮಸ್ಥಳದ ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲಗಳಿವೆ. ಬುರುಡೆ ಹಿಂದೆ ಕೇರಳ, ತಮಿಳುನಾಡು, ದೆಹಲಿಯ ಕೆಲವರಿದ್ದಾರೆ. ಎನ್‍ಐಎ ತನಿಖೆ ಮೂಲಕ ಈ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬಯಲಿಗೆ ತರಬೇಕು ಎಂದು ಒತ್ತಾಯಿಸಿದರು.
ಚಾಮುಂಡಿ ಹಿಂದೂಗಳದ್ದಲ್ಲ ಎನ್ನುವ ಶಿವಕುಮಾರ್, ಕಾಂಗ್ರೆಸ್ ಸರಕಾರದ ವಿರುದ್ಧ ಚಾಮುಂಡೇಶ್ವರಿ ಕಣ್ತೆರೆಯಲಿ ಎಂದು ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದರು. ಸಿದ್ದರಾಮಯ್ಯನವರ ಸುತ್ತ ನಗರ ನಕ್ಸಲ್ ಗ್ಯಾಂಗ್, ತಿಮರೋಡಿ ಗ್ಯಾಂಗ್ ಸೇರಿಕೊಂಡಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ಸಿನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ಸಿಗರು ಇಲ್ಲಿ ಬರುತ್ತಾರೆ ಎಂದು ಪ್ರಶ್ನಿಸಿದರು. ಇದು ಮತಾಂತರದ ಟೂಲ್ ಕಿಟ್. ಇದರ ವಿರುದ್ಧ ಹಿಂದೂಗಳು ಒಂದಾಗಬೇಕಿದೆ ಎಂದು ಮನವಿ ಮಾಡಿದರು.
ಬುರುಡೆ ಸರಕಾರದ ವಿರುದ್ಧ ಸೆಟೆದು ನಿಲ್ಲೋಣ-ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಬುರುಡೆ ಆಟ ಆಡಿದವರ ಬೆನ್ನಿಗೆ ನಿಂತ ರಾಜ್ಯದ ಬುರುಡೆ ಸರಕಾರದ ವಿರುದ್ಧ ನಾವೆಲ್ಲರೂ ಸೆಟೆದು ನಿಲ್ಲಬೇಕಾಗಿದೆ. ಇದು ಬುರುಡೆ ಸರಕಾರ ಎಂದು ಆಕ್ಷೇಪಿಸಿದರು. ಸರಕಾರವು ಬುರುಡೆ ಗ್ಯಾಂಗಿನ ಜೊತೆ ಸೇರಿದೆ. ಶ್ರೀ ಮಂಜುನಾಥ ಸ್ವಾಮಿಗೆ ಕಳಂಕ ತರುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ಸರಕಾರವು ಎಡಪಂಥೀಯರ ಜೊತೆ ಸೇರಿ ಷಡ್ಯಂತ್ರ ಮಾಡಿದೆ. ನಾವೆಲ್ಲರೂ ಶ್ರೀ ಮಂಜುನಾಥ ಸ್ವಾಮಿಯ ಭಕ್ತರು ಎಂದರು. ಸರಕಾರದ ಅಚಾತುರ್ಯ, ಅನಾಚಾರಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಕೋರ್ ಕಮಿಟಿ ಸದಸ್ಯರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಳಿನ್ ಕುಮಾರ್ ಕಟೀಲ್, ಬಿ. ಶ್ರೀರಾಮುಲು, ಸಿ.ಟಿ. ರವಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, “ಧರ್ಮಸ್ಥಳ ಚಲೋ” ಅಭಿಯಾನದ ಸಂಚಾಲಕ ಎಸ್.ಆರ್.ವಿಶ್ವನಾಥ್, ಸಹ ಸಂಚಾಲಕ ಪಿ.ಸಿ. ಮೋಹನ್, ಅಭಿಯಾನದ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಪಕ್ಷದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪಕ್ಷದ ಮುಖಂಡರು ಭಾಗವಹಿಸಿದ್ದರು.
ಶಾಸಕ ಹರೀಶ್ ಪೂಂಜ ಅವರು ಸ್ವಾಗತಿಸಿದರು. “ಧರ್ಮಸ್ಥಳ ಚಲೋ” ಅಭಿಯಾನದ ಸಂಚಾಲಕ ಎಸ್.ಆರ್.ವಿಶ್ವನಾಥ್ ಅವರು ಪ್ರಾಸ್ತಾವಿಕ ಮಾತನಾಡಿದರು. 800 ವರ್ಷಗಳ ಇತಿಹಾಸವುಳ್ಳ ಧರ್ಮಸ್ಥಳ ಶ್ರೀ ಕ್ಷೇತ್ರದ ವಿರುದ್ಧ ದುಷ್ಟಕೂಟ ಪ್ರಾರಂಭವಾಯಿತು. ಕ್ಷೇತ್ರದ ಹೆಸರು ಕೆಡಿಸುವ ಕುರಿತು ಸದನದಲ್ಲೂ ಪ್ರಸ್ತಾಪಿಸಿದ್ದೇವೆ ಎಂದರು. ಮಂಗಳೂರಿನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿ ರಾಜ್ಯದ ಸಂಸದರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳ ಮುಖ್ಯದ್ವಾರದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಪಾದಯಾತ್ರೆ ನಡೆಯಿತು.
ಧರ್ಮಸ್ಥಳ ಪ್ರಕರಣ ಬಿಜೆಪಿಯದ್ದೇ ಷಡ್ಯಂತ್ರ: ಡಿಸಿಎಂ. ಡಿ.ಕೆ.ಶಿವಕುಮಾರ್
ಪ್ರಸ್ತುತ ಎಸ್ ಐಟಿ ಮಾಡಿರುವ ತನಿಖೆ ಬಗ್ಗೆ ಅವರಿಗೆ (ಬಿಜೆಪಿ) ಸಮಾಧಾನ ಇಲ್ಲವೇ? ಬಿಜೆಪಿಯಲ್ಲಿ ಆಂತರಿಕವಾಗಿ ಎರಡು ಬಣಗಳು ಕಚ್ಚಾಡುತ್ತಿವೆ. ಇದೆಲ್ಲವೂ ಅವರದ್ದೇ ಷಡ್ಯಂತ್ರ. ಎಸ್ ಐಟಿ ರಚನೆ ಮಾಡಬೇಕು ಎಂದು ಹೇಳಿದವರು ಅವರೇ, ಇದನ್ನು ಸ್ವಾಗತ ಮಾಡಿದವರೂ ಅವರೇ. ಈಗ ನಾಟಕ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
ಎನ್ ಐಎ ತನಿಖೆಗೆ ಬಿಜೆಪಿಯವರು ಒತ್ತಾಯಿಸಿರುವ ಬಗ್ಗೆ ಕೇಳಿದಾಗ, “ಧರ್ಮಸ್ಥಳಕ್ಕೆ ನ್ಯಾಯ ಸಿಗಬೇಕು ಎಂದು ಬಿಜೆಪಿ ಎಂದೂ ಬಾಯಿಬಿಚ್ಚಲಿಲ್ಲ. ಬಿಜೆಪಿಯ ಮೂಲ ಕಾರ್ಯಕರ್ತರೇ ಧರ್ಮಸ್ಥಳದ ಮೇಲೆ ಕೆಟ್ಟ ಹೆಸರು ತರಬೇಕು ಎಂದು ಮಾಡಿರುವ ಕೆಲಸವಿದು” ಎಂದು ಹೇಳಿದರು.