ರಾಜ್ಯಕ್ಕೆ ಕೇಂದ್ರದ ಮತ್ತೊಂದು ಕೊಡುಗೆ; ʼಹುಬ್ಬಳ್ಳಿ-ಜೋಧಪುರ್‌ʼ ನೇರ ರೈಲು ಸಂಚಾರಕ್ಕೆ ಅಸ್ತು

New Delhi:

Font size:

* ಸಚಿವ ಪ್ರಲ್ಹಾದ ಜೋಶಿ ಒತ್ತಾಸೆಯಂತೆ ಹೊಸ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್‌ * ಸೆಪ್ಟೆಂಬರ್‌ ತಿಂಗಳಿಂದ ಪ್ರತಿವಾರ ವಿಶೇಷ ರೈಲು ಸಂಚಾರ; ಟಿಕೆಟ್‌ ಬುಕಿಂಗ್‌ ಆರಂಭ * ಮುಂದಿನ ದಿನಗಳಲ್ಲಿ ನಿತ್ಯ ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭರವಸೆ

ನವದೆಹಲಿ: ಕರ್ನಾಟಕಕ್ಕೆ ಅನೇಕ ರೈಲ್ವೆ ಯೋಜನೆಗಳ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಇದೀಗ ಗಣೇಶ ಹಬ್ಬದ ವೇಳೆ ಮತ್ತೊಂದು ವಿಶೇಷ ಕೊಡುಗೆ ಕೊಡಮಾಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆಯಂತೆ ʼಹುಬ್ಬಳ್ಳಿ-ಜೋಧಪುರ್‌ʼ ನೇರ ರೈಲು ಸಂಚಾರಕ್ಕೆ ಅಸ್ತು ಎಂದಿದೆ.

ʼಹುಬ್ಬಳ್ಳಿ-ಜೋಧಪುರ್‌ʼ ವಿಶೇಷ ರೈಲು ಸೆಪ್ಟೆಂಬರ್‌ ತಿಂಗಳಿನಿಂದಲೇ ಸಂಚಾರ ಪ್ರಾರಂಭಿಸಲಿದೆ. ಪ್ರಸ್ತುತ ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿಯತಕಾಲಿಕವಾಗಿ ಪರಿವರ್ತನೆಗೊಳಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭರವಸೆ ನೀಡಿದ್ದಾರೆಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಜೋಧಪುರ್‌ ನೂತನ ರೈಲು (ಸಂಖ್ಯೆ: 07359) ಹುಬ್ಬಳ್ಳಿಯಿಂದ 7:30ಕ್ಕೆ ತೆರಳಿ BGKT (ಭಗತ ಕಿ ಕೋಟಿ)ಗೆ ಬೆಳಗ್ಗೆ 5:30ಕ್ಕೆ ತಲುಪಲಿದೆ. ಸದ್ಯ ಪ್ರತಿ ರವಿವಾರ ಈ ರೈಲು ಸಂಚಾರವಿರಲಿದೆ. ಸೆಪ್ಟೆಂಬರ್‌ 28ರಿಂದ ಸಂಚಾರ ಆರಂಭಿಸಲಿದೆ.

ಟಿಕೆಟ್‌ ಬುಕಿಂಗ್‌ ಶುರು: ನೂತನವಾಗಿ ಸಂಚಾರ ಆರಂಭವಾಗುವ ಹುಬ್ಬಳ್ಳಿ-ಜೋಧಪುರ್‌ ರೈಲ್ವೆ ಸಂಚಾರಕ್ಕೆ ಪ್ರಯಾಣಿಕರಿಂದ ಆಗಲೇ ಟಿಕೆಟ್‌ ಬುಕಿಂಗ್‌ ಸಹ ಶುರುವಾಗಿದೆ. ರೈಲ್ವೆ ಇಲಾಖೆ ಸೆಪ್ಟೆಂಬರ್‌ 28, ಅಕ್ಟೋಬರ್‌ 5, ಅಕ್ಟೋಬರ್‌ 12, ಅಕ್ಟೋಬರ್‌ 1̧9 ಅಕ್ಟೋಬರ್‌ 2ರಂದು ಪ್ರಯಾಣಕ್ಕೆ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭಿಸಿದೆ.

ಹುಬ್ಬಳ್ಳಿಗರ ಬಹುದಿನದ ಬೇಡಿಕೆ ಈಡೇರಿಕೆ: ಹುಬ್ಬಳ್ಳಿ-ಜೋಧಪುರ್‌ ನೇರ ರೈಲು ಸಂಚಾರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದವರಿಂದ ಅನೇಕ ದಿನಗಳಿಂದಲೂ ಬಹು ಬೇಡಿಕೆಯಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ ಇದೀಗ ಸಾಕಾರಗೊಂಡಿದೆ.

ಸಚಿವ ಪ್ರಲ್ಹಾದ ಜೋಶಿ ಸಾಫಲ್ಯ: ಬೆಂಗಳೂರು-ಬೆಳಗಾವಿ ವಂದೇ ಭಾರತ್‌ ರೈಲು ಸೇರಿದಂತೆ ರಾಜ್ಯಕ್ಕೆ ವಿವಿಧ ರೈಲ್ವೆ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಸಚಿವ ಜೋಶಿ ಅವರು, ಇದೀಗ ಹುಬ್ಬಳ್ಳಿ-ಜೋಧಪುರ್‌ ವಿಶೇಷ ರೈಲು ಸಂಚಾರ ಆರಂಭಿಸುವಲ್ಲಿ ಸಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಗಮನ ಸೆಳೆದು ರೈಲು ಸಂಚಾರವನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದಾರೆ.

ಬಹುಜನರ ಬೇಡಿಕೆಯಂತೆ ಸಂಸದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿ-ಜೋಧಪುರ್‌ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಸಲ್ಲಿಸಿ, ನಿರಂತರವಾಗಿ ಗಮನ ಸೆಳೆಯುತ್ತಲೇ ಇದ್ದರು. ಜೋಶಿ ಅವರ ಒತ್ತಾಸೆ, ಮನವಿಗೆ ಸ್ಪಂದಿಸಿ ಸಚಿವ ಅಶ್ವಿನಿ ವೈಷ್ಣವ್‌ ಅವರು ಹುಬ್ಬಳ್ಳಿ-ಜೋಧ್‌ಪುರಕ್ಕೆ ನೇರ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ.

ರೈಲ್ವೆ ಸಚಿವರಿಗೆ ಜೋಶಿ ಧನ್ಯವಾದ: ತಮ್ಮ ಮನವಿ, ಒತ್ತಾಸೆಗೆ ಸ್ಪಂದಿಸಿ ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೆ ಯೋಜನೆ-ಸೌಲಭ್ಯಗಳಿಗೆ ವಿಶೇಷ ಆಸಕ್ತಿ ತೋರಿ ಅನುಮೋದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

Prev Post ಧರ್ಮಸ್ಥಳ ವಿಚಾರದಲ್ಲಿ ಸರಕಾರದ ನಡವಳಿಕೆ ಸರಿಯಿಲ್ಲ; ಮಂಜುನಾಥ ಸ್ವಾಮಿಯಿಂದ ತಕ್ಕ ಶಾಸ್ತಿ ಆಗುತ್ತದೆ ;ಹೆಚ್.ಡಿ. ಕುಮಾರಸ್ವಾಮಿ ಕಿಡಿ
Next Post ಒಸಾಕಾ, ನಗೋಯ ನಗರಗಳಿಗೆ ಬೆಂಗಳೂರಿನಿಂದ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ ಬಿ ಪಾಟೀಲ