ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Banglore:

Font size:

ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರವಾಗಿಲ್ಲವೇ? ಅಂತರ್ ಧರ್ಮೀಯ ದಂಪತಿಗಳಿಗೆ ಜನಿಸಿದ ಮಕ್ಕಳು ತಮ್ಮ ಇಚ್ಚೆಯನುಸಾರ ಧರ್ಮ ಪಾಲಿಸುತ್ತಾರೆ

ಬೆಂಗಳೂರು, ಆ.26:

"ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ ಎಂಬ ಬಿಜೆಪಿ ‌ನಾಯಕರ ವಿರೋಧದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು.

"ನಾವುಗಳು ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ಹೋಗುತ್ತೇವೆ. ನಾವು ಗುರುದ್ವಾರಕ್ಕೆ ಹೋಗೋದನ್ನ ಯಾರಾದರೂ ತಪ್ಪಿಸಿದ್ದಾರಾ? ಹಿಂದೂ ದೇವಸ್ಥಾನಗಳಿಗೆ ಅವರುಗಳು ಬರುವುದನ್ನು ನಾವು ವಿರೋಧಿಸಿದ್ದೇವೆಯೇ? ಯಾವುದೇ ಶ್ರದ್ದಾ ಕೇಂದ್ರಗಳಿಗೆ ಯಾರು ಬೇಕಾದರೂ ಹೋಗಿ ಬರಬಹುದು" ಎಂದರು.

ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರವಾಗಿಲ್ಲವೇ?

"ಎಷ್ಟೋ ಜನ ಹಿಂದೂಗಳು ಮುಸ್ಲಿಮರಾಗಿ, ಕ್ರಿಶ್ಚಿಯನ್ನರಾಗಿ ಹಾಗೂ ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರವಾಗಿಲ್ಲವೇ? ಮುಸ್ಲಿಮರು ಹಿಂದೂ ಧರ್ಮದ ಆಚರಣೆಗಳನ್ನು ಮಾಡುತ್ತಿಲ್ಲವೇ? ಅಯೋಧ್ಯೆ ರಾಮನಿಗೆ ಹಿಂದುಗಳು ಮಾತ್ರ ಬರಬೇಕು ಎಂದು ಏಕೆ ಬೋರ್ಡ್ ಹಾಕಿಲ್ಲ? ಬಿಜೆಪಿ ಸರ್ಕಾರ ಇದ್ದ ವೇಳೆ ಹಾಗೂ ಈಗ ಇಡೀ ದೇಶದಲ್ಲಿ ಹಜ್ ಕಮಿಟಿ, ಅಲ್ಪಸಂಖ್ಯಾತ ಇಲಾಖೆಗಳನ್ನು ಏಕೆ ರದ್ದು ಮಾಡಲಿಲ್ಲ? ಇದೆಲ್ಲವೂ ರಾಜಕೀಯ" ಎಂದು ತಿರುಗೇಟು ನೀಡಿದರು.

"ನಮ್ಮದು ಜಾತ್ಯಾತೀತ ರಾಷ್ಟ್ರ. ನಮ್ಮ ಸಂವಿಧಾನದ ಮೂಲಕ ಎಲ್ಲರಿಗೂ ಅವಕಾಶ, ಸ್ವಾತಂತ್ರ್ಯ ಕಲ್ಪಿಸಲಾಗಿದೆ.‌ ಎಲ್ಲರಿಗೂ ಸಂವಿಧಾನದ ರಕ್ಷಣೆಯಿದೆ. ಎಲ್ಲರಿಗೂ ಅವರವರ ನಂಬಿಕೆ ಮೇಲೆ ವಿಶ್ವಾಸವಿದೆ. ಮುಸ್ಲಿಂ ಅಥವಾ ಕ್ರಿಶ್ಚಿಯನ್ ಹೆಣ್ಣು, ಹಿಂದು ಅಥವಾ ಇತರೇ ಧರ್ಮದ ಗಂಡಿಗೆ ಜನಿಸಿದ ಮಕ್ಕಳು ತಮಗೆ ಬೇಕಾದ್ದನ್ನು ಅನುಸರಿಸುತ್ತಾರೆ" ಎಂದರು.

Prev Post ಕೃಷ್ಣ ಮೇಲ್ದಂಡೆ ಯೋಜನೆ ಹಂತ- 3; ಸರಕಾರದ ಬದ್ಧತೆ ದೃಢ;ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್
Next Post ಎಸ್ಐಟಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ: ಎಂ ಬಿ ಪಾಟೀಲ