ತುಂಗಭದ್ರಾ ಡ್ಯಾಮಿನ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಬೇಕಾದ ಪರಿಸ್ಥಿತಿ ಇದೆ;ವಿಜಯೇಂದ್ರ
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶನಿವಾರ ರಾತ್ರಿ ಹೇಳಿಕೆ ಕೊಟ್ಟು ಯಾವುದೇ ಕಾರಣಕ್ಕೂ ಎಸ್‍ಐಟಿ ರಚಿಸುವುದಿಲ್ಲ ಎಂದಿದ್ದರು. ಮರುದಿನವೇ ಅಂದರೆ, ಭಾನುವಾರ ಬೆಳಿಗ್ಗೆ ಎಸ್‍ಐಟಿ ರಚನೆಯ ಹೇಳಿಕೆ ಕೊಟ್ಟಿದ್ದರು. ರಾತ್ರೋರಾತ್ರಿ ಮುಖ್ಯಮಂತ್ರಿಗಳ ಅಭಿಪ್ರಾಯ ಬದಲಾಗಲು ಅವರ ಮೇಲೆ ಒತ್ತಡ ಹೇರಿದ್ದು ಯಾರು ಎಂದು ಸದನದಲ್ಲೇ ಪ್ರಶ್ನಿಸಿದ್ದೆ ಎಂದು ಗಮನಕ್ಕೆ ತಂದರು. ಒತ್ತಡ ಹೇರಿದ ಸಂಘಟನೆಗಳು ಯಾವುವು ಎಂಬ ಕುರಿತು ಸದನದ ಗಮನಕ್ಕೆ ತರಬೇಕು; ಮುಖ್ಯಮಂತ್ರಿಗಳು ಉತ್ತರಿಸಬೇಕೆಂದು ಕೋರಿದ್ದಾಗಿ ತಿಳಿಸಿದರು.
ಮುಸುಕುಧಾರಿಯು ಧರ್ಮಸ್ಥಳದ ವಿಷಯದಲ್ಲಿ ಸಾಕಷ್ಟು ಪ್ರಚಾರ ತೆಗೆದುಕೊಂಡು, ರಾಜ್ಯ ಸರಕಾರ ಎಸ್‍ಐಟಿ ಸ್ಥಾಪಿಸುವ ಮಟ್ಟಕ್ಕೂ ಹೋಗಿದ್ದ. ಕಳೆದ 2-3 ವಾರಗಳಿಂದ ತನಿಖೆಯ ಜೊತೆಗೇ ಧರ್ಮಸ್ಥಳ, ಶ್ರೀ ಮಂಜುನಾಥೇಶ್ವರನ ಕ್ಷೇತ್ರದ ಕುರಿತು ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ರಾಜ್ಯ- ರಾಷ್ಟ್ರೀಯ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು ಎಂದು ವಿವರಿಸಿದರು.
ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ...
ಮುಸುಕುಧಾರಿ ಈಗ ಯಾರೋ ಗುಂಪಿನ ಒತ್ತಡದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದು ಗೊತ್ತಾಗಿದೆ. ಎಸ್‍ಐಟಿ ರಚಿಸಿದ ಬಳಿಕ ಆಗಿರುವ ಅಪಪ್ರಚಾರದ ಕಾರಣ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅವರಿಗೆ ನೋವಾಗಿದೆ ಎಂದು ವಿಜಯೇಂದ್ರ ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಕ್ರಮ ಹಿಟ್ ಆಂಡ್ ರನ್ ಆಗಬಾರದು. ದೂರುದಾರ, ದೂರುದಾರನ ಹಿಂದಿರುವ ಪ್ರಭಾವಿ ವ್ಯಕ್ತಿಗಳೇ ಇರಬಹುದು; ಎಡಪಂಥೀಯ ಸಂಘಟನೆಗಳೇ ಇರಬಹುದು- ಇವರೆಲ್ಲರ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಅವರು ಮತ್ತೊಮ್ಮೆ ಆಗ್ರಹಿಸಿದರು.
ಪ್ರಚಾರಕರು, ಆರೆಸ್ಸೆಸ್‍ಗೆ ಅಗೌರವದಿಂದ ನೋವು
ಕೆಲವು ವ್ಯಕ್ತಿಗಳು ಸಂಘಟನೆ ಮಾಡಿಕೊಂಡು ಧರ್ಮಸ್ಥಳದ ವಿರೋಧವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಸಂತೋಷ್ ಜೀ ಅವರ ಬಗ್ಗೆ ಕೀಳು ಮಟ್ಟದ ಮಾತನಾಡಿದ್ದಾರೆ; ಆರೋಪ ಮಾಡಿದ್ದಾರೆ. ಆರೆಸ್ಸೆಸ್, ಪ್ರಚಾರಕರ ಬಗ್ಗೆ ಆಗಲೀ, ಸಂತೋಷ್ ಜೀ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು, ನನ್ನನ್ನೂ ಒಳಗೊಂಡಂತೆ ರಾಜ್ಯದ ಅನೇಕ ಸ್ವಯಂಸೇವಕರಿಗೆ ನೋವಾಗಿದೆ. ಪ್ರಚಾರಕರು, ಆರೆಸ್ಸೆಸ್‍ಗೆ ಅಗೌರವ ತರುವುದನ್ನು ನೋಡಿಕೊಂಡು ರಾಜ್ಯ ಸರಕಾರ ಸುಮ್ಮನೇ ಕೂರಬಾರದು ಎಂದು ಅವರು ತಿಳಿಸಿದರು. ರಾಜ್ಯ ಸರಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳÀಬೇಕು. ಧರ್ಮಸ್ಥಳದ ವಿಚಾರದಲ್ಲಿ ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಬೆಂಗಳೂರು: . ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ. ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರ ಇದೆ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿಕೆ ಕೊಟ್ಟಿದ್ದಾರೆ. ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇನ್ನೂ ಯಾವಾಗ ಸಮಯ ಬರಲಿದೆ? ರಾಜ್ಯದ ಜನರು- ಕೋಟಿ, ಕೋಟಿ ಭಕ್ತಾದಿಗಳು ಇವತ್ತು ಆತಂಕದಲ್ಲಿದ್ದಾರೆ. ಧರ್ಮಸ್ಥಳದಲ್ಲಿ ಯಾವ ರೀತಿ ತನಿಖೆ ನಡೆಯುತ್ತಿದೆ. ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೆಲ್ಲ ವಿಷಯದಲ್ಲಿ ಜನರು ನಿದ್ದೆ ಮಾಡದಂಥ ಸ್ಥಿತಿ ಇದೆ ಎಂದು ವಿವರಿಸಿದರು. ಇನ್ನೂ ಕೂಡ ಡಿ.ಕೆ.ಶಿವಕುಮಾರ್ ಅವರಿಗೆ ಸಮಯ ಬಂದಿಲ್ಲ ಎಂದು ಕಾಣುತ್ತದೆ ಎಂದು ಹೇಳಿದರು.
ನಿನ್ನೆ ದಿನ ನಮ್ಮ ಪಕ್ಷದ ಸಂಸದರು, ಎಲ್ಲ ಹಿರಿಯ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆಗೂಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದುಕೊಂಡಿದ್ದೇವೆ. ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿ ಮಾಡಿದ್ದೇವೆ ಎಂದು ವಿವರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಆ ಅಪಪ್ರಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಯಾಕೆ ಎಚ್ಚತ್ತುಕೊಂಡಿಲ್ಲ? ರಾಜ್ಯ ಸರಕಾರಕ್ಕೆ ಅಪಪ್ರಚಾರಕ್ಕೆ ಕಡಿವಾಣ ಹಾಕುವ ಇಚ್ಛೆ ಇರಲಿಲ್ಲವೇ? ಯಾವ ಕಾರಣಕ್ಕೆ ಇದು ಆಗಿಲ್ಲ ಎಂಬ ಕುರಿತು ಗೃಹ ಸಚಿವರು ಇವತ್ತು ತಮ್ಮ ಉತ್ತರದಲ್ಲಿ ತಿಳಿಸಬೇಕು ಎಂದು ಒತ್ತಾಯಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಸದನದಲ್ಲಿ ಏನು ಉತ್ತರ ನೀಡುತ್ತಾರೆಂದು ನೋಡಲಿದ್ದೇವೆ ಎಂದು ನುಡಿದರು.
ರಾಜ್ಯ ಸರಕಾರವು ತುಮಕೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪದೇಪದೇ ಎಫ್‍ಐಆರ್ ದಾಖಲಿಸುತ್ತದೆ. ಮೈಸೂರಿನಲ್ಲೂ ಪೋಸ್ಟ್ ವಿರುದ್ಧ ಕಾರ್ಯಕರ್ತನ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಿದೆ. ರಾಜ್ಯ ಸರಕಾರವು ಹಿಂದೂ ಕಾರ್ಯಕರ್ತರ ಬಗ್ಗೆ ತೋರುವ ಆಸಕ್ತಿಯನ್ನು ಧರ್ಮಸ್ಥಳದ ವಿಷಯದಲ್ಲಿ ಅಪಪ್ರಚಾರದ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ತೋರಿಲ್ಲ ಎಂದು ಟೀಕಿಸಿದರು.
ಹಣಕಾಸಿನ ಪರಿಸ್ಥಿತಿ- ದುಸ್ಥಿತಿ
ನುಡಿದಂತೆ ನಡೆಯುವ ರಾಜ್ಯ ಸರಕಾರದಡಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ಕೊಡುವ ಯೋಗ್ಯತೆಯೂ ಈ ಸರಕಾರಕ್ಕೆ ಇಲ್ಲ ಎಂದು ವಿಜಯೇಂದ್ರ ಅವರು ಟೀಕಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ 4.85 ಕೋಟಿ ಮೊತ್ತವನ್ನು ಕೊಡದೇ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ಬಿಡುಗಡೆ ಮಾಡದಂಥ ದುಸ್ಥಿತಿಗೆ ಬಂದು ನಿಂತಿದೆ ಎಂದು ಆಕ್ಷೇಪಿಸಿದರು.
ತುಂಗಭದ್ರಾ ಅಣೆಕಟ್ಟಿನ ವಿಚಾರದಲ್ಲಿ ಅಲ್ಲಿನ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಕಳೆದ ಆಗಸ್ಟ್‍ನಲ್ಲಿ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದಿತ್ತು. ರೈತರೂ ಆತಂಕದಲ್ಲಿ ಇದ್ದರು. ಸಾವಿರಾರು ಕ್ಯುಸೆಕ್ ನೀರು ಹರಿದು ವ್ಯರ್ಥವಾಗಿದೆ. ಅದಕ್ಕೆ ಖಾಯಂ ಪರಿಹಾರ ನೀಡಿಲ್ಲ. ಇವರು ತಡ ಮಾಡಿದ್ದು, ಒತ್ತಡ ಇತರ ಗೇಟ್‍ಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ ಎಂದು ಗಮನ ಸೆಳೆದರು.
ಮತ್ತೊಂದು ಕಡೆ ಕೊಪ್ಪಳ, ರಾಯಚೂರು, ಬಳ್ಳಾರಿ ಮೊದಲಾದ ಜಿಲ್ಲೆಗಳ ರೈತರು ಪ್ರತಿವರ್ಷ 2 ಬೆಳೆ ಬೆಳೆಯುತ್ತಿದ್ದರು. ಆದರೆ, ಸಚಿವರ ಮತ್ತು ರಾಜ್ಯ ಸರಕಾರದ ಬೇಜವಾಬ್ದಾರಿತನದಿಂದ ರಾಜ್ಯ ಸರಕಾರ ಅಥವಾ ಸಂಬಂಧಿತ ಸಚಿವರು, ಟಿ.ಬಿ. ನೀರಾವರಿ ಮಂಡಳಿಯಲ್ಲಿ ಚರ್ಚೆ ಮಾಡಿ ಒತ್ತಡ ಹಾಕದ ಪರಿಣಾಮವಾಗಿ ಈ ಬಾರಿ ರೈತರು ಒಂದೇ ಬೆಳೆಗೆ ತೃಪ್ತಿ ಪಡುವ ಸಂದರ್ಭ ಬಂದಿದೆ ಎಂದು ಟೀಕಿಸಿದರು.