ಅಟಲ್ ಜೀ ಅವರದು ಶ್ರೇಷ್ಠ ವ್ಯಕ್ತಿತ್ವ: ಬಿ.ಎಲ್.ಸಂತೋಷ
ಬೆಂಗಳೂರು: ಸಚಿವರಾಗಬೇಕೆಂಬ ಹಪಾಹಪಿ ಇಲ್ಲದ ಶ್ರೇಷ್ಠ ವ್ಯಕ್ತಿತ್ವ ಅಟಲ್ ಜೀ ಅವರದಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ತಿಳಿಸಿದ್ದಾರೆ.
ನಗರದ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ದಲ್ಲಿ ಇಂದು ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ “ಅಟಲ್ ಜೀ ಅವರ ಜನ್ಮ ಶತಮಾನೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಂಬಿರುವ ವಿಚಾರ, ಸಂಘಟನೆ, ಕಾರ್ಯಪದ್ಧತಿಯನ್ನು ಅವರು ಬದ್ಧತೆಯಿಂದ ನಿರ್ವಹಿಸಿದ್ದರು ಎಂದು ವಿವರಿಸಿದರು.
ಬಿಜೆಪಿ 2 ಸಂಸದರನ್ನು ಹೊಂದಿದ್ದ ಸ್ಥಿತಿಯೂ ಇತ್ತು. ಈಗ ದೇಶದಲ್ಲಿ 22 ರಾಜ್ಯಗಳಲ್ಲಿ ಎನ್‍ಡಿಎ ಜೊತೆಗೂಡಿ ಅಧಿಕಾರ ಪಡೆದಿದೆ. ಅಟಲ್‍ಜೀ ಅವರ ಬುನಾದಿಯಿಂದ ಪಕ್ಷ ದೃಢವಾಗುತ್ತ ಸಾಗಿದೆ ಎಂದು ವಿಶ್ಲೇಷಿಸಿದರು. ಅವರು ನಮ್ಮ ಪಕ್ಷಕ್ಕೆ ಮೌಲ್ಯ, ವಿಚಾರಗಳ ಅಡಿಪಾಯವನ್ನು ಹಾಕಿದ್ದರು ಎಂದು ವಿವರಿಸಿದರು.
ಇದು ಬೈಟ್‍ಗಳ ಯುಗ; ಆದರೆ, ಯಾವಾಗ ಅಗತ್ಯವಿದೆಯೋ ಆಗ ಮಾತ್ರ ಮಾತನಾಡುವುದು ಅಟಲ್‍ಜೀ ಅವರಿಗೆ ಕರಗತ ಆಗಿತ್ತು. ಲೋಕಸಭಾ ಸದಸ್ಯ, ರಾಜ್ಯಸಭಾ ಸದಸ್ಯರಾಗಿ ಅವರು 1951ರಿಂದ 2018ರವರೆಗೆ ಹಲವು ದಶಕಗಳ ಕಾಲ ಕೆಲಸ ಮಾಡಿದ್ದರು ಎಂದು ನೆನಪಿಸಿದರು. ಚೌಕಟ್ಟುಗಳ ಜೊತೆ ಬಿಜೆಪಿ ಬೆಳೆಯುತ್ತ ಸಾಗಿದೆ ಎಂದು ವಿಶ್ಲೇಷಿಸಿದರು. ರಾಜ್ಯದಲ್ಲೂ ಕಮಲ ಚಿಹ್ನೆಯು ಅರಳಲಿದೆ ಎಂದು ವಿಶ್ವಾಸದಿಂದ ತಿಳಿಸಿದರು.
297 ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಅವರದೇ 4 ಜನರ ಹೆಸರು
ವಿಮಾನನಿಲ್ದಾಣ ಇಂದಿರಾಗಾಂಧಿ, ಕ್ರಾಸ್ ರೋಡ್ ರಾಜೀವ್ ಗಾಂಧಿ, ಗಲ್ಲಿ ಜವಾಹರಲಾಲ್ ನೆಹರೂ, ಅಲ್ಲಿನ ಶೌಚಾಲಯಕ್ಕೆ ಅವರದೇ ಕುಟುಂಬದ ಇನ್ಯಾರದೋ ಹೆಸರು; ಇಂದಿರಾ ನಗರ, ರಾಜೀವ್ ನಗರ, 297 ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಅವರದೇ 4 ಜನರ ಹೆಸರು ಇಡಲಾಗಿದೆ. 100ಕ್ಕಿಂತ ಜಾಸ್ತಿ ಯೋಜನೆಗಳಿಗೆ ಅವರದೇ ಹೆಸರು ಸ್ಮರಿಸಬೇಕಿದೆ. ದೇವರ ಹೆಸರು ಇಟ್ಟಿದ್ದರೆ ಸ್ಮರಣೆ ಮಾಡಿದರೆ ನಮಗೆ ಪುಣ್ಯವಾದರೂ ಬರುತ್ತಿತ್ತೇನೋ ಎಂದು ಬಿ.ಎಲ್. ಸಂತೋಷ ಅವರು ತಿಳಿಸಿದರು. ಆದರೆ, ಅಟಲ್‍ಜೀ, ಮೋದಿಯವರ ಹೆಸರಿನಲ್ಲಿ ಎಲ್ಲೂ ಯೋಜನೆಗಳಿಲ್ಲ; ನಮ್ಮ ಪ್ರಧಾನಿಗಳು, ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಹಾಕಿಕೊಂಡಿಲ್ಲ ಎಂದು ತಿಳಿಸಿದರು.
ಅಟಲ್‍ಜೀ ಅವರ ನೀತಿಗಳು ಡಿಜಿಟಲ್ ಯುಗಕ್ಕೆ ಕಾರಣವಾದವು. ಗ್ರಾಮ ಸಡಕ್ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದರು. ಪೋಖ್ರಾಣ್ ಅಣ್ವಸ್ತ್ರ ಸ್ಫೋಟ ಸಣ್ಣಪುಟ್ಟ ಘಟನೆಯಲ್ಲ ಎಂದು ತಿಳಿಸಿದರು. ಅಸ್ಥಿರ ಸರಕಾರಗಳ ಯುಗದ ಬಳಿಕ ಸಮ್ಮಿಶ್ರ ಸರಕಾರದ ನೇತೃತ್ವವನ್ನು ಅಟಲ್‍ಜೀ ಅವರು ವಹಿಸಿದ್ದರು ಎಂದರು. ಪಾಕಿಸ್ತಾನವನ್ನು ಮಣಿಸುವ ಕಾರ್ಯ ಕೂಡ ಅವರಿಂದ ಆಗಿತ್ತು ಎಂದು ತಿಳಿಸಿದರು.
ಸ್ವಾತಂತ್ರ್ಯಪೂರ್ವ- ಸ್ವಾತಂತ್ರ್ಯಾನಂತರದ ಕಾಂಗ್ರೆಸ್ಸಿಗೆ ಯಾವುದೇ ಸಂಬಂಧ ಇಲ್ಲ. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ಸಿನಲ್ಲಿ ಎಲ್ಲರೂ ಇದ್ದರು. ಸ್ವಾತಂತ್ರ್ಯಾನಂತರದ ಕಾಂಗ್ರೆಸ್ಸಿನಲ್ಲಿ ಆ ಪಕ್ಷದಲ್ಲಿ ರಾಜಕಾರಣ ಮಾಡಲು ಆಸಕ್ತಿ ಉಳ್ಳವರು ಮಾತ್ರ ಉಳಿದಿದ್ದರು. ಆಗ ಜನರದು ಏಕಮುಖ ಶ್ರದ್ಧೆ ಇತ್ತು ಎಂದು ನುಡಿದರು.
ಅಟಲ್‍ಜೀ ಅವರ ಪುಣ್ಯತಿಥಿ ದಿನದಂದೇ ಈ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕ ರಾಜ್ಯ ಸಮಿತಿಯು ದೊಡ್ಡ ಕೆಲಸ ಮಾಡುತ್ತಿದೆ. ಕರ್ನಾಟಕ ಘಟಕವು ಉತ್ತಮ ಕಾರ್ಯ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು. ದೊಡ್ಡದಾದ ಸಮಿತಿಯು ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಸ್ಮರಣ ಸಂಚಿಕೆ ಮೂಲಕ ಶಬ್ದಾಂಜಲಿ ಮಾಡಿದ ಸಂಪಾದಕೀಯ ಸಮಿತಿಗೆ ಅಭಿನಂದನೆಗಳು ಎಂದರು.
ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಅಂಧೇರಿ ಮೇ ಏಕ್ ಚಿಂಗಾರಿ ಅಟಲ್ ಬಿಹಾರಿ ಎಂಬ ಕವನವನ್ನು ಉಲ್ಲೇಖಿಸಿದರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಕರ್ನಾಟಕದ ನಡುವೆ ಒಂದು ಅವಿನಾಭಾವ ಸಂಬಂಧ ಇತ್ತು. ಅದೇರೀತಿ ವಾಜಪೇಯಿ ಅವರೊಂದಿಗೆ ಯಡಿಯೂರಪ್ಪ, ಅನಂತಕುಮಾರ್, ಕಾರ್ಯಕರ್ತರ ನಡುವಿನ ಸಂಬಂಧವೂ ಅನನ್ಯ ಎಂದು ಬಣ್ಣಿಸಿದರು.
ಅಟಲ್‍ಜೀ ಅವರು ಪಕ್ಷಕ್ಕೆ ಪ್ರೇರಣಾಶಕ್ತಿಯಾಗಿದ್ದರು. ಯಡಿಯೂರಪ್ಪ ಅವರೊಂದಿಗೆ ಒಡನಾಟ, ಅಟಲ್ ಅವರ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುತ್ತಿದ್ದುದನ್ನು ವಿವರಿಸಿದರು. ಭಾಷೆಯ ಸಮಸ್ಯೆ ಇದ್ದರೂ ಆತ್ಮೀಯತೆಯಿಂದ ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದರು ಎಂದು ತಿಳಿಸಿದರು.
ಅಟಲ್‍ಜೀ, ಅಡ್ವಾಣಿಜೀ ಅವರ ದೂರದೃಷ್ಟಿಯ ಮಾತುಗಳು ದೇಶಾದ್ಯಂತ ಮಹತ್ವದಿಂದ ಅನುಷ್ಠಾನಕ್ಕೆ ಬರುತ್ತಿತ್ತು. 28 ಪಕ್ಷಗಳ ಜೊತೆಗೂಡಿ 5 ವರ್ಷ ಸುಭದ್ರ ಸರಕಾರ ನೀಡಿದ ಕೀರ್ತಿ ಅಂದಿನ ಪ್ರಧಾನಿ ಅಟಲ್‍ಜೀ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು. ಇವತ್ತು ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ, ಅನಂತಕುಮಾರ್, ವಿ.ಎಸ್.ಆಚಾರ್ಯ ಸೇರಿದಂತೆ ಅನೇಕ ಹಿರಿಯರನ್ನು ನೆನಪಿಸಬೇಕಾಗುತ್ತದೆ. ರಾಜ್ಯದಲ್ಲಿ ಸದೃಢವಾಗಿ ಪಕ್ಷ ಬೆಳೆಯಲು ಅಟಲ್‍ಜೀ ಅವರು ಪ್ರೇರಕರು ಎಂದು ನುಡಿದರು.
ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಪುನರ್ ಪ್ರತಿಷ್ಠೆ ಮಾಡಲು, ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರಲು ನಾವು ನೀವೆಲ್ಲರೂ ಮತ್ತೆ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ತಿಳಿಸಿದರು. ಅಟಲ್ ಜೀ, ಮೋದಿಜೀ ಮತ್ತಿತರ ನಾಯಕರ ಪ್ರೇರಣೆ ನಮಗಿರಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ಅಟಲ್‍ಜೀ ಅವರದು ಅದ್ಭುತ ವ್ಯಕ್ತಿತ್ವ ಎಂದು ತಿಳಿಸಿದರು. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ಭಾಷ್ಯ ಬರೆದವರು; ಅಧಿಕಾರವನ್ನು ಕಡೆಗಣಿಸಿ ತತ್ವ- ಸಿದ್ಧಾಂತಕ್ಕೆ ಅಟಲ್‍ಜೀ ಅವರು ಒತ್ತು ಕೊಟ್ಟವರು ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಮಾತನಾಡಿ, ಅಟಲ್‍ಜೀ ಅವರ ಪ್ರಾಮಾಣಿಕತೆ, ಬದ್ಧತೆ, ಸರಳ ವ್ಯಕ್ತಿತ್ವ, ಕವಿ ಹೃದಯದ ಕುರಿತು ತಿಳಿಸಿದರು. ಪಕ್ಷಕ್ಕೆ ಅವರ ಕೊಡುಗೆ, ಮಾರ್ಗದರ್ಶನವನ್ನೂ ವಿವರಿಸಿದರು.
ಅಟಲ್ ಜಿ ಜನ್ಮ ಶತಮಾನೋತ್ಸವ ಸಮಿತಿಯ ರಾಜ್ಯ ಪ್ರಮುಖ ಶಿವಯೋಗಿಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿದರು. ಅಟಲ್ ಜಿ ಜನ್ಮ ಶತಮಾನೋತ್ಸವ ಸಮಿತಿಯ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.