ಸಾಕ್ರಾ-ಐಕೆಒಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ
ಬೆಂಗಳೂರು: ಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸೆ ಕೊಡಲಿರುವ ʻಸಾಕ್ರಾ-ಐಕೆಒಸಿ ,ಮಲ್ಟಿ ಸ್ಪೆಷಾಲಿಟಿ ಹೈಟೆಕ್ ಆಸ್ಪತ್ರೆಯನ್ನು ಇಲ್ಲಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ನೂತನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು ಮೂಳೆ ಮುರಿತ, ಮೂಳೆ ಜೋಡಣೆ, ಕೀಲಿನ ಸಮಸ್ಯೆ, ಕ್ರೀಡಾಪಟುಗಳಿಗೆ ಆಗುವ ಗಾಯಗಳು ಮತ್ತು ಬೆನ್ನುಮೂಳೆಗೆ ಸಂಬಂಧಿಸಿದ ಚಿಕಿತ್ಸೆಗಳು ಪರಿಣತ ವೈದ್ಯರಿಂದ ಸಿಗಲಿವೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಇದು ಉಪಯೋಗಿಯಾಗಿ ಪರಿಣಮಿಸಲಿದೆ ಎಂದಿದ್ದಾರೆ.
ಒಂದು ಕುಟುಂಬವು ನೆಮ್ಮದಿಯಿಂದ ಇರಬೇಕಾದರೆ ಅಲ್ಲಿರುವ ಪ್ರತಿಯೊಬ್ಬರೂ ಆರೋಗ್ಯದಿಂದ ನಳನಳಿಸುತ್ತಿರಬೇಕು. ಆಗಮಾತ್ರ ಉತ್ಪಾದಕತೆ, ಯಶಸ್ಸು, ಸಾಧನೆ, ರಚನಾತ್ಮಕ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ ಆಸ್ಪತ್ರೆಯ ವೈದ್ಯರು, ತಾಂತ್ರಿಕ ಸಿಬ್ಬಂದಿ, ಶುಶ್ರೂಷಕಿಯರು ಸಕಾರಾತ್ಮಕ ಚಿಕಿತ್ಸೆ ಮತ್ತು ಸ್ಪಂದಗಳನ್ನು ತೋರಿ, ವೈದ್ಯಕೀಯ ಧರ್ಮವನ್ನು ಎತ್ತಿ ಹಿಡಿಯುತ್ತಾರೆ ಎಂದು ಅವರು ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಐಕೆಒಸಿ ಮುಖ್ಯಸ್ಥ ಡಾ.ಪಿ ಚಂದ್ರಶೇಖರ್, ಸಾಕ್ರಾ ವ್ಯವಸ್ಥಾಪಕ ನಿರ್ದೇಶಕ ಯೂಚಿ ನಗಾನೋ, ಲವಕೇಶ್ ಕುಮಾರ್ ಫಾಸು, ಕೀ ಇಯಾಮ, ಗುರುಪ್ರಸಾದ್ ಪೂಂಜಾ, ಡಾ.ರುಚಿ ಸಿಂಗ್ ಉಪಸ್ಥಿತರಿದ್ದರು.