ಕೈಗೆಟುಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ; ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಆರಂಭ
From Jayaram Udupi
ಮಂಗಳೂರು: ಮಣಿಪಾಲದ ನಿರ್ಮಾತೃ ಡಾ. ಮಾಧವ ಪೈ ಅವರ ಕನಸಾದ ಸರ್ವರಿಗೂ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಲಭಿಸಬೇಕು ಎಂಬ ಉದ್ದೇಶದಿಂದ ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆರಂಭಿಸಿರುವ ರಿಯಾಯತಿ ದರದಲ್ಲಿ ಚಿಕಿತ್ಸೆ ಒದಗಿಸುವ ಮಣಿಪಾಲ ಆರೋಗ್ಯ ಕಾರ್ಡಿನ ನೋಂದಣೆ ಆರಂಭಗೊಂಡಿದೆ.
ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭವಾಗಿದೆ ಎಂದು ಎಂದು ಮಾಹೆ ಸಹಕುಲಪತಿ ಡಾ. ದಿಲೀಪ್ ಜಿ. ನಾಯಕ್ ಮಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಮೀಣ ಭಾರತಕ್ಕೆ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ಧೈಯವನ್ನು ಹೊಂದಿದ್ದ ಮಣಿಪಾಲ್ ಸಂಸ್ಥೆಗಳ ಸಂಸ್ಥಾಪಕ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ನಾಯಕತ್ವವನ್ನು ಸ್ಮರಿಸಿದ ಡಾ. ದಿಲೀಪ್ "2000 ನೇ ವರ್ಷದಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. 25 ವರ್ಷಗಳಲ್ಲಿ ಲಕ್ಷಾಂತರ ರೋಗಿಗಳಿಗೆ ವರದಾನವಾಗಿದೆ ಎಂದರು.
2000 ನೇ ಇಸವಿಯಲ್ಲಿ, 10500 ಸದಸ್ಯರು ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯಡಿ ನೋಂದಣಿ ಮಾಡಿದ್ದರು. ಕಳೆದ ಹಣಕಾಸು ವರ್ಷದಲ್ಲಿ 3.68 ಲಕ್ಷ ಕುಟುಂಬಗಳು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಎಂದು ಅವರು ತಿಳಿಸಿದರು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಉನ್ನಿಕೃಷ್ಣನ್ ಮಾತನಾಡಿ "ಈ ಯೋಜನೆಯಡಿಯಲ್ಲಿ - ಒಂದು ವರ್ಷ ಮತ್ತು ಎರಡು ವರ್ಷಗಳ ಸದಸ್ಯತ್ವ ಆಯ್ಕೆಗಳನ್ನು ನೀಡುತ್ತಿದ್ದೇವೆ. ಈ ಅರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ್ ಸಮೂಹ ಅಸ್ಪತ್ರೆಗಳಾದ ಕೆ.ಎಂ.ಸಿ. ಅತ್ತಾವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ. , ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಹಾಗೂ ಮಣಿಪಾಲ್ ಆಸ್ಪತ್ರೆ ಗೋವಾಗಳಲ್ಲಿ ರಿಯಾಯಿತಿ ದರಗಳಲ್ಲಿ ಸೌಲಭ್ಯಗಳನ್ನು ಪಡೆಯಬಹುದು. ಈ ಕಾರ್ಡ್ ಸೌಲಭ್ಯಗಳು ದಂತ ಚಿಕಿತ್ಸೆಗೂ ಅನ್ವಯವಾಗಲಿದ್ದು ಕಾರ್ಡುದಾರರು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಮತ್ತು ಮಣಿಪಾಲದಲ್ಲಿ ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ಪಡೆಯಬಹುದು" ಎಂದರು.
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ, ಕಟೀಲು ಇಲ್ಲಿನ ಮುಖ್ಯ ಆಡಳಿತಾಧಿಕಾರಿ ಡಾ. ಶಿವಾನಂದ ಪ್ರಭು ಕಾರ್ಡಿನ ಸದಸ್ಯತ್ವದ ಬಗ್ಗೆ ಮಾತನಾಡಿ, 'ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ರೂ. 350/-ಕೌಟಂಬಿಕ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ ಮತ್ತು 25 ವರ್ಷದ ಒಳಗಿನ ಮದುವೆಯಾಗದ ಮಕ್ಕಳಿಗೆ ರೂ. 700/- ಮತ್ತು ಕುಟುಂಬ ಪ್ಲಸ್ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ. 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರೂ. 900/- ಆಗಿರುತ್ತದೆ. ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರೂ. 600/-, ಕುಟುಂಬಕ್ಕೆ ರೂ. 950/-ಮತ್ತು ಕೌಟುಂಬಿಕ ಪ್ಲಸ್ ಯೋಜನೆಗೆ ರೂ. 1100/- ಆಗಿರುತ್ತದೆ ಎಂದು ವಿವರಿಸಿದರು.
ಡಾ.ದೀಪಕ್ ಮಡಿ, ರಾಕೇಶ್ ಉಪಸ್ಥಿತರಿದ್ದರು.








