ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಡೆಗಣಿಸುತ್ತಿದೆ!- ಬಿಜೆಪಿ ಆರೋಪ

Mangalore:

Font size:

ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಡೆಗಣಿಸುತ್ತಿದೆ!- ಬಿಜೆಪಿ ಆರೋಪ From : Jayaram Udupi

ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಡೆಗಣಿಸುತ್ತಿದೆ!- ಬಿಜೆಪಿ ಆರೋಪ

ಮಂಗಳೂರು: ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಾರಂಭದಿಂದಲೇ ಕಡೆಗಣಿಸುತ್ತ ಬಂದಿದೆ. ಇದರ ಮುಂದುವರಿದ ಭಾಗವಾಗಿ ಮರಳು, ಕೆಂಪು ಕಲ್ಲು ಬಂದ್ ಮಾಡಿ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು, ಕೆಂಪು ಕಲ್ಲು ಸಿಗದೇ ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಸಾವಿರಾರು ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಸಮಸ್ಯೆಯ ಕುರಿತು ಮನದಟ್ಟು ಮಾಡಿದೆ. ಅವರು ತಕ್ಷಣವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಯಾವುದೇ ಆಸಕ್ತಿ ಇದ್ದಂತಿಲ್ಲ. ಶುಕ್ರವಾರ ಜಿಲ್ಲೆಯಲ್ಲಿ ಇಡೀ ದಿನ ಇದ್ದ ಸಚಿವರು ಕಾಟಾಚಾರಕ್ಕೂ ನಮ್ಮನ್ನು ಕರೆದು ಸಮಸ್ಯೆ ಆಲಿಸಲಿಲ್ಲ. ಅವರಿಗೆ ಜನಸಾಮಾನ್ಯರ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇದ್ದಂತಿಲ್ಲ“ ಎಂದರು.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಮಾತಾಡಿ, ”ದಕ್ಷಿಣ ಕನ್ನಡ ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದೆ. ಯಾವುದಕ್ಕೆ ಪ್ರತಿಭಟನೆ ನಡೆಸಬೇಕು ಎಂದೇ ತಿಳಿಯುತ್ತಿಲ್ಲ. ದಿನಕ್ಕೊಂದು ಸಮಸ್ಯೆಯನ್ನು ರಾಜ್ಯ ಸರಕಾರ ಸೃಷ್ಟಿಸುತ್ತ ಬಂದಿದೆ. ಸಮಸ್ಯೆ ಪರಿಹಾರವಾಗದೆ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ“ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರತಾಪ್ ಸಿಂಹ ನಾಯಕ್, ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Prev Post ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ ;ನಾಲ್ವರು ಕಾರ್ಮಿಕರು ತೀವ್ರ ಅಸ್ವಸ್ಥ
Next Post *ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ವರ್ತನೆಯ ವಿರುದ್ಧ ಬಿಜೆಪಿಯ ಪ್ರತಿ-ಪ್ರತಿಭಟನೆ* - *ವಿಜಯೇಂದ್ರ*