12ರಂದು ಸಾಧಕ ಯುವಜನರಿಗೆ ಕಲಾಂ ಯುವ ಸ್ಟಾರ್ಟಪ್ ಪ್ರಶಸ್ತಿ ಪ್ರದಾನ: ಜಮಾಲ್ ಸಿದ್ದಿಕಿ
ಬೆಂಗಳೂರು: ರಾಷ್ಟ್ರೀಯ ಯುವ ದಿನವಾದ ಆಗಸ್ಟ್ 12ರಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಾಧಕ ಯುವಜನರನ್ನು ಸನ್ಮಾನಿಸಲಿದ್ದೇವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಪ್ರಕಟಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯೂತ್ ಸ್ಟಾರ್ಟ್ ಅಪ್ ಅವಾರ್ಡ್” ಕುರಿತು ಮಾಹಿತಿ ನೀಡಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಿಜೆಪಿ ಮತ್ತು ದೇಶದ ನಾಗರಿಕರ ಮನಸ್ಸಿನಲ್ಲಿ ಈಗಲೂ ಪ್ರಸ್ತುತರಾಗಿದ್ದಾರೆ ಎಂದು ತಿಳಿಸಿದರು. ಭಾರತದ ಭವಿಷ್ಯವೆನಿಸಿದ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಕಲಾಂ ಅವರು ತಮ್ಮನ್ನು ತೊಡಗಿಸಿಕೊಂಡವರು ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಕಲಾಂ ಅವರನ್ನು ಮರೆತಿವೆ. ಕಲಾಂ ಅವರು ರಾಷ್ಟ್ರವಾದಿಯಾಗಿದ್ದರು. ಅವರು ದೇಶ ಜೋಡಣೆಯ, ವಿಕಸಿತ ಭಾರತದ ಮಾತನಾಡುತ್ತಿದ್ದರು. ಕಾಂಗ್ರೆಸ್ ಮತ್ತಿತರ ಪಕ್ಷಗಳು ದೇಶ ವಿಭಜಕರನ್ನು ನಾಯಕÀರಾಗಿ ನೋಡುತ್ತವೆ ಎಂದು ಟೀಕಿಸಿದರು. ದೇಶದ ನಾಯಕರನ್ನು, ತ್ಯಾಗ, ಬಲಿದಾನ, ತಪಸ್ಸಿನಂತೆ ತಮ್ಮನ್ನು ತೊಡಗಿಸಿಕೊಂಡ ಮುಖಂಡರನ್ನು ಯುವಜನರಿಗೆ ಪರಿಚಯಿಸುವ ಸಂಕಲ್ಪ ಬಿಜೆಪಿಯದು ಎಂದು ತಿಳಿಸಿದರು.
ಬಡವರ ಕುಟುಂಬದಲ್ಲಿ ಹುಟ್ಟಿದ ಡಾ.ಕಲಾಂ ಅವರು ದೇಶದ ಅತ್ಯುಚ್ಛ ಪದವಿಯಾದ ಮಾನ್ಯ ರಾಷ್ಟ್ರಪತಿಗಳ ಹುದ್ದೆಯನ್ನು ನಿಭಾಯಿಸಿದ್ದರು. ಅವರ ನೆನಪಿನ ಉದ್ದೇಶದಿಂದ ದೇಶಾದ್ಯಂತ ‘ಕಲಾಂ ಕೋ ಸಲಾಂ’ ಕಾರ್ಯಕ್ರಮದ ಮೂಲಕ ದೇಶದ ಸಾಧಕ ಯುವ ಉದ್ಯಮಿಗಳಿಗೆ ಗೌರವ ನೀಡುತ್ತಿದ್ದೇವೆ. ಇದಕ್ಕಾಗಿ ಆನ್‍ಲೈನ್ ಫಾರ್ಮ್ ನೀಡಿದ್ದೇವೆ ಎಂದು ಹೇಳಿದರು. ಬಿಜೆಪಿ ಮತ್ತು ಮೋರ್ಚಾದ ವೆಬ್‍ಸೈಟಿನಲ್ಲಿ ಈ ಫಾರ್ಮ್ ಲಭ್ಯವಿದೆ ಎಂದರು.
ಮೋದಿಜೀ ಅವರು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಗಡ್ಕರಿಯವರು ಈಚೆಗೆ ರಸ್ತೆ ಉದ್ಘಾಟನೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಮುಖ್ಯಮಂತ್ರಿಯವರು ಭಾಗವಹಿಸಿಲ್ಲ; ಇದು ಬೇಸರದ ಸಂಗತಿ ಎಂದು ತಿಳಿಸಿದರು. ಹಿಂದೆ ಜಾತಿ ಗಣತಿ ಮಾಡಿದ್ದರೂ ಕಾಂಗ್ರೆಸ್ ಅದನ್ನು ಜಾರಿ ಮಾಡಿಲ್ಲ; ಇದೀಗ ಮತ್ತೆ ಹೊಸ ಜಾತಿ ಗಣತಿಗೆ ಮುಂದಾಗಿದೆ. ಅದನ್ನೂ ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಟೀಕಿಸಿದರು.
ಕ್ರಿಶ್ಚಿಯನ್, ಮುಸಲ್ಮಾನರಲ್ಲೂ ಜಾತಿಗಳಿವೆ. ಅವನ್ನು ಗಣತಿ ವೇಳೆ ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ವಕ್ಫ್ ಹಗರಣವೂ ಇಲ್ಲಿ ನಡೆದಿತ್ತು ಎಂದ ಅವರು, ವಕ್ಫ್ ಸಂಬಂಧ ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಜಾರಿ ಮಾಡಿಲ್ಲ; ಅದರ ವಿರುದ್ಧ ಹೈಕೋರ್ಟಿನ ಮೆಟ್ಟಿಲೇರಿದ್ದರು ಎಂದು ದೂರಿದರು. ಕರ್ನಾಟಕದ ಕಾಂಗ್ರೆಸ್‍ನ ಈ ನೀತಿಯನ್ನು ಜನರು ಕ್ಷಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇಂದು ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಯೂತ್ ಸ್ಟಾರ್ಟ್ ಅಪ್ ಅವಾರ್ಡ್ ರಾಜ್ಯ ಮಟ್ಟದ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿತ್ತು. ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಅನಿಲ್ ಥಾಮಸ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಜೈನ್, ಅಲ್ಪಸಂಖ್ಯಾತ ಮೋರ್ಚಾ ಸಾಮಾಜಿಕ ಜಾಲತಾಣ ರಾಷ್ಟ್ರೀಯ ಸಹ-ಸಂಚಾಲಕ ಜಸ್ವಂತ್ ಜೈನ್, ಅಲ್ಪಸಂಖ್ಯಾತ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಅಜಿಮ್, ಸೈಯದ್ ಸಲಾಂ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುಕ್ತಾರ್ ಪಠಾಣ್, ಕ್ರೈಸ್ತರ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಶಾಂತಕುಮಾರ್ ಕೆನಡಿ, ಜೂರಿ ಕಮಿಟಿ ಸದಸ್ಯ ಶೇಖ್ ತಾಲಿಬ್, ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.