ಒಂದೇ ದಿನ ಮೈಸೂರು ಜಿಲ್ಲೆಯ 2578 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿದ ಸಿಎಂ

Mysore:

Font size:

ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿ.ಎಂ ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ: ಸಿ.ಎಂ ನಮ್ಮ ಗ್ಯಾರಂಟಿಗಳನ್ನು ಕದ್ದು ಬಿಹಾರದಲ್ಲಿ ಘೋಷಣೆ ಮಾಡಿರುವ ಬಿಜೆಪಿಗೆ ನಾಚಿಕೆ ಕೂಡ ಆಗಲ್ಲ: ಸಿ.ಎಂ

ಮೈಸೂರು ಜು 19:
ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ಸರ್ಕರದ ಎರಡು ವರ್ಷಗಳ ಸಾಧನಾ ಸಮಾವೇಶ ಮತ್ತು 2578 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದ ಜನರಿಗೆ ಸರಣಿ ಸುಳ್ಳುಗಳ ಮೂಲಕ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನವರು ಒಂದೇ ವೇದಿಕೆಗೆ ಬರಲಿ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ನಡೆಸೋಣ. ನಾನೂ ಬರುತ್ತೇನೆ ಎಂದು ಸವಾಲು ಹಾಕಿದರು.

ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಯವರಿಗೆ ಇವತ್ತಿನ ಅಭಿವೃದ್ಧಿ ಕಾರ್ಯಗಳೇ ಉತ್ತರ. ಬಿಜೆಪಿ-ಜೆಡಿಎಸ್ ನವರಿಗೆ ಈ ಮಟ್ಟಿನ ಮತ್ಸರ ಇರಬಾರದು. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅತೀ ಮತ್ಸರ ಪಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಪ್ರತೀ ಬಾರಿ ಹಿಂಬಗಿಲಿನಿಂದ ಅಧಿಕಾರ ಹಿಡಿಯುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ

ಜೆಡಿಎಸ್‌ನ ಕುಮಾರಸ್ವಾಮಿ ಸ್ವಂತ ಶಕ್ತಿ ಮೇಲೆ ಯಾವತ್ತೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ರಾಜ್ಯದ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಉಳಿಸಿಕೊಳ್ಳದ ಇವರಿಗೆ ಇವರಿಗೆ ನಮ್ಮ ಸರ್ಕಾರದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದರು.

ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಪರವಾಗಿ ಇಲ್ಲ. ರಾಜ್ಯದ ಜನರ ಪರವಾಗಿ ಇಲ್ಲ. ಪ್ರತಿ ವರ್ಷ ನಾವು ರಾಜ್ಯದಿಂದ ಕೇಂದ್ರಕ್ಕೆ ಕೊಡುವ ತೆರಿಗೆಯಲ್ಲಿ ರಾಜ್ಯಕ್ಕೆ ಬರುತ್ತಿರುವುದು ಅತ್ಯಲ್ಪ. ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಎಂದು ಮೋದಿಯವರಿಗೆ ಕೇಳುವ ಧೈರ್ಯ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಸೇರಿ ಸಂಸದರಾದ ಬೊಮ್ಮಾಯಿ ಸೇರಿ ಯಾರಿಗೂ ಇಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಬಿಜೆಪಿ-ಜೆಡಿಎಸ್ ರಾಜ್ಯದ ಜನಕ್ಕೆ ದ್ರೋಹ ಎಸಗಿದ್ದಾರೆ ಎಂದರು.

ನಾವು ಐದು ಗ್ಯಾರಂಟಿಗಳಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷ ಕೋಟಿಯಷ್ಟು ಹಣ ಕೊಟ್ಟಿದ್ದೇವೆ. ನಾವು ಜಾರಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೇವಲ ಕಾಂಗ್ರೆಸ್ ನವರಿಗೆ ಕೊಟ್ಟಿದ್ದಲ್ಲ. ಬಿಜೆಪಿ-ಜೆಡಿಎಸ್ ಬೆಂಬಲಿಗರು, ಮತದಾರರಿಗೂ ಪ್ರತೀ ದಿನ, ಪ್ರತೀ ತಿಂಗಳೂ ಸರ್ಕಾರದ ನೆರವು ದೊರೆಯುತ್ತಿದೆ. ಮೊನ್ನೆಯಷ್ಟೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸಿದ 500 ನೇ ಕೋಟಿಯ ಮಹಿಳೆಗೆ ನಾನೇ ಉಚಿತ ಟಿಕೆಟ್ ಕೊಟ್ಟಿದ್ದೇನೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

ಜವಾಹರಲಾಲ್ ನೆಹರೂ ಅವಧಿಯಿಂದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವಧಿಯವರೆಗೂ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಇಡೀ ದೇಶ ಮರೆಯಲು ಸಾಧ್ಯವಿಲ್ಲ ಎಂದರು.

ಆಹಾರ ಭದ್ರತಾ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ನರೇಗಾ ಎಲ್ಲವೂ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ ಅವಧಿಯಲ್ಲಿ ಇವರು ಏನು ಮಾಡಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.

ಮನುವಾದಿಗಳು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಯ ವಿರೋಧಿಗಳು, ಸಂವಿಧಾನದ ವಿರೋಧಿಗಳು. ಆದ್ದರಿಂದ ಸಾಮಾಜಿಕ ನ್ಯಾಯದ ಪರವಾಗಿರುವ ನಮ್ಮನ್ನು ಟೀಕಿಸುತ್ತಿದ್ದಾರೆ.

ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ದೇಶದ ಜನ ಮತ್ತು ಕಾಂಗ್ರೆಸ್ ಪಕ್ಷ ಬಿಜೆಪಿ ಮತ್ತು ಮನುವಾದಿಗಳ ಷಡ್ಯಂತ್ರವನ್ನು ಸೋಲಿಸುತ್ತಾರೆ ಎಂದರು.

ಪ್ರತಿಭೆ ಯಾರ ಸೊತ್ತೂ ಅಲ್ಲ: ಅವಕಾಶ ಸಿಕ್ಕರೆ ಪ್ರತಿಭೆ ಹೊರಗೆ ಬರತ್ತೆ: ಸಿ.ಎಂ.ಸಿದ್ದರಾಮಯ್ಯ

ಮಕ್ಕಳ ಪ್ರತಿಭೆ ರೂಪುಗೊಳ್ಳಲು ಶಿಕ್ಷಕರಷ್ಟೇ ಪೋಷಕರ ಶ್ರಮ ಕೂಡ ಅಗತ್ಯ: ಸಿ.ಎಂ

ಸರ್ಕಾರಿ ನೌಕರರು ಜಾತಿ-ಧರ್ಮ‌ ಮಾಡೋಕೆ ಹೋಗಬಾರದು: ಸಿ.ಎಂ ಕರೆ

OPS ಜಾರಿ ಬಗ್ಗೆ ಸಮಿತಿ ವರದಿ ಬಂದ ಬಳಿಕ‌ ನಿಮ್ಮ ಜೊತೆ ಚರ್ಚಿಸಿ ತೀರ್ಮಾನ: ಸಿಎಂ ಭರವಸೆ

ಮೈಸೂರು ಜು 19: ಸರ್ಕಾರಿ ನೌಕರರು ಜಾತಿ-ಧರ್ಮ‌ ಮಾಡೋಕೆ ಹೋಗಬಾರದು.
ಪ್ರತಿಭೆ ಯಾರ ಸೊತ್ತೂ ಅಲ್ಲ. ಅವಕಾಶ ಸಿಕ್ಕರೆ ಪ್ರತಿಭೆ ಹೊರಗೆ ಬರತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಪ್ರತಿಭೆ ರೂಪುಗೊಳ್ಳಲು ಶಿಕ್ಷಕರಷ್ಟೇ ಪೋಷಕರ ಶ್ರಮ ಕೂಡ ಅಗತ್ಯ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಯಾರನ್ನೂ ದೂರಲು ಸಾಧ್ಯವಿಲ್ಲ ಎಂದರು.

ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ನಿಮ್ಮ ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ.

ಅಪ್ಪ ಅಮ್ಮ ಖರ್ಚು ಮಾಡಿದ ಹಣದಲ್ಲಿ ನೀವೆಲ್ಲಾ ಸರ್ಕಾರಿ ನೌಕರರಾಗಲು ಸಾಧ್ಯವಿಲ್ಲ. ನಾವು ಶಾಸಕರಾಗಲು, ಮಂತ್ರಿಗಳಾಗಲು ಸಾಧ್ಯವಿಲ್ಲ. ಜನರ ತೆರಿಗೆ ಹಣದಲ್ಲಿ ನಾವೆಲ್ಲಾ ಬದುಕಿದ್ದೇವೆ. ಹೀಗಾಗಿ ಸಮಾಜದ, ಎಲ್ಲಾ ಜಾತಿ, ಧರ್ಮದವರ ಋಣವೂ ನಮ್ಮ ಮೇಲಿದೆ. ಈ ಋಣ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ನಮಗೆ ವಿಶ್ವ ಮಾನವರಾಗುವ ಅವಕಾಶ ಇದೆ. ಅಲ್ಪ ಮಾನವರಾಗುವುದು ಬೇಡ. ಹುಟ್ಟು ಆಕಸ್ಮಿಕ. ಸಾವು ಗ್ಯಾರಂಟಿ. ಆದ್ದರಿಂದ ನಾವು ಸಮಾಜದ ಋಣ ತೀರಿಸಿ ಬದುಕನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಶಿಕ್ಷಕರು, ಸೈನಿಕರು, ರೈತರು ನಮ್ಮ ಬದುಕನ್ನು ಹಸನು ಮಾಡಿದ್ದಾರೆ. ಈ ಮೂವರ ಋಣ ತೀರಿಸುವ ಕೆಲಸ ನಾವು ಮಾಡಬೇಕಿದೆ ಎಂದರು.

ಮಕ್ಕಳಲ್ಲೂ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜಮುಖಿ ಪ್ರಜೆಗಳನ್ನು ರೂಪಿಸಿ ಎಂದರು.

ಸರ್ಕಾರದ ಕೆಲಸ ಜನರಿಗೆ ತಲುಪಿಸಿ

ಏಳನೇ ವೇತನ‌ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಮಾಡಿದ್ದೇನೆ. ಒಪಿಎಸ್ ಜಾರಿ ಕುರಿತಾಗಿ ಸಮಿತಿ ವರದಿ ಕೊಟ್ಟ ಬಳಿಕ‌ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಆರೋಗ್ಯ ಸಂಜೀವಿನಿ ಬಗ್ಗೆಯೂ ಸೂಕ್ತ ತೀರ್ಮಾನ ಆಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ದವಿದೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸದಾ ತೆರೆದ ಮನಸ್ಸಿನಿಂದ ಇರುತ್ತೇನೆ. ಹಾಗೆಯೇ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು , ಈ ಜವಾಬ್ದಾರಿಯನ್ನೂ ನೀವು ಪರಿಣಾಮಕಾರಿಯಾಗಿ ಜನರಿಗೆ, ಫಲಾನುಭವಿಗಳಿಗೆ ತಲುಪಿಸಿ ಎಂದರು.

Prev Post ತುಳು ಅಕಾಡೆಮಿಯಿಂದ ತುಳು ನೋಟ್ ಪುಸ್ತಕ ಬಿಡುಗಡೆ
Next Post ದಾವಣಗೆರೆ ಜಿಲ್ಲೆಯಲ್ಲಿ ಆರ್.ಟಿ.ಐ ದ್ವಿತೀಯ ಮೇಲ್ಮನವಿ 559 ಪ್ರಕರಣಗಳು, ಮಾಹಿತಿ ಹಕ್ಕು ಆಯೋಗದಿಂದ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್‍ನಲ್ಲಿ ಅದಾಲತ್