ತುಳು ಅಕಾಡೆಮಿಯಿಂದ ತುಳು ನೋಟ್ ಪುಸ್ತಕ ಬಿಡುಗಡೆ
From Jayaram Udupi
ಮಂಗಳೂರು : ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಸಲುವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹೊರ ತಂದ ತುಳು ನೋಟ್ ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಶನಿವಾರ ಬಿಡುಗಡೆ ಮಾಡಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸರಕಾರಿ, ಅನುದಾನಿತ , ಖಾಸಗಿ, ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸುಮಾರು 2,000 ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ತುಳು ಪಠ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ ಪಠ್ಯಕ್ರಮ(ಸ್ಟೇಟ್ ಸಿಲೆಬಸ್) ಪ್ರಕಾರ ತುಳು ಪಠ್ಯ ಪುಸ್ತಕವನ್ನು ಸರಕಾರವೇ ಮುದ್ರಿಸಿ ಒದಗಿಸುತ್ತಿದೆ.
ಶಾಲೆಗಳಲ್ಲಿ ತುಳು ಭಾಷಾ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಇದೇ ಪ್ರಥಮ ಬಾರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಬರೆಯುವ ಪುಸ್ತಕವನ್ನು ಉಚಿತವಾಗಿ ಒದಗಿಸುವ ಸಲುವಾಗಿ ಹೊರ ತಂದಿದೆ.
ವಿದ್ಯಾರ್ಥಿಗಳಿಗೆ ತುಳು ಬದುಕಿನ ಆಸ್ಮಿತೆಯ ಒಲವು ಮೂಡಿಸುವ ಹಾಗೂ ವೃತ್ತಿ ಕೌಶಲ್ಯ ಮತ್ತು ಉದ್ಯಮಶೀಲತೆಯ ಬಗ್ಗೆ ಪ್ರೇರಣೆಯಾಗಲಿ ಎಂಬ ಆಶಯದ ಹಿನ್ನೆಲೆಯಲ್ಲಿ ತುಳುನಾಡಿನ ಪಾರಂಪರಿಕ ಕೈ ಮಗ್ಗ ನೇಕಾರಿಕೆಯ ಚಿತ್ರಗಳನ್ನು ಪುಸ್ತಕದ ಮುಖಪುಟದಲ್ಲಿ ಮುದ್ರಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತಿಳಿಸಿದರು.
ತುಳು ನೋಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಣಿಪಾಲ ಹೆಚ್.ಪಿ.ಆರ್.ನರ್ಸಿಂಗ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಡಾ. ಅಮರಶ್ರೀ , ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ನಿರ್ದೇಶಕ ಪ್ರವೀಣ್ ರಾಜ್ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.