ಪಡುಬಿದ್ರೆ ಗಣೇಶ ಪ್ರಭು ನಿಧನ
from Jayaram Udupi
ಬಂಟ್ವಾಳ: ಪಡುಬಿದ್ರೆ ಗಣೇಶ ಪ್ರಭುರವರು (೭೭ ವರ್ಷ) ವಯೋ ಸಹಜ ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಗಣೇಶ್ ಪ್ರಭು ಬಂಟ್ವಾಳ ಎಸ್.ವಿ.ಎಸ್. ವಿದ್ಯಾಸಂಸ್ಥೆಗಳ ಸಂಚಾಲಕರಾಗಿ ದುಡಿದಿದ್ದರು. ಬಡ ವಿದ್ಯಾರ್ಥಿಗಳಿಗೆ ರಿಯಾಯತಿ ಶುಲ್ಕದಲ್ಲಿ ಶಿಕ್ಷಣ ಒದಗಿಸುವ ಯೋಜನೆಗೂ ಕಾರಣ ಕರ್ತರಾಗಿದ್ದರು. ಬಂಟ್ವಾಳದಲ್ಲಿ ತಮ್ಮ ಮನೆ ಪಕ್ಕ ಶ್ರೀ ರಾಮಕೃಷ್ಣ ಸಾಧನ ಮಂದಿರ ಪ್ರಾರಂಭಿಸಿದ್ದರು. ಪ್ರತಿ ಭಾನುವಾರ ಸತ್ಸಂಗ ಆಯೋಜಿಸುತ್ತಿದ್ದರು.
ದಿವಂಗತ ಗಣೇಶ್ ಪ್ರಭು ಅವರು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ಮೂಲಕ ಬಂಟ್ವಾಳದಲ್ಲಿ ಎರಡು ತಲೆಮಾರಿನ ಜನರು ವಿದ್ಯಾವಂತ ನಾಗರಿಕರನ್ನಾಗಿಸಿದ್ದು ಮಾತ್ರವಲ್ಲ ಜನಪ್ರಿಯ ವೈದ್ಯರು, ಇಂಜಿನಿಯರ್ ಗಳು ರೂಪುಗೊಳ್ಳಲು ಅವಶ್ಯವಾದ ಉತ್ತಮ ಗುಣ ಮಟ್ಟದ ಪದವಿ ಪೂರ್ವ ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು.ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿಯ ಪರಮ ಭಕ್ತರಾದ ಅವರು ತಮ್ಮ ವಿಶಾಲ ಕಾರ್ಯಕ್ಷೇತ್ರದ ಮೂಲಕ ಜನಾನುರಾಗಿಯಾಗಿದ್ದರು ಎನ್ನುತ್ತಾರೆ ಅವರ ನಿಕಟವರ್ತಿ ಭಾಮಿ ಸುಧಾಕರ ಶೆಣೈ.
ಶ್ರೀ ತಿರುಮಲ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಬಿ. ದಾಮೋದರ ಪ್ರಭುರವರು 2001ರಲ್ಲಿ ನಿಧನರಾದಾಗ ಗಣೇಶ ಪ್ರಭುರವರು ದೇವಳದ ಮೊಕ್ತೇಸರರಾದರು. ದೇವಳದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಆನಂದ ಟ್ರಸ್ಟ್ ಸಹಯೋಗದಿಂದ ಆಧುನಿಕ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ನಾನೂ ಹಳೇ ವಿದ್ಯಾರ್ಥಿ ಸಂಘದ ಪ್ರತಿನಿಧಿಯಾಗಿ ಅವರ ಜತೆ ಕಾರ್ಯಾಚರಿಸಿದ್ದೇನೆ.
“ಹೇ ಸತ್ಯನಾರಾಯಣ, ಹೇ ಮಹಾಲಿಂಗಾ” ನಮ್ಮ ಕೊಂಕಣಿ ನಾಟಕದ ಬಗ್ಗೆ ಅವರಲ್ಲಿ ತಪ್ಪು ಮಾಹಿತಿಗಳಿದ್ದವು. ನೇರವಾಗಿ ನನ್ನನ್ನು ಆಹ್ವಾನಿಸಿ, ಮಾತುಕತೆ ನಡೆಸಿ, ನನ್ನ ವಿವರಣೆಗಳಿಂದ ಅವರು ತನಗೆ ಬಂದ ಮಾಹಿತಿಗಳನ್ನು ತಿದ್ದಿಕೊಂಡಿದ್ದರು. ದೇವಳದ ಮೊಕ್ತೆಸರರಾಗಿದ್ದ ಅವರು ಎಸ್.ವಿ.ಎಸ್. ವಿದ್ಯಾವರ್ಧಕ ಸಂಘಕ್ಕೆ 1970ರಿಂದಲೇ ಸದಸ್ಯರಾಗಿದ್ದರು. 2001ರಲ್ಲಿ ಕಾಲೇಜಿನ ಸಂಚಾಲಕರೂ ಆಗಿದ್ದರು.
ಸಂಕಷ್ಟದ ಸಂದರ್ಭಗಳಲ್ಲಿ ತಂಡವಾಗಿ ಅವರು ಎಲ್ಲರನ್ನು ಜತೆಗೂಡಿಸಿ ಸೌಹಾರ್ದಯುತವಾಗಿ ವಿವಾದವನ್ನು ಪರಿಹರಿಸುವ ಸಾಮರ್ಥ್ಯ ಅವರಲ್ಲಿತ್ತು.
ಬಂಟ್ವಾಳದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿದ ವಿದ್ಯಾವರ್ಧಕ ಸಂಘದ ಸ್ಥಾಪನೆಯಲ್ಲಿ ಅವರ ತಂದೆ ಪಡುಬಿದ್ರೆ ಲಕ್ಷ್ಮಣ ಪ್ರಭುರವರು ಕಾರ್ಯಾಚರಿಸಿದ್ದಾರೆ. ಕಾಲೇಜುಗಳ ನಿರ‍್ಮಾಣ, ಆಂಗ್ಲಮಾಧ್ಯಮ, ಸಿಬಿಎಸ್‌ಸಿ, ವಿದ್ಯಾರ್ಥಿನಿಯರ ವಸತಿ ನಿಲಯ, ಅಧ್ಯಾಪಕರ ವಸತಿಗೃಹ ಎಲ್ಲಾ ನಿರ್ಮಾಣ ಕಾರ್ಯದಲ್ಲಿ ಗಣೇಶ ಪ್ರಭುಗಳ ಪರಿಶ್ರಮಗಳಿದ್ದವು.
ಅನ್ಯಾಯದ ವಿರುದ್ದ ಹೋರಾಡುವ ಮನೋಭಾವವನ್ನು ಕೊನೆಯ ಕ್ಷಣದವರೆಗೂ ಜೀವಂತವಾಗಿರಿಸಿದ್ದ ಅವರು ತಾವೇ ಕಟ್ಟಿದ ಶಿಕ್ಷಣ ಸಂಸ್ಥೆಗಳು ಅವನತಿಯತ್ತ ಸಾಗುವುದನ್ನು ಹತಾಶೆಯಿಂದ ನೋಡಬೇಕಾಯಿತು. ಈ ನಿಟ್ಟಿನ ಕಾನೂನು ಹೋರಾಟಕ್ಕೆ ಅವರು ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದರು ಎನ್ನುತ್ತಾರೆ ಜನಪರ ಚಳವಳಿಗಾರ ಭಾಮಿ ಸುಧಾಕರ ಶೆಣೈ.