ಎಲ್ಲ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಇದೆ: ಎಂ ಬಿ ಪಾಟೀಲ

BANGALORE:

Font size:

ಎಲ್ಲ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಇದೆ: ಎಂ ಬಿ ಪಾಟೀಲ ಆಂಧ್ರದ ಆಮಿಷಕ್ಕೆ ಸಚಿವರ ಪ್ರತ್ಯುತ್ತರ

ಬೆಂಗಳೂರು: ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಿಬಿಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ರಾಜ್ಯವು ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ.65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರ ಕೂಡ ಮಹತ್ತ್ವದ ಪಾತ್ರ ವಹಿಸುತ್ತದೆ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.

ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ನಾನೂ ನೋಡಿದ್ದೇನೆ. ನಾನೂ ಅಲ್ಲೇ ಉತ್ತರ ಕೊಟ್ಟಿದ್ದೇನೆ. ಎಂ ಬಿ ಪಾಟೀಲನಿಗೂ ಸಾಮರ್ಥ್ಯವಿದೆ, ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ . ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದು ಅವರು ವಿಶ್ವಾಸ ಪ್ರಕಟಿಸಿದ್ದಾರೆ.

ಏರೋಸ್ಪೇಸ್ ಉದ್ಯಮಿಗಳಿಗೆ ಬರೀ ಭೂಮಿಯಲ್ಲ, ಅದರ ಜತೆಗೆ ನೀರು, ವಿದ್ಯುತ್ ಎಲ್ಲವನ್ನೂ ಕೊಡುತ್ತೇವೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ‌ ಪಾಲಿನ ನೀರು ಬಳಸಿಕೊಳ್ಳಲು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಈಗ ಉದ್ಯಮಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಸರಕಾರವೇನಾದರೂ ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರೆ, ಆಗ ಅವರು ರೈತರ ಪರವಾಗಿ ಮಾತನಾಡುತ್ತಿದ್ದರು. ವಿರೋಧ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ, ನನಗೆ ರಾಜ್ಯದ ಹಿತಾಸಕ್ತಿ ಮಾತ್ರ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೈಗಾರಿಕಾ ಇಲಾಖೆಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ದೇವನಹಳ್ಳಿ ವಿದ್ಯಮಾನವನ್ನೆಲ್ಲ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಇಲಾಖೆಯ ಪ್ರಗತಿ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಅವರು ನುಡಿದಿದ್ದಾರೆ.

Prev Post ಹಿಮಾಚಲ ಪ್ರದೇಶ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ದೇವೇಂದ್ರ ಸಿಂಗ್ ಶ್ಯಾಮ್ ರವರಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣನವರಿಂದ ಸನ್ಮಾನ
Next Post ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ ಯಶಸ್ವಿ ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯಕ್ಕೆ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ