ರಾಜ್ಯದ ಮಹಿಳೆಯರಿಗೆ ಉಚಿತಪ್ರಯಾಣ ಕಲ್ಪಿಸಿದ ಶಕ್ತಿ ಯೋಜನೆ 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ

BANGALORE:

Font size:

ರಾಜ್ಯದ ಮಹಿಳೆಯರಿಗೆ ಉಚಿತಪ್ರಯಾಣ ಕಲ್ಪಿಸಿದ ಶಕ್ತಿ ಯೋಜನೆ 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ -- ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು, ಜುಲೈ 14: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟನ್ನು ಇಂದು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು..

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. 2023ರ ಮೇ 20 ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿರುವ ಬಗ್ಗೆ ಮುಖ್ಯಮಂತ್ರಿ ವಿವರಿಸಿದರು.

ಸಿಗಂದೂರು ಕಾರ್ಯಕ್ರಮ-ಶಿಷ್ಠಾಚಾರ ಪಾಲನೆಯಾಗಿಲ್ಲ:

ಸಿಗಂದೂರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ, ಕೂಡ ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ. ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳಂತೆ ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ, ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಸಂಬಂಧಪಟ್ಟ ಸಾಗರ ತಾಲ್ಲೂಕಿನ ಇಂದಿನ ಕಾರ್ಯಕ್ರಮವನ್ನು ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇಲ್ಲಿ ಶಿಷ್ಠಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಠಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರನ್ನಾಗಲೀ, ಸ್ಥಳೀಯ ಶಾಸಕರನ್ನಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದರು.

ಕನ್ನಡದ ಮೇರುನಟಿ ಬಿ.ಸರೋಜಾದೇವಿ ನಿಧನ: ಮುಖ್ಯಮಂತ್ರಿಗಳ ಸಂತಾಪ

ಭಾರತೀಯ ಚಿತ್ರರಂಗದ ಖ್ಯಾತ ಚಿತ್ರನಟಿ ಬಿ.ಸರೋಜಾದೇವಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತಾ ಮಾತನಾಡಿದ ಮುಖ್ಯಮಂತ್ರಿಗಳು, ಬಿ.ಸರೋಜಾದೇವಿಯವರು ಕನ್ನಡ ನಾಡು ಕಂಡ ಪ್ರತಿಭಾವಂತ ಕಲಾವಿದರಾಗಿದ್ದರು. ಬಹುಭಾಷಾ ನಟಿಯಾಗಿದ್ದ ಅವರು ಅಪ್ರತಿಮ ಕಲಾವಿದರಾಗಿದ್ದು, ಅವರ ಸಾವಿನಿಂದ ಇಡೀ ಕಲಾಜಗತ್ತು ಬಡವಾಗಿದೆ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದು:ಖವನ್ನು ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

00000

ಬೆಂಗಳೂರು, ‌ಜು.14:

"500 ಕೋಟಿ ಟ್ರಿಪ್ ಗಳನ್ನು ಕಂಡಿರುವ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಣ್ಣಿಸಿದರು.

"ಶಕ್ತಿ" ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ 500 ಕೋಟಿ ಟ್ರಿಪ್ ಮುಟ್ಟಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ವಿಂಡ್ಸರ್ ವೃತ್ತದಲ್ಲಿ ಬಿಎಂಟಿಸಿ ಬಸ್ ನಲ್ಲಿ 500 ನೇ ಕೋಟಿಯ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಸೋಮವಾರ ವಿತರಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎಲ್ಲಿಯವರೆಗೆ ದೇವರು ಶಕ್ತಿ ಹಾಗೂ ಜನ ಅಧಿಕಾರ ನೀಡುತ್ತಾರೋ ಅಲ್ಲಿಯತನಕ ಯೋಜನೆಗಳು ಮುಂದುವರೆಯುತ್ತವೆ" ಎಂದರು.

"ಕಾಂಗ್ರೆಸ್ ಪಕ್ಷ ಈ ದೇಶದ ಜನರಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ. ಹಲಾವಾರು ಪಿಂಚಣಿ ಯೋಜನೆಗಳು, ನರೇಗಾ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ನಮ್ಮ ಯೋಜನೆಗಳನ್ನು ಬಿಜೆಪಿ ಸೇರಿದಂತೆ ಯಾರೂ ಸಹ ನಿಲ್ಲಿಸಲು ಸಾಧ್ಯವಿಲ್ಲ. ಇವು ಜನರ ಹೃದಯ ಹಾಗೂ ಬದುಕಿಗೆ ಬೇಕಾದಂತಹ ಕಾರ್ಯಕ್ರಮಗಳು. ಇವು ನಿರಂತರವಾಗಿರುತ್ತವೆ" ಎಂದರು.

"ಈ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಯಾವುದೇ ಖರ್ಚು ಮಾಡದೇ ತಮ್ಮ ಪ್ರೀತಿಪಾತ್ರರ ಮನೆಗಳಿಗೆ ಹೋಗಬಹುದು.‌ ಕೆಲಸಕ್ಕೆ ಹೋಗುವ ಅನೇಕ ಮಹಿಳೆಯರಿಗೆ ಪ್ರತಿ ತಿಂಗಳು 500 ರಿಂದ‌ 1 ಸಾವಿರಕ್ಕೂ ಹೆಚ್ಚು ಹಣ ಉಳಿತಾಯವಾಗುತ್ತಿದೆ" ಎಂದರು.

"ಮಹಿಳೆಯೊಬ್ಬರು ಸಂತೋಷದಿಂದ ನನಗೆ ರೊಟ್ಟಿ, ಶೇಂಗಾ ಹೋಳಿಗೆ ನೀಡಿದರು. ನಮ್ಮ ಯೋಜನೆ ಬಗ್ಗೆ ಯಾರು ಎಷ್ಟೇ ಟೀಕೆ ಮಾಡಿದರೂ ಅವುಗಳು ಕಾಲಕ್ರಮೇಣ ಸತ್ತು ಹೋಗುತ್ತವೆ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ.‌ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಕಾರಣಕ್ಕೆ ನಮಗೆ ಹೆಚ್ಚು ಸಂತೋಷವಾಗಿದೆ. ಇದೆಲ್ಲವನ್ನು ಜಾರಿ ಮಾಡಲು ಜನ ನೀಡುರುವ ಶಕ್ತಿಯಿಂದ ನಮಗೆ ಬಲಬಂದಿದೆ" ಎಂದರು.

ಮುಖ್ಯಮಂತ್ರಿಯವರಿಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು

ಇದಕ್ಕೂ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಸಿಗಂದೂರು ನೂತನ ತೂಗುಸೇತುವೆ ಉದ್ಘಾಟನೆ ಸಂಬಂಧ ಮುಖ್ಯಮಂತ್ರಿಗಳ ಆಹ್ವಾನ ವಿವಾದದ ಬಗ್ಗೆ ಕೇಳಿದಾಗ, "ರಾಜ್ಯದ ಮುಖ್ಯಮಂತ್ರಿಗಳಿಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಅವರು ಪತ್ರ ಬರೆದು ತಿಳಿಸಿದ್ದಾರೆ. ಇಂದು ಇಂಡಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೂ ಅತ್ಯಂತ ಪ್ರಮುಖವಾದುದು. 2 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ನೀರಾವರಿ ಇಲಾಖೆಯಿಂದ ನೀಡಲಾಗುತ್ತಿದೆ" ಎಂದರು.

ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆಯೇ ಎಂದು ಕೇಳಿದಾಗ, "ಈ ರಾಜಕಾರಣವನ್ನು ಆನಂತರ ಮಾತನಾಡೋಣ" ಎಂದರು

Prev Post ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ (87) ವಯೋಸಹಜ ಅನಾರೋಗ್ಯದ ಕಾರಣ ಇಂದು ನಿಧನ
Next Post ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಬ್ಯಾಕ್ವೇಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ 2025 ಹಾಗೂ ವಿಶ್ವ ಕೌಶಲ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ