ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ: ಡಿಸಿಎಂ ಡಿ.ಕೆ. ಶಿವಕುಮಾರ್

Banglore:

Font size:

ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಜು.07

“ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕುರಿತು ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪಾಲಿಕೆಗಳನ್ನು ಹೇಗೆ ವಿಂಗಡಿಸಬೇಕು ಎಂಬುದರ ಬಗ್ಗೆ ಸಮಿತಿಯವರು ಅಂತಿಮ ವರದಿ ನೀಡಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ಸಮಿತಿ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ಇದಾದ ಬಳಿಕ ಸಚಿವ ಸಂಪುಟ ಸಭೆಯ ಮುಂದೆ ವರದಿ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಈಗ ಹಾಲಿ ಇರುವ ಪಾಲಿಕೆ ವ್ಯಾಪ್ತಿಯಲ್ಲೇ ಇದನ್ನು ಜಾರಿಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಣೆ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ, ಆದಷ್ಟು ಬೇಗ ಚುನಾವಣೆ ನಡೆಸಬೇಕಿದೆ” ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆ ಸಂಬಂಧ ಸಚಿವ ಪರಮೇಶ್ವರ್ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ಎತ್ತಿನಹೊಳೆ ವಿಚಾರವಾಗಿ ಕೆಲವು ಸಮಸ್ಯೆ ಇತ್ತು. ಅವರ ತಾಲೂಕನ್ನು ಕೈಬಿಡಬೇಕು ಎಂಬ ಪ್ರಸ್ತಾವನೆ ಇತ್ತು. ಈ ಭಾಗದಲ್ಲಿ ನೀರು ನಿಲ್ಲಿಸಬೇಕಾಗಿದ್ದು, ಯಾವುದೇ ಹಳ್ಳಿ ಮುಳುಗದಂತೆ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಸ್ಥಳೀಯರೇ ಒಂದೆರಡು ಕೆರೆಗಳ ಬಗ್ಗೆ ಸಲಹೆ ನೀಡಿದ್ದು, ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು” ಎಂದು ತಿಳಿಸಿದರು.

ನಾಳೆ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಹಾಗೂ ಹಾಸನ ಭಾಗದಲ್ಲಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಅನುಮತಿ ಬಗ್ಗೆ ಚರ್ಚಿಸಲು ಸಮಯಾವಕಾಶ ನಿಗದಿಯಾಗಿದೆ. ಕೇಂದ್ರ ಜಲಶಕ್ತಿ ಸಚಿವರನ್ನೂ ಭೇಟಿ ಮಾಡಲಾಗುವುದು” ಎಂದು ತಿಳಿಸಿದರು.

ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ ದೆಹಲಿಗೆ ಭೇಟಿ ನೀಡಿದಾಗ ಅಲ್ಲಿಗೆ ಹೋಗಿ ಕೈಮುಗಿದು ಬರುತ್ತೇವೆ” ಎಂದರು.

Prev Post ಬ್ರಾಂಡ್ ಬೆಂಗಳೂರು ಸಮಿತಿ ಸದಸ್ಯ, ಸಮಾಜ ಸೇವಕರು ಆದ ರವಿಚಂದರ್ ಅವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ
Next Post ಶೀಘ್ರದಲ್ಲೇ ಕರ್ನಾಟಕ ಕ್ವಾಂಟಮ್‌ ಆಕ್ಷನ್‌ ಪ್ಲಾನ್‌ ಅನಾವರಣ: ಸಚಿವ ಎನ್‌ ಎಸ್‌ ಭೋಸರಾಜು