ವಸತಿ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಧಿಕಾರಿಗಳಿಗೆ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲು ನಿರ್ದೇಶನ
ಮಂಡ್ಯ: ವಸತಿ ಇಲಾಖೆಯಲ್ಲಿ ಫಲಾನುಭವಿಗಳನ್ನು ಗುರುತಿಸುವಾಗ ಅಧಿಕಾರಿಗಳು ಅರ್ಹರನ್ನು ಗುರುತಿಸಬೇಕು. ನಿಜಕ್ಕೂ ಮನೆಗಳು ಅಗತ್ಯ ಇರುವವರನ್ನು ಗುರುತಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ದಿಶಾ ಸಮಿತಿ ಸಭೆಯ ಅಂತ್ಯದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು; ಎಲ್ಲರಿಗೂ ಮನೆ ಎನ್ನುವುದು ಬಹುದೊಡ್ಡ ಕನಸು. ರಾಷ್ಟ್ರದಲ್ಲಿ ವಸತಿರಹಿತರು ಇರಬಾರದು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಅದು ಕೇಂದ್ರದ ಯೋಜನೆ ಆಗಿರಲಿ ಅಥವಾ ರಾಜ್ಯದ ಯೋಜನೆ ಆಗಿರಲಿ. ಅರ್ಹ ಫಲಾನುಭಾವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.
ಸಾಮಾಜಿಕವಾಗಿ ದುರ್ಬಲರಾಗಿರುವ ಜನರನ್ನು ಸಬಲೀಕರಣ ಮಾಡುವುದು ಅತ್ಯಗತ್ಯ. ಅಂಥ ಜನರಿಗೆ ವಸತಿ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ, ಕಳಕಳಿಯಿಂದ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಕಿವಿಮಾತು ಹೇಳಿದರು.
ರಾಜ್ಯವು ಸೇರಿ ಮಂಡ್ಯದಲ್ಲಿ ಉತ್ತಮ ಮಳೆಯಾಗಿದೆ. ಮುಂಗಾರು ಮುಗಿಯುವ ಮುನ್ನವೇ ಕೃಷ್ಣರಾಜ ಸಾಗರ ಜಲಾಶಯ ತುಂಬಿದೆ. ಎಲ್ಲಾ ಕಡೆ ಬಿತ್ತನೆ ಶುರುವಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ನೆರೆರಾಜ್ಯಕ್ಕೆ ಅಷ್ಟು ನೀರು ಬಿಟ್ಟೆವು, ಇಷ್ಟು ನೀರು ಬಿಟ್ಟೆವು ಎನ್ನುವುದು ಮುಖ್ಯವಲ್ಲ. ಈಗ ಜಲಾಶಯಕ್ಕೆ ಒಳಹರಿವುದು ಉತ್ತಮವಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ತಕ್ಷಣವೇ ತುಂಬಿಸಿ ಎಂದು ನೀರಾವರಿ ಇಲಾಖೆಗೆ ತಾಕೀತು ಮಾಡಿದರು.
ಈ ವಿಷಯದಲ್ಲಿ ರಾಜಕಾರಣದ ಅಗತ್ಯವಿಲ್ಲ. ನೀರಿನ ವಿಷಯ ಬಂದರೆ ನಾವೆಲ್ಲರೂ ಒಂದೇ. ನಮ್ಮ ರೈತರಿಗೆ ನೀರಿನ ಅನುಕೂಲ ಆಗಬೇಕು. ಕೆರೆಗಳನ್ನು ತುಂಬಿಸಿಕೊಳ್ಳುವುದು ಉತ್ತಮ ಮಾರ್ಗ ಎಂದು ಸಚಿವರು ಸಲಹೆ ಮಾಡಿದರು.
ಶಿಕ್ಷಣ ಇಲಾಖೆಯಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ. ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ 19ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಬಂದಿದೆ. ಮುಂದಿನ ವರ್ಷಗಳಲ್ಲಿ 3- 4ನೇ ಸ್ಥಾನಕ್ಕೆ ಬರಬೇಕು. ಅದಕ್ಕಾಗಿ ಅಧಿಕಾರಿಗಳು ಪ್ರಯತ್ನ ಮಾಡಬೇಕು ಎಂದು ಸಚಿವರು ಹೇಳಿದರು.
ಕೃಷಿ, ನೀರಾವರಿ, ತೋಟಗಾರಿಕೆ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ ಸೇರಿದಂತೆ ಜನರಿಗೆ ನೇರ ಅನುಕೂಲವಾಗುವ ಇಲಾಖೆಗಳಲ್ಲಿನ ಕೆಲಸಗಳು ಕಾಲಮಿತಿಯಲ್ಲಿ ಮುಗಿಯಬೇಕು. ವಿಳಂಬವಾಗಿ ಕಾಮಗಾರಿಗಳು ನಡೆಯಬಾರದು. ರಾಜಕೀಯವನ್ನು ಬದಿಗಿಟ್ಟು ನಾವೆಲ್ಲರೂ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ಮಂಡ್ಯ ಜಿಲ್ಲೆಗೆ ಒಂದು ಪ್ರಮುಖ ಕೈಗಾರಿಕೆ ತರಲು ನಾನು ಗಂಭೀರ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಹಲವಾರು ಉದ್ಯಮಿದಾರರ ಜೊತೆ ಚರ್ಚೆ ನಡೆಸಿದ್ದೇನೆ. ರಾಜ್ಯ ಸರ್ಕಾರದ ಸಹಕಾರವೂ ಬೇಕಿದೆ ಎಂದ ಸಚಿವರು; ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.