ರಾಘವೇಂದ್ರ ಭಟ್ ಕರ್ಣಾಟಕ ಬ್ಯಾಂಕಿನ ಹೊಸ ಸಿ.ಒ.ಒ. , ನಾಳೆ ಅಧಿಕಾರಕ್ಕೆ.
Jayram Udupi:
ಕರ್ಣಾಟಕ ಬ್ಯಾಂಕ್ ನ ಹೊಸ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ರಾಘವೇಂದ್ರ ಭಟ್ ಅವರನ್ನು ನೇಮಿಸಲಾಗಿದೆ. ಅವರು ಜುಲೈ ೨, ಬುಧವಾರದಂದು ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ. ಉಡುಪಿಯ ಉಪ್ಪೂರು ಸಮೀಪದ ಹಾವಂಜೆಯವರಾದ ಎಂ.ರಾಘವೇಂದ್ರ ಭಟ್ ಅವರು ಈ ಹಿಂದೆಯೂ ಸಿ.ಒ.ಒ. ಆಗಿ ಕಾರ್ಯನಿರ್ವಹಿಸಿದ್ದರು.
ಸದ್ಯ ವಿವಾದದ ಸುಳಿಗೆ ಸಿಲುಕಿರುವ ಕರ್ಣಾಟಕ ಬ್ಯಾಂಕನ್ನು ಮತ್ತೆ ಸರಿದಾರಿಗೆ ತರುವ ಮಹತ್ತರ ಜವಾಬ್ದಾರಿಯನ್ನು ಬ್ಯಾಂಕಿನ ನಿರ್ದೇಶಕ ಮಂಡಳಿ ಅವರ ಹೆಗಲಿಗೆ ಏರಿಸಿದೆ. ಸ್ಥಳಿಯರೇ ಆಗಿರುವ ಅವರಿಂದಾಗಿ ಬ್ಯಾಂಕ್ ಮತ್ತೆ ತನ್ನ ವೈಭವವನ್ನು ಗಳಿಸುವ ನಿರೀಕ್ಷೆ ಇದೆ.
ಏತನ್ಮಧ್ಯೆ ಬ್ಯಾಂಕಿನ ಹೊಸ ಆಡಳಿತ ನಿರ್ದೇಶಕರ ಹುದ್ದೆಗಾಗಿ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಬ್ಯಾಂಕ್ ಶೋಧ ಸಮಿತಿಯನ್ನು ರಚಿಸಿದೆ. ಆಡಳಿತ ನಿರ್ದೇಶಕರ ಅಧಿಕಾರಾವಧಿ ಮೂರು ವರ್ಷವಿರುತ್ತದೆ. ಈ ಹುದ್ದೆಗೆ ವಯೋಮಿತಿ ೭೦ ವರ್ಷ ದಾಟಿರಬಾರದು ಎಂದಿದೆ. ಸದ್ಯ ಸಿ.ಒ.ಒ. ಆಗಿ ಬರುತ್ತಿರುವ ರಾಘವೇಂದ್ರ ಭಟ್ ೬೭ ವರ್ಷ ವಯಸ್ಸಿನವರಾಗಿರುವುದರಿಂದ ಆಡಳಿತ ನಿರ್ದೇಶಕ ಹುದ್ದೆಗೆ ಅವರೂ ಅರ್ಹರು ಎಂಬ ಸುದ್ದಿ ಬ್ಯಾಂಕಿನ ಬೋರ್ಡ್ ರೂಮಿನಿಂದ ಹೊರಬಿದ್ದಿದೆ.