ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ಣಾಟಕ ಬ್ಯಾಂಕ್ ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆಯಿಂದ ವಿವಾದದ ಬಿರುಗಾಳಿಗೆ ಸಿಲುಕಿದೆ from ; Jayaram Udupi

Mangalore:

Font size:

ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ಣಾಟಕ ಬ್ಯಾಂಕ್ ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆಯಿಂದ ವಿವಾದದ ಬಿರುಗಾಳಿಗೆ ಸಿಲುಕಿದೆ

From. Jayaram Udupi

ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ಣಾಟಕ ಬ್ಯಾಂಕ್ ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆಯಿಂದ ವಿವಾದದ ಬಿರುಗಾಳಿಗೆ ಸಿಲುಕಿದೆ. ಗ್ರಾಹಕರು ಕಳವಳಪಡಬೇಕಾಗಿಲ್ಲ ಎಂಬ ಸಂದೇಶವನ್ನು ಬ್ಯಾಂಕ್ ನೀಡಿದೆ. ಬ್ಯಾಂಕಿನ ಹಣಕಾಸು ಆರೋಗ್ಯ ಹದಗೆಟ್ಟಿಲ್ಲ ಎಂದು ಅದು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಬ್ಯಾಂಕಿನ ಪ್ರತಿಷ್ಟೆಗೆ ಮಾತ್ರ ದುರಸ್ತಿ ಮಾಡಲಾಗದಷ್ಟು ಹಾನಿಯಾಗಿದೆ.

ನಿರ್ದೇಶಕ ಮಂಡಳಿಯ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕ್ರಷ್ಣನ್ ಹರಿ ಹರ ಸರ್ಮಾ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದರೂ ಬ್ಯಾಂಕಿನ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದ ವಿವಾದ ಅವರು ರಾಜೀನಾಮೆ ನೀಡಬೇಕಾದ ಸ್ಥಿತಿ ನಿರ್ಮಾಣ ಮಾಡಿತು ಎಂದು ಹೇಳಲಾಗುತ್ತಿದೆ. ಅವರ ಜೊತೆ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ ರಾವ್ ಕೂಡಾ ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ.

ಕರ್ಣಾಟಕ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಉನ್ನತ ಮಟ್ಟದಲ್ಲಿ ಅಧಿಕಾರಿಗಳ ನಡುವಿನ ಭಿನ್ನಮತದಿಂದ ಕಳೆಗುಂದಿತ್ತು. ಈಗ ರಾಜೀನಾಮೆ ನೀಡಿರುವ ಇಬ್ಬರು ಹಿರಿಯ ಅಧಿಕಾರಿಗಳು ನಿರ್ದೇಶಕ ಮಂಡಳಿಯನ್ನು ಧಿಕ್ಕರಿಸಿ ಅನೇಕ ತೀರ್ಮಾನಗಳನ್ನು ಕೈಗೊಂಡಿದ್ದರು. ಬ್ಯಾಂಕಿನಲ್ಲ್ಲಿ ಜನರಲ್ ಮ್ಯಾನೇಜರ್ ವರೆಗಿನ ಹುದ್ದೆಯ ವೇತನ ಸಾಮಾನ್ಯವಾಗಿ ರಾಷ್ಟ್ರಮಟ್ಟದ ಸೆಟ್ಲ್ಮೆಂಟ್ ಮೂಲಕ ನಿಗದಿಯಾಗಿರುತ್ತದೆ. ಸರಿಸುಮಾರಾಗಿ ಅದು ವರ್ಷಕ್ಕೆ ೩೦ ಲಕ್ಷ ರೂ.ಗಳವರೆಗೆ ಇರುತ್ತದೆ. ಆ ಮೇಲಿನ ಹುದ್ದೆಗಳು ಅಂದರೆ ಸಿ.ಜಿ.ಎಂ., ಎಂ.ಡಿ.ಯಂತಹ ಹುದ್ದೆಗಳು ಗುತ್ತಿಗೆ ಮಾದರಿಯಲ್ಲಿ ಇರುತ್ತವೆ. ಕರ್ಣಾಟಕ ಬ್ಯಾಂಕಿನ ಈ ಇಬ್ಬರು ಅಧಿಕಾರಿಗಳು ತಮಗೆ ಬೇಕಾದ ವ್ಯಕ್ತಿಗಳನ್ನು ವರ್ಷಕ್ಕೆ ಒಂದು ಕೋಟಿಯಿಂದ ಒಂದೂವರೆ ಕೋಟಿ ರೂಪಾಯಿ ಪ್ಯಾಕೇಜಿನಲ್ಲಿ ನೇಮಕ ಮಾಡಿಕೊಂಡಿದ್ದರು. ಇದಕ್ಕೆ ನಿರ್ದೇಶಕ ಮಂಡಳಿಯ ಅನುಮತಿ ಪಡೆದಿರಲಿಲ್ಲ. ಹೀಗೆ ನೇಮಕ ಗೊಂಡವರು ಕೆಲಸ ಮಾಡದೆ ಬರೇ ಶೋಕಿವಾಲಾಗಳಾಗಿದ್ದರು, ಅವರಿಗೆ ನೆಟ್ಟಗೆ ಕೆಲಸ ಮಾಡಲು ಬರುತ್ತಿರಲಿಲ್ಲ ಎಂದು ಬ್ಯಾಂಕಿನ ಸಿಬ್ಬಂದಿಗಳು ಅಸಮಾಧಾನದಿಂದ ಕುದಿಯುತ್ತಿದ್ದರು. ಆದರೆ ಅದು ಬಹಿರಂಗಗೊಂಡಿರಲಿಲ್ಲ. ನಮ್ಮ ಜಿ.ಎಂ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ನೋಡಿ, ಅವರಿಗೆ ಟಾರ್ಗೆಟ್ ಕೊಟ್ಟಿದ್ದಾರೆ, ಈ ಶೋಕಿವಾಲಾಗಳು ಜಬರ್ದಸ್ತ್ ಮಾಡಿಕೊಂಡು ಮಜಾ ತಗೊಳ್ಳುತ್ತಿದ್ದಾರೆ ಎಂದು ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ ಘಟನೆಗಳೂ ನಡೆದಿದ್ದವು.

ಸೂರ್ಯನಾರಾಯಣ ಅಡಿಗರಿಂದ ಉನ್ನತಿಗೇರಿ ಬ್ಯಾಂಕಿಂಗ್ ತೊಟ್ಟಿಲು ಎಂಬ ಕರಾವಳಿಯ ಹೆಮ್ಮೆಗೆ ಗರಿಯನ್ನು ಮೂಡಿಸಿದ \ ಕರ್ಣಾಟಕ ಬ್ಯಾಂಕಿನ ಆಡಳಿತ ಕಚೇರಿಯನ್ನು ಈ ಇಬ್ಬರು ಅಧಿಕಾರಿಗಳು ಮಂಗಳೂರಿನಿಂದ ಸ್ಥಳಾಂತರಗೊಳಿಸಲೂ ಪ್ರಯತ್ನಗಳನ್ನು ನಡೆಸಿದ್ದರು. ಇದರ ಆರಂಭಿಕ ಹೆಜ್ಜೆಯಾಗಿ ಹಿರಿಯ ಅಧಿಕಾರಿಗಳು ವಾರದಲ್ಲಿ ಮೂರು ದಿನ ಮಂಗಳೂರು, ಹಾಗು ಎರಡು ದಿನ ಬೆಂಗಳೂರು ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದರು. ಈ ವ್ಯವಸ್ಥೆಯಿಂದಾಗಿ ಅಧಿಕಾರಿಗಳ ಪ್ರಯಾಣಕ್ಕೆ ಬ್ಯಾಂಕ್ ದೊಡ್ಡ ಮೊತ್ತ ಖರ್ಚು ಮಾಡಿದೆ ಎನ್ನಲಾಗುತ್ತಿದೆ. ಬ್ಯಾಂಕಿಗೆ ನೂರು ವರ್ಷ ತುಂಬಿದ ಸಂಭ್ರಮಾಚರಣೆಯನ್ನು ಮುಂಬಯಿಯ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಸುಪರ್ದಿಗೆ ನೀಡಿದ್ದರ ಬಗ್ಗೆಯೂ, ಅದಕ್ಕಾಗಿ ದೊಡ್ಡ ಮೊತ್ತ ವ್ಯಯ ಮಾಡಿದ್ದರ ಬಗ್ಗೆಯೂ ಬ್ಯಾಂಕಿನ ಸಿಬ್ಬಂದಿಗಳಲ್ಲಿ ಅಸಮಾಧಾನವಿತ್ತು. ಇಷ್ಟಾಗಿಯೂ ಆ ಸಮಾರಂಭ ಅಧ್ವಾನಗಳಿಗೆ ಸಾಕ್ಷಿಯಾಗಿತ್ತು.

ಕರ್ನಾಟಕದವರೇ ಆದ ಹಿಂದಿನ ಹಿರಿಯ ಅಧಿಕಾರಿಯೊಬ್ಬರಿಗೆ ಬ್ಯಾಂಕಿನ ಲಾಭಾಂಶದಲ್ಲಿ ಒಪ್ಪಂದದ ಪ್ರಕಾರ ನೀದಬೇಕಾದ ಕೋಟ್ಯಾಂತರ ರೂಪಾಯಿಯನ್ನು ವಂಚಿಸುವಲ್ಲಿಯೂ ಈಗ ರಾಜೀನಾಮೆ ನೀಡಿರುವ ಅಧಿಕಾರಿಗಳು ಷಡ್ಯಂತ್ರ ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.

Prev Post ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಸಿಎಂ
Next Post ಗ್ರೀನ್‌ ಸ್ಟೀಲ್‌, ಉನ್ನತ ದರ್ಜೆಯ ಅಲ್ಯೂಮೀನಿಯಂ; ಭಾರತ -ಯುಎಇ ಸಹಯೋಗಕ್ಕೆ ಒತ್ತು ಕೈಗಾರಿಕಾ, ಖನಿಜ ಪಾಲುದಾರಿಕೆ ವಿಸ್ತರಿಸಲು ಯುಎಇ ಉನ್ನತಾಧಿಕಾರಿಗಳ ಜತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತುಕತೆ