ಪಾರದರ್ಶಕ ಆಡಳಿತಕ್ಕೆ ಮಾಹಿತಿ ಹಕ್ಕು ಕಾಯ್ದೆ ಸಹಕಾರಿ : ಡಾ ಹರೀಶ್ ಕುಮಾರ್
ಜೂನ್ 21, ಮಂಡ್ಯ(ಕ.ವಾ): ಅಧಿಕಾರಿಗಳು ಆಡಳಿತದಲ್ಲಿ ಪಾರದರ್ಶಕ ಆಡಳಿತ ಅಳವಡಿಸಿಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಡಾ: ಹರೀಶ್ ಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಮಾಹಿತಿ ಅಧಿಕಾರಿ ಮೊದಲು ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಮಾಹಿತಿ ಹಕ್ಕು ಕಾಯ್ದೆಗೆ ಒಂದು ಸರ್ಕಾರವನ್ನು ಕೆಡುವ ಶಕ್ತಿ ಇದೆ. ಲಭ್ಯವಿರುವ ದಾಖಲೆಗಳನ್ನು ಮಾತ್ರ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಲಭ್ಯವಿದ್ದಲ್ಲಿ ಅವುಗಳನ್ನು ಸಹ ನೀಡಬಹುದು. ಹೊಸದಾಗಿ ದಾಖಲೆ ಸೃಷ್ಠಿಸಿ ದಾಖಲೆ ನೀಡಲು ಅವಕಾಶವಿಲ್ಲ ಎಂದರು.
ಕಂದಾಯ ಇಲಾಖೆ ಹಾಗೂ ಆರ್.ಡಿ.ಪಿ.ಆರ್ ಇಲಾಖೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಮೇಲ್ಮನವಿ ಬರುವುದೇ ಹೆಚ್ಚು. ಪಂಚತಂತ್ರ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಪಾರದರ್ಶಕವಾಗಿ ಅನಾವರಣ ಮಾಡಿದರೆ ಬಹಳಷ್ಟು ಅರ್ಜಿಗಳು ಮೂಲ ಹಂತದಲ್ಲೇ ವಿಲೇವಾರಿಯಾಗುತ್ತದೆ ಆಯೋಗಕ್ಕೆ ಬಂದ ಮೇಲ್ಮನವಿಗಳ 45000 ಗಳಲ್ಲಿ 25000 ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿರುತ್ತದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯಡಿ 4 (1ಎ) ಮತ್ತು 4(1ಬಿ) ಯಲ್ಲಿ ನಿಗದಿಪಡಿಸಿರುವ ವಿಷಯಗಳ ಬಗ್ಗೆ ವಿಷಯಗಳನ್ನು ಅನಾವರಣಗೊಳಿಸಿ ಇದರಿಂದ ಬಹಳಷ್ಟು ಮಾಹಿತಿ ಹಕ್ಕು ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರೊಂದಿಗೆ ಕಡತಗಳನ್ನು ನಿಯಮಾನುಸಾರ ಎ, ಬಿ, ಸಿ, ಡಿ ವರ್ಗೀಕರಣ ಮಾಡಿ ಎಂದರು.
ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಕೆ. ಬದ್ರುದ್ದೀನ್ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ, ಅಧಿಕಾರಿಗಳು ಆರ್ ಟಿ. ಐ ಕಾಯ್ದೆಯ ಕುರಿತು ಮೊದಲು ಸಮರ್ಪಕವಾಗಿ ತಿಳಿದುಕೊಳ್ಳಿ, ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದಾಗಿದೆ, ಅರ್ಜಿದಾರರು ಆರ್.ಟಿ.ಐ ನಡಿ ಮಾಹಿತಿ ಕೋರಿದ 30 ದಿನದೊಳಗಾಗಿ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದರು.
ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಸರಳವಾಗಿದೆ ಕಾಯ್ದೆಯನ್ನು ಓದಿ ಅರ್ಥೈಸಿಕೊಳ್ಳಿ, ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೇಳಿರುವ ಮಾಹಿತಿಯನ್ನು ಒದಗಿಸಿ, ನೀಡಬಹುದಾದ ಹಾಗೂ ನೀಡಲಾಗದ ಮಾಹಿತಿಗಳನ್ನು ಬೇರ್ಪಡಿಸಿ ಇಟ್ಟುಕೊಳ್ಳಿ, ಅರ್ಜಿದಾರರ ಅರ್ಜಿ ಓದಿ ನಿಮ್ಮ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೂ ಎಂದು ಮೊದಲು ಖಚಿತ ಪಡಿಸಿಕೊಳ್ಳಿ, ನಿಮ್ಮ ವ್ಯಾಪ್ತಿಗೆ ಬಾರದಿರುವ ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಕೆಯಾದ 5 ದಿನದೊಳಗಾಗಿ ವರ್ಗಾಯಿಸಿ ಅರ್ಜಿದಾರರ ಗಮನಕ್ಕೆ ತನ್ನಿ ಎಂದು ತಿಳಿ ಹೇಳಿದರು.
ಅಧಿಕಾರಿಗಳ ಕಣ್ತಪ್ಪಿನಿಂದ ಯಾವುದಾದರೂ ಮಾಹಿತಿ ನೀಡುವಲ್ಲಿ ಲೋಪ ಉಂಟಾದರೆ ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತನ್ನಿ. ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ 1135 ಆಯೋಗದಲ್ಲಿ ಮೇಲ್ಮನವಿ ಅರ್ಜಿಗಳು ಬಾಕಿ ಇದೆ, ಎಲ್ಲಾ ಜಿಲ್ಲೆಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯ ಶೇ 3 ರಷ್ಟು ಮಾತ್ರ ಇದೆ. ಇದು ಶೂನ್ಯಕ್ಕೆ ಬಕಡಿಮೆಯಾಗುತ್ತದೆ. ಅಧಿಕಾರಿಗಳು ಅರ್ಜಿ ಸಲ್ಲಿಸಿದವರಿಗೆ ಅಗತ್ಯ ಮಾಹಿತಿ ಒದಗಿಸಿ, ಮಾಹಿತಿ ಇಲ್ಲದಿದ್ದಲ್ಲಿ ಮಾಹಿತಿ ಏಕೆ ಲಭ್ಯವಿಲ್ಲ ಎಂಬುದರ ಕುರಿತು ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಆಧಿಕಾರಿಗಳ ಪ್ರಮುಖ ಕರ್ತವ್ಯವಾಗಿರುತ್ತದೆ. ಅಧಿಕಾರಿಗಳು ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಯಾವುದೇ ಭಯ ಪಡುವ ಅಗತ್ಯವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ನಿರ್ವಹಣೆ ಮಾಡುವುದು ಅಧಿಕಾರಿಗಳ ಹೊಣೆಗಾರಿಕೆ ಎಂದು ಹೇಳಿದರು.
ಜಿಲ್ಲೆಯ ಪ್ರಸಕ್ತ ಸಾಲಿನ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದೆ, ಈಗಾಗಲೇ 9 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ, ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಂದು ತಿಳಿಸಿದರು.
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆಫ್ ಲೈನ್ ನಲ್ಲಿ ಬರುವ ಅರ್ಜಿಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಆನ್ ಲೈನ್ ಅರ್ಜಿಗಳಿಗೂ ನೀಡಬೇಕು. ಬಹಳಷ್ಟು ಅಧಿಕಾರಿಗಳು ಆನ್ ಲೈನ್ ನಲ್ಲಿ ಬರುವ ಮಾಹಿತಿ ಹಕ್ಕು ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.