ಜನ ಸಾಮಾನ್ಯರ ಸ್ನೇಹಿಯಾಗಿ ಕೆಲಸ ನಿರ್ವಹಿಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಾಪ್ ಟಾಪ್ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ: ಗ್ರಾಮ ಲೆಕ್ಕಾಧಿಕಾರಿಗಳು (ವಿಎ) ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು, ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿಯ ರಜತಾದ್ರಿಯ ಜಿಲ್ಲಾ ಪಂಚಾಯತ್ ನ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ (ವಿಎ) ಲಾಪ್ ಟಾಪ್ ವಿತರಿಸಿ ಮಾತನಾಡಿದ ಸಚಿವರು, ಕಂದಾಯ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸ ಕಾರ್ಯಗಳು ಮತ್ತಷ್ಟು ಚುರುಕಾಗುವ ದೃಷ್ಟಿಯಿಂದ ನಮ್ಮ ಸರ್ಕಾರದ ವತಿಯಿಂದ ಲಾಪ್‌ಟಾಪ್ ನೀಡಲಾಗಿದೆ. ಇದರಿಂದ ಅಧಿಕಾರಿ ವರ್ಗ ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡಲಿ ಎಂಬುದೇ ನನ್ನ ಆಶಯ ಎಂದರು.
ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ, ಕೆಲಸದ ಬಗ್ಗೆ ನಿಸ್ವಾರ್ಥ ಇರುವ ವ್ಯಕ್ತಿ. ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿ ಕೃಷಿ ವಲಯದಲ್ಲಿ ಕ್ರಾಂತಿ ಮಾಡಿದರು. ಕೃಷಿ ಹೊಂಡ ತೆರೆಯುವ ರೈತರಿಗೆ ಅನುಕೂಲ ಮಾಡಿಕೊಟ್ಟರು. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಕ್ರಾಂತಿಕಾರಿ ಬದಲಾವಣೆ ಮಾಡಿದರು. ಈಗಲೂ ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಸ್ವರೂಪ. ಟಿ.ಎಚ್, ಜಿಲ್ಲಾ ಪಂಚಾಯತ್ ನ ಸಿಇಒ ಪ್ರತೀಕ್ ಬಾಯಲ್ ಉಪಸ್ಥಿತರಿದ್ದರು.