• ಎಸ್‌ಕೆಎಫ್, ಎರಿಕ್ಸನ್, ಗೆಟಿಂಗ್ ಗ್ರೂಪ್ ಜೊತೆ ಫಲಪ್ರದ ಚರ್ಚೆ: ಸಚಿವ ಎಂ. ಬಿ. ಪಾಟೀಲ • ಅತ್ಯಾಧುನಿಕ ತಯಾರಿಕೆ, ದೂರಸಂಪರ್ಕ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ
ಬೆಂಗಳೂರು: ʼಯಂತ್ರೋಪಕರಣ ಸೇರಿದಂತೆ ವಿವಿಧೆಡೆ ಸೋರಿಕೆ, ಒತ್ತಡ ತಡೆಯುವ ವಿವಿಧ ಬಗೆಯ ಮುದ್ರೆ (ಸೀಲ್ಸ್) ತಯಾರಿಸುವ ಮೈಸೂರಿನಲ್ಲಿರುವ ತನ್ನ ಘಟಕದ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಸ್ವೀಡನ್ನಿನ ಬೇರಿಂಗ್ ಹಾಗೂ ಸೀಲ್ಸ್ ತಯಾರಿಸುವ ಎಸ್‌ಕೆಎಫ್ ಕಂಪನಿಯು ಮುಂದೆ ಬಂದಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.
ಸ್ವೀಡನ್ ಪ್ರವಾಸದಲ್ಲಿ ಇರುವ ಸಚಿವ ಪಾಟೀಲ ಅವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆಗೆ ಮಂಗಳವಾರ ನಡೆದ ಸಭೆಯಲ್ಲಿ ಎಸ್‌ಕೆಎಫ್‌ನ ಸಿಟಿಒ ಶ್ರೀಮತಿ ಅನ್ನಿಕಾ ಓಲ್ಮೆ ಅವರು ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿನ ತನ್ನ ವಹಿವಾಟಿನಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಸ್ವೀಡನ್ ಭೇಟಿಯ ಎರಡನೆ ದಿನ ಸಚಿವರು ಸ್ವೀಡನ್‌ನಲ್ಲಿನ ಬಹುರಾಷ್ಟ್ರೀಯ ಕಂಪನಿಗಳಾದ ಎಸ್‌ಕೆಎಫ್, ಎರಿಕ್ಸನ್ ಮತ್ತು ಗೆಟಿಂಗ್ ಗ್ರೂಪ್‌ನ ಉನ್ನತ ಅಧಿಕಾರಿಗಳ ಜೊತೆಗೆ ಫಲಪ್ರದ ಮಾತುಕತೆ ನಡೆಸಿದರು.
ಅತ್ಯಾಧುನಿಕ ತಯಾರಿಕೆ, ದೂರಸಂಪರ್ಕ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವ ಸಂಬಂಧ ನಿಯೋಗವು ಈ ವಲಯದ ಜಾಗತಿಕ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಇರುವ ವಿಪುಲ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟಿತು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ, ವಹಿವಾಟು ವಿಸ್ತರಣೆ ಬಗ್ಗೆ ಎಸ್‌ಕೆಎಫ್, ಎರಿಕ್ಸನ್ ಹಾಗೂ ಗೆಟಿಂಗ್ ಗ್ರೂಪ್ ಒಲವು ವ್ಯಕ್ತಪಡಿಸಿವೆ.
ದೂರಸಂಪರ್ಕ ಮತ್ತು 5ಜಿ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಎರಿಕ್ಸನ್ ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಸಚಿವ ಪಾಟೀಲ ಅವರು, ರಾಜ್ಯದಲ್ಲಿ ವಹಿವಾಟು ವಿಸ್ತರಿಸಲು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿನ ತಯಾರಿಕಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ರಾಜ್ಯದ ನಿಯೋಗವು ವೈದ್ಯಕೀಯ ತಂತ್ರಜ್ಞಾನದ ಜಾಗತಿಕ ಕಂಪನಿ ಗೆಟಿಂಗ್ ಗ್ರೂಪ್‌ಗೆ ಆಹ್ವಾನ ನೀಡಿತು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಗುಂಜನ್ ಕೃ̧̧ಷ್ಣ, ಕೆಐಎಡಿಬಿ ಮುಖ್ಯ ಎಂಜಿನಿಯರ್ ವೀರಭದ್ರಯ್ಯ ನಿಯೋಗದಲ್ಲಿ ಇದ್ದಾರೆ.