ಮಂಗಳೂರಿಗರು ಮಳೆ ಎಂದರೆ ರೋಸಿ ಹೋಗುವಂತೆ ಮಾಡಿದ್ದಾರೆ.
From :Jayaram Udupi
ಮಂಗಳೂರು: ಅವೈಜ್ಞಾನಿಕ ಕಾಮಗಾರಿಗಳು, ತಮ್ಮ ಮನೆ ಎದುರಿನ ಚರಂಡಿ ಮುಚ್ಚಿ ವಾಹನಕ್ಕೆ ದಾರಿ ಮಾಡಿಕೊಳ್ಳುವ ನಾಗರಿಕರು, ಸುಸಜ್ಜಿತ ಚರಂಡಿ ಇರುವಲ್ಲಿ ಬೇಸಗೆಯಲ್ಲಿ ತಮ್ಮ ಮನೆ-ಅಂಗಡಿಗಳ ಕಸ-ತ್ಯಾಜ್ಯ, ಪ್ಲಾಸ್ಟಿಕ್ ತುರುಕಿ ಮಳೆ ನೀರಿನ ಹರಿವಿಗೆ ತಡೆ ಮಾಡುವ ಸ್ವಾರ್ಥಿಗಳು, ಇದೆಲ್ಲದಕ್ಕೂ ಸಾಥ್ ನೀಡುವಂತಿರುವ ಬೇಜವಾಬ್ದಾರಿಯ ಅಧಿಕಾರಿಗಳು ಮಳೆಯನ್ನು ಆನಂದಿಸುತ್ತಿದ್ದ ಮಂಗಳೂರಿಗರು ಮಳೆ ಎಂದರೆ ರೋಸಿ ಹೋಗುವಂತೆ ಮಾಡಿದ್ದಾರೆ.
ಚಂದ್ರಲೋಕಕ್ಕೆ ವಿದೇಶೀ ಉಪಗ್ರಹಗಳನ್ನು ಕಳಿಸುತ್ತಿರುವ ಸಾಧನೆ ನಮ್ಮ ದೇಶದ್ದು, ದುರಂತ ಎಂದರೆ ರಸ್ತೆ ನಿರ್ಮಾಣ ಮಾಡುವಾಗ ಪಕ್ಕದ ಗುಡ್ಡಗಳನ್ನು ತೊಂಬತ್ತು ಡಿಗ್ರಿಯ ಕೋನದಲ್ಲಿ ಅಂದರೆ ಲಂಬ ಕೋನದಲ್ಲಿ ಅಗೆಯಬಾರದು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದ ಇಂಜಿನಿಯರ್ ಗಳು,ಒಂದು ವೇಳೆ ಜ್ಞಾನ ಇದ್ದರೂ ಅದನ್ನು ಬಳಸದ ಪರ್ಸಂಟೇಜ್ ಕೊಟ್ಟರೆ ಸಾಕು ನಾವು ನಿರುಮ್ಮಳ ಎನ್ನುವ ಇಂಜಿನಿಯರ್- ಗುತ್ತಿಗೆದಾರರ ಕೂಟಗಳು, ಪಂಚ ಗ್ಯಾರಂಟಿ ಕೊಟ್ಟಿದ್ದೇವೆ.. ಪ್ರಜೆಗಳು ತೃಪ್ತಿಯಿಂದಿದ್ದಾರೆ ಎಂದು ನಂಬಿಸಿಕೊಂಡಿರುವ ಸರಕಾರದ ನಾಯಕರು..ಇಂತಹವರ ನಡುವೆ ಕರಾವಳಿಯ ನಾಗರಿಕರಿಗೆ ಮಳೆ ಎಂಬುದೇ ದುಃಸ್ವಪ್ನವಾಗುತ್ತಿದೆ.
ಉಡುಪಿ ಕಡೆಯಿಂದ ಬರುವಾಗ ಎದುರಾಗುವ ಕೊಟ್ಟಾರ ಚೌಕಿ ಎಂಬ ಮಂಗಳೂರು ಕೇಂದ್ರ ಭಾಗದ ಮುಖ ಮಳೆ ಬಂದರೆ ಮುಳುಗಡೆ ಎಂಬ ವಾರ್ಷಿಕ ಸಮಸ್ಯೆಯನ್ನು ಎದುರಿಸುತ್ತದೆ. ಇಲ್ಲಿ ರಾಜ ಕಾಲುವೆಯ ಒತ್ತುವರಿಯಾಗಿದೆ. ಜನ ತೋಡುಗಳನ್ನು ಮುಚ್ಚಿ ಕಾಂಪೌಂಡ್ , ಮನೆಗಳನ್ನು ಕಟ್ಟಿದ್ದಾರೆ. ಇಲ್ಲಿ ತೋಡುಗಳ ಗಾತ್ರ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಬಿ.ಸಿ.ರೋಡ್ ಭಾಗದಿಂದ ಬರುವಾಗ ಮಂಗಳೂರಿಗೆ ಪ್ರವೇಶದ್ವಾರದಂತಿರುವ ಪಡೀಲ್ ರೈಲ್ವೆ ಸೇತುವೆಯ ಕೆಳಭಾಗದ ರಸ್ತೆ ಮಳೆಗಾಲದಲ್ಲಿ ನೀರು ತುಂಬಿಕೊಂಡು ಕೆರೆಯಾಗುತ್ತದೆ. ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಬಳಿಕ ಅಲ್ಲಿ ಮಳೆ ಬಂದರೆ ಬೋಟು ಇಡಬೇಕಾದಂತಹ ಸ್ಥಿತಿ. ಸೊಂಟ ಮಟ್ಟ ನೀರು ನಿಂತು ವಾಹನ ಪ್ರಯಾಣ, ನಡೆದುಕೊಂಡು ಹೋಗುವುದೂ ಅಸಾಧ್ಯ. ಮಳೆಗಾಲದಲ್ಲಿ ಇಲ್ಲೊಂದು ಅತ್ಯಂತ ಸೌಹಾರ್ದದ ವಾತಾವರಣ ಏರ್ಪಡುತ್ತದೆ. ಮುಳುಗಡೆಯಾದ ರಸ್ತೆಯಲ್ಲಿ ಪಾದಚಾರಿಗಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸಲು ಸಮಾಜ ಸೇವಕರು, ಪರೋಪಕಾರಿಗಳು ತಂಡ ಕಟ್ಟಿ ನಿಲ್ಲುತ್ತಾರೆ.ಅವರಿಗೆ ಬಾಯ್ತೆರೆದ ಚರಂಡಿಗಳು ಎಲ್ಲಿವೆ, ಮರಣ ಪ್ರಾಯವಾದ ರಸ್ತೆ ಹೊಂಡಗಳು ಎಲ್ಲಿವೆ ಎಂಬುದು ಅಂಗೈ ಗೆರೆಗಳಷ್ಟು ಸ್ಪಷ್ಟವಾಗಿ ಗೊತ್ತಿರುತ್ತವೆ. ಸರಕಾರಿ ಅಧಿಕಾರಿಗಳನ್ನು ಇಂತಹ ಸ್ಥಿತಿಯಲ್ಲಿ ನಯಾ ಪೈಸೆಗೂ ನಂಬುವಂತಿಲ್ಲ. ಹಾಗೆ ನಂಬುವವರು ಮಳೆ ನೀರು ಇಳಿಯುವವರೆಗೆ ಮೆಲ್ಸೇತುವೆಯ ಮೇಲೆ ಕಳೆಯಬೇಕು ಅಥವಾ ಬೆಳಕಾಗುವವರೆಗೆ ಕಾಲ ಹರಣ ಮಾಡಬೇಕಾದೀತು. ಇಲ್ಲಿ ಸಂಕಷ್ಟದ ಸಮಯದಲ್ಲಿ ರೂಪುಗೊಳ್ಳುವ ತಂಡ ತುರ್ತಾಗಿ ಸಾಗಬೇಕಾದ ಅಂಬುಲೆನ್ಸ್ ಗಳನ್ನು ದೂಡಿಕೊಂಡು ನೀರಿನಿಂದ ಮೇಲೆ ತಂದು ತುರ್ತಾಗಿ ಹೋಗಲು ದಾರಿ ಮಾಡಿಕೊಡುತ್ತದೆ, ಯಂತ್ರಶಕ್ತಿಯ ವಾಹನಗಳನ್ನು ಮಾನವ ಶಕ್ತಿ ಬಳಸಿ ನೀರು ಪಾಲಾಗದಂತೆ ನೋಡಿಕೊಳ್ಳುತ್ತದೆ.
ಮೇಲ್ಸೇತುವೆ ನಿರ್ಮಾಣ ವಿಳಂಬ ಮತ್ತು ನೀರು ನಿಂತು ಮುಳುಗಡೆಯಾಗುವ ಇಲ್ಲಿಯ ರಸ್ತೆಯ ಕಾರಣದಿಂದ ಸಂಸತ್ ಸದಸ್ಯರಾಗಿದ್ದಾಗ ನಳಿನ ಕುಮಾರ್ ಕಟೀಲ್ ಸಾಮಾಜಿಕ ಮಾಧ್ಯಮಗಳಲ್ಲಿ ಸತತ ಟ್ರೋಲ್ ಆಗುತ್ತಿದ್ದರು. ಪಂಪ್ ವೆಲ್ ಫ್ಲೈಓವರ್ ಉದ್ಟಾಟನೆಗೆ ಟ್ರಂಪ್ ಬರ್ಪೆರ್ ಎಂಬಲ್ಲಿಯವರೆಗೂ ಆ ಸಂಸತ್ ಸದಸ್ಯರನ್ನು ಲೇವಡಿ ಮಾಡಲಾಗಿತ್ತು.
ಜನಕ್ಕೀಗ ಅರ್ಥವಾದಂತಿದೆ...ನಮ್ಮ ತಲೆಯ ಮೇಲೆ ನಮ್ಮ ಕೈ...ಅವರೀಗ ಓಟ್ ಹಾಕಿ ಗೆಲ್ಲಿಸಿದ ಪ್ರತಿನಿಧಿಗಳು ನಾಲಾಯಕ್ ಎಂದು ತೀರ್ಮಾಸಿದಂತಿದೆ. ಗುಡ್ಡ ಕುಸಿದು ಜೀವ ಹಾನಿ, ಗೋಡೆ ಕುಸಿದಾಗ ಚಿಮ್ಮುವ ನೀರಿನ ರೋಮಾಂಚಕ ದೃಶ್ಯ, ಕೆತ್ತಿಕಲ್ ಭೂಕುಸಿತದಲ್ಲಿ ಅಡಿಯಿಂದ ಕೊಪ್ಪರಿಗೆ ಹೋಗುತ್ತಿರಬಹುದೆಂಬ ಕಲ್ಪನೆಯಲ್ಲಿ ಅಧಿಕಾರಶಾಹಿ, ಪ್ರಭುತ್ವ ಇರುವಾಗ ಜನಜೀವನ ತಲ್ಲಣಗಳನ್ನು ಎದುರಿಸುತ್ತಿದೆ.
ಎಡ್ವರ್ಡ್ ಬುಲ್ಲೊ ಎಂಬಾತನ ಪ್ರಖ್ಯಾತ ಸಿದ್ದಾಂತ ಸೈಕಿಕಲ್ ಡಿಸ್ಟೆನ್ಸ್ ಥಿಯರಿ. ಅದು ಹೇಳುತ್ತದೆ, ಸಮುದ್ರದಲ್ಲಿ ಹಡಗು ಮುಳುಗುತ್ತಿದ್ದರೆ ಅದರಲ್ಲಿರುವ ಪ್ರಯಾಣಿಕರಿಗೆ, ಸಿಬ್ಬಂದಿಗಳಿಗೆ ಅದು ಭೀಭತ್ಸ, ದೂರದಲ್ಲಿ ನಿಂತು ನೋಡುವವರಿಗೆ ಅದೊಂದು ಸೌಂದರ್ಯಾನುಭೂತಿ. ನಮ್ಮ ಅಧಿಕಾರಶಾಹಿ ದೂರದಲ್ಲಿ ನಿಂತು ಅನಾಹುತಗಳನ್ನು ಆನಂದಿಸುತ್ತಿದೆ.ಜನ ಹೈರಾಣಾಗುತ್ತಿದ್ದಾರೆ.
00
ಅಧಿಕಾರಿಗಳನ್ನು ಬೈದಾಯಿತು, ಇಂಜಿನಿಯರ್ ಗಳಿಗೆ ಬಿಸಿ ಮುಟ್ಟಿಸಿಯಾಯಿತು..ಏನು ಮಾಡಿದರೂ ನಾಯಿ ಬಾಲ ಡೊಂಕೇ ಶಿವ ಎಂಬಂತಾಯಿತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕಥೆ.
ಅಶೋಕ್ ಕುಮಾರ್ ರೈ ಸದಾ ಜನರ ಕೈಗೆ ಸಿಗುವ, ಜನರೊಂದಿಗಿರುವ ಶಾಸಕ ಎನ್ನುತ್ತಾರೆ ಅವರ ಅಭಿಮಾನಿಗಳು. ಯಾರೇ ಹೋದರೂ ಅವರ ಮುಖ ಗಂಟಾದುದಿಲ್ಲ. ಚಿಕ್ಕಿ ಕೊಟ್ಟು ಅಹವಾಲು ಕೇಳುವ ಸಂಪ್ರದಾಯ ಪುತ್ತೂರಿನಲ್ಲಿ ಆರಂಭಿಸಿದ ಶಾಸಕ ಅವರು. ವರ್ಷಕ್ಕೊಮ್ಮೆ ಪುತ್ತೂರಿನಲ್ಲಿ ದೀಪಾವಳಿ ಆಸುಪಾಸಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ಬಟ್ಟೆ ಹಂಚುವ ಉದಾರಿ ಅವರು.ಇದಕ್ಕೆ ಮಾಡುವ ಖರ್ಚು ಕೂಡಾ ಕೋಟಿಯ ಆಸುಪಾಸು.
ಹಟ ಹಿಡಿದು ಪುತ್ತೂರಿಗೆ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಜೂರು ಮಾಡಿಸಿಕೊಂಡ ಮಹಾನುಭಾವ. ಇಷ್ಟೆಲ್ಲ ಹಿನ್ನೆಲೆ ಇಟ್ಟುಕೊಂಡು ಈ ವೀಡಿಯೋ ನೋಡಿದರೆ, ಶಾಸಕ ರೈಗಳಿಗೆ ಯಾವ ಮಟ್ಟದ ಬೇಜಾರ್ ಅಧಿಕಾರಿಗಳಿದಾಗುತ್ತಿದೆ ಎಂಬ ಅಂದಾಜು ಸಿಗುತ್ತದೆ.
ಅದ್ಯಾಕೋ ಏನೋ ಈ ವರ್ಷ ಕಾಟಾಚಾರಕ್ಜಾದರೂ ಚರಂಡಿ, ತೋಡು ಸ್ವಚ್ಚ ಮಾಡುವುದನ್ನು ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಇದರಿಂದ ಚರಂಡಿ ನೀರು ರಸ್ತೆಯಲ್ಲಿ ದಾರಿ ಹುಡುಕಿಕೊಂಡು ಓಡುತ್ತಿದೆ.ಅದರ ಓಟಕ್ಕೆ ರಸ್ತೆ ಕೊಚ್ಚಿಕೊಂಡು ಹೋಗುತ್ತಿದೆ.
ಇನ್ನು ಈ ಅಧಿಕಾರಿಗಳಿಗೆ ಹೇಳಿದರೆ ಸುಖ ಇಲ್ಲ. ನಾಯಿ ಬಾಲ ಸರ್ತ ಆಗುವುದಿಲ್ಲ, ವಿರೋಧ ಪಕ್ಷದವರು ಕೆಲಸ ಮಾಡಿಸದಿರುವುದಕ್ಕೆ ಶಾಸಕರ ವೈಫಲ್ಯ ಕಾರಣ ಎಂದು ಹೇಳುವುದು ಗ್ಯಾರಂಟಿ ಎಂಬುದನ್ನು ನಿಕ್ಕಿ ಮಾಡಿಕೊಂಡ ರೈಗಳು ಹಾರೆ ಪಿಕ್ಜಾಸು ಹಿಡಿದು ನೀರು ರಸ್ತೆ ಬಿಟ್ಟು ತೋಡಿನಲ್ಲಿ ಹೋಗಲಿ ಎಂದು ಮಣ್ಣು ಗರ್ಪಿ ನೀರಿಗೆ ದಾರಿ ತೋರಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಯು.ಟಿ. ಖಾದರ್ ಕೂಡ ಹಾರೆ ಹಿಡಿದು ತೋಡು ತೋಡಿದ್ದರು. ಅಂತೂ ಅಧಿಕಾರಿಗಳು ಸಂಬಳ ತಿಂದು ಆರಾಮವಾಗಿದ್ದಾರೆ. ಲಂಚ ಕಾಲ ಬುಡಕ್ಕೆ ಬರುತ್ತಿದೆ. ಜನರ ಬೈಗುಳ ಬೇಡವೆಂದು ಶಾಸಕರು ಹಾರೆ ಪಿಕ್ಕಾಸು ಹಿಡಿದು ಅಸಹಾಯಕತೆ ತೋರಿಸುತ್ತಿದ್ದಾರೆ. ಜನಪರ ಚಳವಳಿಗಳು ಗೈರು ಹಾಜರಾದರೆ ಪ್ರಜಾಪ್ರಭುತ್ವ ಹೇಗೆ ಎಕ್ಕುಟ್ಟಿ ಹೋಗುತ್ತದೆ ಎನ್ನುವುದಕ್ಕೆ ಇದೊಂದು ಹೊಳೆಯುವ ಉದಾಹರಣೆ.