ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಸಚಿವ ಜಿ . ಪರಮೇಶ್ವರ್ ಭೇಟಿ
ತುಮಕೂರು , ಜೂ, 10-ತುಮಕೂರಿನ ಕ್ಯಾತ್ಸಂದ್ರದ ಮೈದಾಳ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗೃಹ ಸಚಿವ ಜಿ . ಪರಮೇಶ್ವರ್ ಪರಿಶೀಲನೆ ನಡೆಸಿದರು.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಊಟದ ವ್ಯವಸ್ಥೆ, ಶುಚಿತ್ವ, ಲೈಬ್ರರಿ, ಕಂಪ್ಯೂಟರ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಪರಿಶೀಲಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಒಟ್ಟು 262 ಹಾಸ್ಟೆಲ್‌ಗಳಿದ್ದು, 25,450 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ತುಮಕೂರು ನಗರದಲ್ಲಿ 58 ಹಾಸ್ಟೆಲ್‌ಗಳಿವೆ. 10,544 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ.
ತುಮಕೂರಿನಲ್ಲಿ ಹಾಸ್ಟೆಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ತುಮಕೂರು ನಗರಕ್ಕೆ 6 ಹೊಸ ಹಾಸ್ಟೆಲ್‌ಗಳು ಮಂಜೂರಾಗಿವೆ. ಪ್ರಸಕ್ತ ವರ್ಷದಿಂದ ಬಾಡಿಗೆ ಕಟ್ಟಡಗಳಲ್ಲಿ ಹಾಸ್ಟೆಲ್‌ಗಳನ್ನು ಪ್ರಾರಂಭಿಸಲಾಗಿದೆ. ಒಂದು ಹಾಸ್ಟೆಲ್‌ಗೆ 4 ರಿಂದ 5 ಕೋಟಿ ರೂ. ಖರ್ಚಾಗಲಿದ್ದು, ಶೀಘ್ರದಲ್ಲಿ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಈ 6 ಹೊಸ ಹಾಸ್ಟೆಲ್‌ಗಳಲ್ಲಿ 750 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.
ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಎರಡು ಹಾಸ್ಟೆಲ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದನ್ನು ಶೀಘ್ರದಲ್ಲಿ ಕಾರ್ಯಗತ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.