ವಸತಿ ಸಮುಚ್ಚಯಗಳು, ಬೃಹತ್ ವಾಣಿಜ್ಯ ಸಂಸ್ಥೆಗಳಲ್ಲಿ ಕಡ್ಡಾಯ ಸಂಸ್ಕರಿಸಿದ ತ್ಯಾಜ್ಯ ನೀರು ಮರುಬಳಕೆಗೆ ಕಾನೂನು ಜಾರಿ ಅಗತ್ಯ : ಎ.ಎನ್. ಯಲ್ಲಪ್ಪ ರೆಡ್ಡಿ

Banglore:

Font size:

ವಸತಿ ಸಮುಚ್ಚಯಗಳು, ಬೃಹತ್ ವಾಣಿಜ್ಯ ಸಂಸ್ಥೆಗಳಲ್ಲಿ ಕಡ್ಡಾಯ ಸಂಸ್ಕರಿಸಿದ ತ್ಯಾಜ್ಯ ನೀರು ಮರುಬಳಕೆಗೆ ಕಾನೂನು ಜಾರಿ ಅಗತ್ಯ : ಎ.ಎನ್. ಯಲ್ಲಪ್ಪ ರೆಡ್ಡಿ

- ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದಿಂದ ವಿಶ್ವ ಪರಿಸರ ದಿನಾಚರಣೆ: “ಪ್ಲಾಸ್ಟಿಕ್ ತ್ಯಾಜ್ಯ ಕೊನೆಗಾಣಿಸಿ” ಅಭಿಯಾನಕ್ಕೆ ಚಾಲನೆ

ಬೆಂಗಳೂರು, ಜೂ, 5 ; ವಸತಿ ಸಮುಚ್ಚಯಗಳು, ಇನ್ನಿತರ ಬೃಹತ್ ವಾಣಿಜ್ಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ ಮಾಡುವ ಬಗ್ಗೆ ಕಾನೂನು ಜಾರಿ ಮಾಡಬೇಕು ಎಂದು ಹಿರಿಯ ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.

ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದಿಂದ ಕಾವೇರಿ ಭವನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡನೆಟ್ಟು “ಪ್ಲಾಸ್ಟಿಕ್ ತ್ಯಾಜ್ಯ ಕೊನೆಗಾಣಿಸಿ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆ ಮಾಡುವುದರಿಂದ ನಗರದಲ್ಲಿ ನೀರಿನ ಅವಲಂಬನೆ ತಪ್ಪಲಿದೆ. ಜೊತೆಗೆ ಬೆಂಗಳೂರಿನ ರಾಜಕಾಲುವೆಗಳಲ್ಲಿ ಮಳೆ ನೀರು ಇಂಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಇದರಿಂದ ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗಲಿದೆ ಎಂದರು.

ಲೋಕ್ ಅದಾಲತ್ ಗಳಲ್ಲಿ ದಾಖಲಾಗುತ್ತಿರುವ ದೂರುಗಳನ್ನು ಬಗೆಹರಿಸಲು ಜಲಮಂಡಳಿ ಸಹಯೋಗ ಹೊಂದಿರುವುದು ಉತ್ತಮ ಬೆಳವಣಿಗೆ. ಮರಳು ಗಣಿಗಾರಿಕೆಯಿಂದ ಪರಿಸರ ನಾಮಾವಶೇಷವಾಗುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ಕೂಡ ಪ್ರಕೃತಿ ಉಳಿವಿಗೆ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ ಎಂದರು.

ವಿಶಿಷ್ಟ ಸೇವಾ ಪದಕ ಪುರಸ್ಕೃತ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ್ ಮಾತನಾಡಿ, ಪ್ಲಾಸ್ಟಿಕ್ ನಿಂದ ಊಹೆಗೂ ಮೀರಿ ಅಪಾಯ ಎದುರಾಗಿದ್ದು, ಈ ವರ್ಷ ಪ್ಲಾಸ್ಟಿಕ್ ನಿರ್ಮೂಲನೆಯಾಗಲೇಬೇಕು. ಪ್ಲಾಸ್ಟಿಕ್ ನಿಂದ ರಸ್ತೆ ನಿರ್ಮಿಸುವುದು ಸೇರಿದಂತೆ ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ವಿದೇಶಗಳಲ್ಲಿ ಪ್ಲಾಸ್ಟಿಕ್ ವೈಜ್ಞಾನಿಕವಾಗಿ ಮರು ಬಳಕೆಯಾಗುತ್ತಿದ್ದು, ಇಂತಹ ಉತ್ತಮ ಅಭ್ಯಾಸಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಲಮಂಡಳಿಯ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಅಭಿಯಂತರ ಬಿ. ಸುರೇಶ್, ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದ ಅಧ್ಯಕ್ಷ ಬಿ.ಸಿ. ಗಂಗಾಧರ್, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ. ರಾಜಶೇಖರ, ಖಜಾಂಚಿ ಎಸ್. ಚಂದ್ರಶೇಖರ್ , ಜಲಮಂಡಳಿಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Prev Post ಮಹಾರಾಷ್ಟ್ರ ಸಿಎಂ ಆಲಮಟ್ಟಿ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ: ಬಸವರಾಜ ಬೊಮ್ಮಾಯಿ
Next Post ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸಿಂಧೂರ ಗಿಡವನ್ನು ನೆಟ್ಟರು.