ಎರಡು ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Banglore:

Font size:

ಎರಡು ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು, ಜೂನ್‌ 2

ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಎಲ್ಲ ರೈತರನ್ನು ಹಾಗೂ ಸರ್ವಪಕ್ಷಗಳ ಪ್ರಮುಖರನ್ನು ಕರೆದು ಸಭೆ ಮಾಡಿ ಚರ್ಚಿಸಬೇಕು. ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಗೆ ಹೇಮಾವತಿ ನೀರು ನೀಡಲು ತುಮಕೂರಿನ ರೈತರು ಪ್ರತಿಭಟಿಸುತ್ತಿರುವಾಗ, ಎರಡೂ ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ರೈತರ ಜೊತೆ ಸರ್ಕಾರ ಚರ್ಚಿಸಬೇಕಿತ್ತು. ಈ ಕೆಲಸವನ್ನು ಸರ್ಕಾರ ಮಾಡದೆಯೇ ರೈತರ ನಡುವೆಯೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ರೈತರಿಗೆ ಮನವರಿಕೆ ಮಾಡುವ ಬದಲು ಬೆದರಿಕೆ ಹಾಕುವುದು ಒಳ್ಳೆಯದಲ್ಲ. ಎಲ್ಲ ರೈತರನ್ನು ಸಮಭಾವದಿಂದ ನೋಡಬೇಕೆ ಹೊರತು, ಮಠಾಧೀಶರ ಮೇಲೆ, ಜನಪ್ರತಿನಿಧಿಗಳ ಮೇಲೆ ಕೇಸು ಹಾಕಬಾರದು. ಕಾಂಗ್ರೆಸ್‌ನ ಶಾಸಕರೇ ಆದ ಗುಬ್ಬಿ ಶ್ರೀನಿವಾಸ್‌ ಕೂಡ ಇದರ ವಿರುದ್ಧ ನಿಂತಿದ್ದಾರೆ ಎಂದರು.

ರೈತರ ವಿರುದ್ಧ ಪ್ರಕರಣ ದಾಖಲಿಸುವುದು ಅಕ್ಷಮ್ಯ ಅಪರಾಧ. ರೈತರ ಜೊತೆಗೆ ಚರ್ಚಿಸಿ ಸಮನ್ವಯ ಸಾಧಿಸಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕುರ್ಚಿ ಹೋದರೆ ಅಧಿಕಾರವೇ ಇರುವುದಿಲ್ಲ. ರಾಜ್ಯ ಸರ್ಕಾರ ಎರಡು ಜಿಲ್ಲೆಗಳ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು, ಕೇಸುಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಹಿಂದೂಗಳೇ ಗುರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಸ್ಕ್‌ ಫೋರ್ಸ್‌ ಮಾಡಿ, ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕೋಮುವಾದದ ವಿರುದ್ಧ ಅಲ್ಲ, ಹಿಂದೂಗಳ ವಿರುದ್ಧ ಇರುವ ಫೋರ್ಸ್‌. ಈ ಹಿಂದೆ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಘಟನೆ ನಡೆದು ಎಷ್ಟೋ ದಿನಗಳಾದ ನಂತರ ಪ್ರಕರಣ ದಾಖಲಿಸಲಾಗುತ್ತಿದೆ. ಸುಳ್ಳು ಅಪಾದನೆ ಮಾಡಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರೆ, ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕಾಂಗ್ರೆಸ್‌ ಪಕ್ಷದಿಂದ ಕರಾವಳಿ ಭಾಗಕ್ಕೆ ಹಣ ಬರುತ್ತಿಲ್ಲ. ಕಾಂಗ್ರೆಸ್‌ನ ಭಿಕ್ಷೆಯಿಂದ ಅಲ್ಲಿನ ಜನರು ಬದುಕುತ್ತಿಲ್ಲ. ಜನರ ಹಣದಲ್ಲೇ ಕಾಂಗ್ರೆಸ್‌ ನಾಯಕರು ಬದುಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಕರಾವಳಿ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಗ್ರೇಟರ್‌ ಬೆಂಗಳೂರು ರಚನೆ ಮಾಡಿದ ನಂತರ ಅಭಿವೃದ್ಧಿ ಕಾರ್ಯ ಆಗಿದೆಯೇ ಎಂದು ನೋಡಬೇಕು. ಬೆಂಗಳೂರಿನಲ್ಲಿ ಎಲ್ಲ ರಸ್ತೆಗಳಲ್ಲಿ ಗುಂಡಿಗಳಿವೆ. ರಸ್ತೆಗಳನ್ನು ದುರಸ್ತಿ ಮಾಡುವ ಯೋಗ್ಯತೆಯೇ ಸರ್ಕಾರಕ್ಕೆ ಇಲ್ಲ. ಕಸ ವಿಲೇವಾರಿ ಮಾಡಲು ಗುತ್ತಿಗೆದಾರರಿಗೆ ಜನವರಿಯಿಂದಲೇ ಬಿಲ್‌ ಪಾವತಿ ಮಾಡಿಲ್ಲ. ಹೊರರಾಜ್ಯದವರಿಗೆ ಗುತ್ತಿಗೆ ನೀಡಿ ಕಸದ ಲಾಬಿ ಸೃಷ್ಟಿ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ಚುನಾವಣೆ ಮಾಡಿದರೆ ಯಾವ ಮುಖ ಇಟ್ಟುಕೊಂಡು ಜನರ ಬಳಿಗೆ ಹೋಗುತ್ತಾರೆ? ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆಗೆ ಆಗ್ರಹಿಸಿ ತಮಿಳುನಾಡು ಸರ್ಕಾರದ ಮುಂದೆ ಪ್ರತಿಭಟಿಸಲು, ಕಲ್ಲು ಹೊಡೆಯಲು ನಾವು ಸಿದ್ಧರಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಇದಕ್ಕೆ ಸಿದ್ಧರಿದ್ದಾರೆಯೇ? ಇಲಾಖೆಗಳಿಗೆ ಅನುದಾನ ನೀಡದೆಯೇ ಸಚಿವರಿಗೆ ಕೆಲಸ ಮಾಡಲು ಆಗುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ ಹಣ ನೀಡಿಲ್ಲ. ಜೋಳ ಖರೀದಿ ಕೇಂದ್ರಗಳಿಗೆ ಹಣ ನೀಡಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಸಂಬಳಕ್ಕೆ ಹಣ ಕೊಟ್ಟಿಲ್ಲ ಎಂದರು.

ನಟ ಕಮಲ್‌ ಹಾಸನ್‌ ಅವರ ಯಾವುದೇ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಕನ್ನಡದ ವಿಚಾರಕ್ಕೆ ಬಂದಾಗ ಎಲ್ಲರೂ ಸ್ಪಷ್ಟವಾಗಿರಬೇಕು. ಕನ್ನಡದ ಎಲ್ಲ ಕಲಾವಿದರು ಕನ್ನಡದ ಪರವಾಗಿ ಮಾತಾಡಬೇಕು ಎಂದರು.

Prev Post ದೇಶಿಯ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಕೇಂದ್ರದಿಂದ ಬೃಹತ್‌ ಯೋಜನೆ ₹4,150 ಕೋಟಿ ಹೂಡಿಕೆ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Next Post 600 ಕೋಟಿ ರೂ. ವೆಚ್ಚದ ನೈಡೆಕ್ ನೂತನ ಘಟಕಕ್ಕೆ ಚಾಲನೆ ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ: ಎಂ ಬಿ ಪಾಟೀಲ