ಯಕ್ಷಗಾನ ಶ್ರೇಷ್ಠ ಕಲೆ, ತುಳುನಾಡಿನಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ“ -ಕನ್ಯಾನ ಸದಾಶಿವ ಶೆಟ್ಟಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ-2025
from ; Jayaram Udupi
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ “ದಶಮ ಸಂಭ್ರಮ” ಕಾರ್ಯಕ್ರಮ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಕಟೀಲು ದುರ್ಗಾಪರಮೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಪ್ರಾಸ್ತಾವಿಕ ಮಾತನ್ನಾಡಿದ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅವರು, “ಇಂದು ಮೂರು ವೇದಿಕೆಗಳಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಇಷ್ಟೊಂದು ಯಶಸ್ವಿಯಾಗಿ ನಡೆಯಬೇಕಾದರೆ ಕೇಂದ್ರೀಯ ಸಮಿತಿಯ ಪ್ರತೀ ಪದಾಧಿಕಾರಿಗಳು, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮವಿದೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಟ್ಲ ಫೌಂಡೇಶನ್ ದಾನಿಗಳ ನೆರವಿನಿಂದ ಇನ್ನಷ್ಟು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಎಲ್ಲರ ಒಗ್ಗಟ್ಟಿನಲ್ಲಿ ಮಾತ್ರ ಸಾಧ್ಯ” ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಹೇರಂಭ ಇಂಡಸ್ಟ್ರಿಸ್ ಸಿಎಂಡಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಮಾತಾಡಿ, ”ನನಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಭಾಗವಾಗಿರಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದಕ್ಕಾಗಿ ಎಲ್ಲಾ ಪದಾಧಿಕಾರಿಗಳು, ದೇಶ ವಿದೇಶದಲ್ಲಿರುವ ಘಟಕದ ಪದಾಧಿಕಾರಿಗಳಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ. ಪಾರ್ತಿಸುಬ್ಬರಿಂದ ಆರಂಭವಾದ ಯಕ್ಷಗಾನ ಕ್ಷೇತ್ರ ಇಂದು ಪಟ್ಲ ಸತೀಶ್ ಶೆಟ್ಟಿ ಅವರಿಂದ ಬೆಳಗುತ್ತಿದೆ. ಹಲವಾರು ಜನ ಯಕ್ಷಾಭಿಮಾನಿಗಳು, ದಾನಿಗಳು ಈ ಫೌಂಡೇಶನ್ ಬೆಳಗಲು ಕಾರಣರಾಗಿದ್ದಾರೆ. ಯಕ್ಷಗಾನ ನಮ್ಮ ತುಳುನಾಡಿನ ಶ್ರೇಷ್ಠ ಕಲೆ. ಇಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ. ಪರಿಪೂರ್ಣವಾದ ಕಲೆಯನ್ನು ಬೇರೆ ಯಾವ ಪ್ರದೇಶದಲ್ಲೂ ನಾನು ನೋಡಿಲ್ಲ. ಯಕ್ಷಗಾನ ಮೂಲಕ ನಾವು ಮಕ್ಕಳಿಗೆ ಧಾರ್ಮಿಕ ಶಿಕ್ಷಣ, ಸಂಸ್ಕಾರವನ್ನು ನೀಡುತ್ತಿದ್ದೇವೆ. ಇಂತಹ ಕಾರ್ಯ ನಿರಂತರವಾಗಿ ಮುಂದುವರಿಯಲಿ“ ಎಂದರು.
ದಶಮಾನೋತ್ಸವ ಸಂಭ್ರಮದ ಅಧ್ಯಕ್ಷ ಬರೋಡಾ ಶಶಿಧರ್ ಶೆಟ್ಟಿ ಮಾತಾಡಿ, “ಇಲ್ಲಿ ಇಷ್ಟು ಜನರು ಸೇರಿರುವುದು ಪಟ್ಲ ಸತೀಶ್ ಶೆಟ್ಟಿಯವರ ಅಭಿಮಾನದಿಂದ. ನಾವು ದಶಮಾನೋತ್ಸವ ಸಂಭ್ರಮಕ್ಕೆ 10 ಕೋಟಿ ರೂ. ಒಟ್ಟುಗೂಡಿಸುವ ಉದ್ದೇಶ ಹೊಂದಿದ್ದೆವು ಆದರೆ ನಿರೀಕ್ಷೆಗೂ ಮೀರಿ 15 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹಗೊಂಡಿದೆ. ನಮ್ಮದು ಸಾವಿರದ ಕನಸು, ಪಟ್ಲ ಫೌಂಡೇಶನ್ ನ ಮುಂದಿನ ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲಿ ಎಂದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಆಶೀರ್ವಚನದ ಮಾತನ್ನಾಡಿ, “ಒಂದು ಸಂಘಟನೆ ಮನಸ್ಸು ಮಾಡಿದಲ್ಲಿ 10 ವರ್ಷಗಳಲ್ಲಿ ಸಮಾಜಕ್ಕೆ ಯಾವ ಸೇವೆ ಸಲ್ಲಿಸಬಹುದು ಅನ್ನುವುದಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಉದಾಹರಣೆ. ಇದೊಂದು ಮ್ಯಾಜಿಕ್ ಎಲ್ಲಾ ಕಲಾಭಿಮಾನಿಗಳಿಗೆ ಇದೊಂದು ಅಚ್ಚರಿ. ಇದರ ರೂವಾರಿ ಪಟ್ಲ ಸತೀಶ್ ಶೆಟ್ಟಿ ಅವರಿಂದ ಇದೆಲ್ಲವೂ ಸಾಧ್ಯವಾಗಿದೆ. ಜಿಲ್ಲೆಯ ಬೇರೆ ಬೇರೆ ರಂಗದ ಕಲಾವಿದರಿಗೆ ಆರೋಗ್ಯ, ಬಡ ಕಲಾವಿದರಿಗೆ ಆಶ್ರಯಕ್ಕೆ ಮನೆ, ಆಸರೆ ಎಲ್ಲವನ್ನೂ ಟ್ರಸ್ಟ್ ಒದಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದಶಮಾನೋತ್ಸವ ಸಂಭ್ರಮ ಇಂದು ವಿನೂತನ, ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಡೆಯುತ್ತಿದೆ. ಈ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸವಾಗುತ್ತಿದೆ. ಟ್ರಸ್ಟ್ ಪದಾಧಿಕಾರಿಗಳು, ದಾನಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತೇನೆ“ ಎಂದರು.
ವೇದಿಕೆಯಲ್ಲಿ ಒಡಿಯೂರು ಮಠದ ಮಾತಾನಂದಮಯಿ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಉದ್ಯಮಿ ಕಟೀಲು ದಿವಾಕರ್ ರಾವ್, ಸಂಜೀವಿನಿ ಆಸ್ಪತ್ರೆ ಮುಖ್ಯಸ್ಥ ಡಾ.ಸುರೇಶ್ ರಾವ್ ಕಟೀಲು, ಫೌಂಡೇಶನ್ ನ ಮಹಾದಾನಿ ಎಂ.ಎಲ್. ಸಾಮಗ ಉಡುಪಿ, ನಿಟ್ಟೆ ಯುನಿವರ್ಸಿಟಿಯ ಸತೀಶ್ ಭಂಡಾರಿ, ಕನ್ಯಾನ ರಘುರಾಮ ಶೆಟ್ಟಿ, ಸಿಎ ಸುಭಾಷ್ಚಂದ್ರ ಬೆಹರಿನ್, ಶ್ಯಾಮ್ ಪ್ರಸಾದ್, ಪಳ್ಳಿ ಕಿಶನ್ ಹೆಗ್ಡೆ, ಸಿಎ ಸುರೇಂದ್ರ ಶೆಟ್ಟಿ, ಪೆರ್ಮುದೆ ಅಶೋಕ್ ಶೆಟ್ಟಿ, ಪ್ರೊಫೆಸರ್ ಡಾ.ಮನು ರಾವ್, ಕೆರೆಕಟ್ಟೆ ಉದಯ ಶೆಟ್ಟಿ, ಪ್ರೀತಮ್ ಶೆಟ್ಟಿ, ಕೇಂದ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ, ಕದ್ರಿ, ಕರುಣಾಕರ ರೈ ದೇರ್ಲ, ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ದುರ್ಗಾಪ್ರಸಾದ್, ನಾಗಭೂಷಣ್, ಸವಣೂರು ಸೀತಾರಾಮ್ ರೈ, ಲಯನ್ ತಾರಾನಾಥ್ ಶೆಟ್ಟಿ ಬೋಳಾರ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಕುಣಿತ ಭಜನಾ ಸ್ಪರ್ಧೆಯನ್ನು ಒಡಿಯೂರು ಕ್ಷೇತ್ರದ ಮಾತಾನಂದಮಯಿ ಉದ್ಘಾಟಿಸಿದರು.
ಯಕ್ಷಗಾನ ಕ್ಷೇತ್ರದ ಸಾಧಕಿ ಆರ್ಷಿಯ ತನು ವಿಟ್ಲರನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು.
ಕದ್ರಿ ನವನೀತ್ ಶೆಟ್ಟಿ, ಪೃಥ್ವಿ ಕಾರಿಂಜ ಕಾರ್ಯಕ್ರಮ ನಿರೂಪಿಸಿದರು. ರವಿಚಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
*“ನಾನು ಪಟ್ಲರ ಮೇಳಕ್ಕೆ ಬೆಳ್ಳಿ ತೊಟ್ಟಿಲು ನೀಡಿದ ಬಳಿಕ ಬಹಳಷ್ಟು ಅಭಿವೃದ್ಧಿಯನ್ನು ಕಂಡೆ!” -ಡಾ.ಕೆ.ಪ್ರಕಾಶ್ ಶೆಟ್ಟಿ*
*ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗೆ ಮಹಾಪೋಷಕ ಪ್ರಶಸ್ತಿ ಪ್ರದಾನ!*
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮ ಸಂಭ್ರಮದ ಸಭಾ ಕಾರ್ಯಕ್ರಮ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ಸತೀಶ್ ಪಟ್ಲರಿಗೆ ಅವರ ಕಂಠವೇ ದೇವರು, ಆದರೆ ಯಕ್ಷಗಾನ ಕಲಾವಿದರಿಗೆ ಸತೀಶ್ ಪಟ್ಲರೇ ದೇವರು. ಯಕ್ಷಗಾನ ಕಲಾವಿದರು ತಮ್ಮ ಕಷ್ಟವನ್ನು ಬದಿಗಿರಿಸಿ ಜನರಿಗೆ ಮನೋರಂಜನೆ ನೀಡುತ್ತಾರೆ ಎಂದಿಗೂ ಯಾರ ಮುಂದೆಯೂ ಕೈಚಾಚುವುದಿಲ್ಲ. ಅವರ ಸ್ವಾಭಿಮಾನದ ಬದುಕು ಹಾಗಿರುತ್ತದೆ, ಇಂತಹ ಕಲಾವಿದರಿಗೆ ನೆರವಾಗಲು ಯಕ್ಷಧ್ರುವ ಪಟ್ಲ ಟ್ರಸ್ಟ್ ಸ್ಥಾಪಿಸಿ ರಾತ್ರಿ ಹಗಲು ಕಲಾವಿದರ ನೋವಿಗೆ ಸ್ಪಂದಿಸಿದರು. ಅವರು ಪ್ರಾರಂಭದಲ್ಲಿ ನನ್ನ ಬಳಿ ತೊಟ್ಟಿಲು ಕೇಳಿದಾಗ ನಾನು ಹಿಂದೆ ಮುಂದೆ ಯೋಚಿಸದೆ ಬೆಳ್ಳಿ ತೊಟ್ಟಿಲು ನೀಡಿದೆ. ಆದರೆ ನಂತರ ನನ್ನ ಜೀವನದಲ್ಲಿ ವ್ಯವಹಾರದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡೆ. ನಾವೆಲ್ಲರೂ ಅವರು ಮಾಡುವ ಒಳ್ಳೆಯ ಕೆಲಸಕ್ಕೆ ಕೈಜೋಡಿಸೋಣ. ಅವರ ಸಮಾಜಮುಖಿ ಚಿಂತನೆ, ಕಾರ್ಯಗಳು ಹೀಗೆಯೇ ಮುಂದುವರಿಯಲಿ“ ಎಂದರು.
2025ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ-ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಐಕಳ ಹರೀಶ್ ಶೆಟ್ಟಿ ಅವರು, “ಪಟ್ಲ ಸತೀಶ್ ಶೆಟ್ಟಿಯವರು ಕಟೀಲು ದುರ್ಗೆಯ ದೊಡ್ಡ ಭಕ್ತರು. ವರ್ಷದಲ್ಲಿ 6 ತಿಂಗಳು ಯಕ್ಷಗಾನ ಕಲಾವಿದರಾಗಿ ದುಡಿಯುವವರು ನಂತರದ 6 ತಿಂಗಳು ಜೀವನ ನಿರ್ವಹಣೆಗೆ ಕಷ್ಟ ಪಡುವುದನ್ನು ನೋಡುತ್ತೇವೆ. ಅಂತಹ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಪಟ್ಲ ಫೌಂಡೇಶನ್ ಸ್ಥಾಪಿಸಿ ಸಾವಿರಾರು ಕಲಾವಿದರಿಗೆ ನೆರವು ನೀಡಿದ್ದಾರೆ. ನಾನು ಜೀವನ ಪೂರ್ತಿ ಈ ಸಂಘಟನೆಯ ಜೊತೆಯಲ್ಲಿ ಇರುತ್ತೇನೆ. ಸನ್ಮಾನ ಮಾಡುವುದಕ್ಕಿಂತ ಅದರ ಹಿಂದಿರುವ ಪ್ರೀತಿ ಮುಖ್ಯವಾದುದು. ಎಲ್ಲಾ ಧರ್ಮಗಳು ಕೂಡಾ ಸಹಬಾಳ್ವೆಯಿಂದ ತುಳುನಾಡಿನಲ್ಲಿ ಬದುಕುವಂತಾಗಲಿ. ಪಟ್ಲ ಒಂದು ಶಕ್ತಿ ಅದಕ್ಕೆ ಇನ್ನಷ್ಟು ಶಕ್ತಿ ತುಂಬಲು ಯುವಕರು ಮುಂದೆ ಬರಲಿ“ ಎಂದರು.
ವೇದಿಕೆಯಲ್ಲಿ ವಕ್ವಾಡಿ ಪ್ರವೀಣ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ದುಬೈ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ತಲ್ಲೂರ್ ಶಿವರಾಮ ಶೆಟ್ಟಿ, ಬಿಬಿಎಂಪಿ ಅಪರ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಶಶಿಧರ್ ಶೆಟ್ಟಿ ಬರೋಡ, ಉದ್ಯಮಿ ವೇಣುಗೋಪಾಲ್ ಶೆಟ್ಟಿ ಥಾಣೆ, ಬೆಳ್ಳಾಡಿ ಅಶೋಕ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ರವೀಂದ್ರ ನಾಥ್ ಭಂಡಾರಿ, ಶಶಿಧರ್ ಶೆಟ್ಟಿ ಇನ್ನಂಜೆ, ಗಿರೀಶ್ ಶೆಟ್ಟಿ ತೆಳ್ಳಾರ್, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಪೆರಾರ ಬಾಬಣ್ಣ, ಪುತ್ತಿಗೆ ಮಠ ಯುಎಸ್ ಎ ಅರ್ಚಕ ಕಿರಣ್ ರಾವ್, ಗಿರೀಶ್ ಎಂ ಶೆಟ್ಟಿ ಕಟೀಲ್, ಸುಧಾಕರ ಎಸ್ ಪೂಂಜ ಸುರತ್ಕಲ್, ದಯಾನಂದ ಶೆಟ್ಟಿ ಆಸ್ಟ್ರೇಲಿಯಾ, ಡಾ.ಆರ್.ಕೆ.ಶೆಟ್ಟಿ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಕದ್ರಿ ನವನೀತ ಶೆಟ್ಟಿ, ಕದ್ರಿ ಪ್ರದೀಪ್ ಆಳ್ವ, ಬಾಳ ಜಗನ್ನಾಥ ಶೆಟ್ಟಿ, ರವಿಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು..