ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ; ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಪಿತೂರಿ ಎಂದು ನಿಖಿಲ್ ಕಿಡಿ ಟೋಯಿಂಗ್ ಮಾಡುವುದಕ್ಕಾದರು ಬೆಂಗಳೂರು ರಸ್ತೆ ಗುಂಡಿಗಳನ್ನು ಸರಿ ಮಾಡಿ
ಬೆಂಗಳೂರು: ನಗರದಲ್ಲಿ ಮತ್ತೆ ಟೋಯಿಂಗ್ ಶುರು ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವಸೂಲಿ ಮಾಡೋ ಉದ್ದೇಶ ಕಾಣಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು. ಮೂಲಭೂತ ಸೌಕರ್ಯಗಳನ್ನು ಕೊಡದೆ ಜನರನ್ನು ಸತಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟು ಆದಾಯದ ಮೂಲಗಳನ್ನು ಹುಡುಕುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಟೋಯಿಂಗ್ ಪ್ರಕ್ರಿಯೆಯನ್ನು ಜನಾಕ್ರೋಶದ ಮೇರೆಗೆ 2022ರಲ್ಲಿ ಸ್ಥಗಿತಗೊಳಿಸಲಾಗಿತ್ತು ಈಗ ಮತ್ತೆ ಟೋಯಿಂಗ್ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ನೋಂದಣಿ ಶುಲ್ಕ, ಮೆಟ್ರೋ-ಬಸ್ ಪ್ರಯಾಣ ದರ ಹೆಚ್ಚಳ, ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಬಿಯರ್ ಹಾಗೂ ಮದ್ಯದ ಮೂಲ ಬೆಲೆಗಿಂತ ದುಪಟ್ಟು ಟ್ಯಾಕ್ಸ್ ಏರಿಕೆಯಂತಹ ಅವೈಜ್ಞಾನಿಕ ರೀತಿ ಅನುಸರಿಸಿದರೂ ಕೂಡ, ರಾಜ್ಯದ ಖಾಲಿ ಬೊಕ್ಕಸ ಸರಿಯಾದಂತೆ ಕಾಣುತ್ತಿಲ್ಲ. ಸಂಚಾರಿ ಪೊಲೀಸ್ ಹಾಗೂ ಟೋಯಿಂಗ್ ಮೂಲಕ "ಕಲೆಕ್ಷನ್" ಮಾಡಿ ಗ್ಯಾರಂಟಿ ಯೋಜನೆಗಳಿಗೆ
ಹಣ ಒದಗಿಸಲು ಈ ಸರ್ಕಾರದ ಪಿತೂರಿ ನಡೆದಿದೆಯೇ?
ಬೆಂಗಳೂರಿನಲ್ಲಿ ಟೋಯಿಂಗ್ ವಾಹನಗಳು ಓಡಾಡುವುದಕ್ಕಾದರು ಬೆಂಗಳೂರಿನ ಗುಂಡಿಗಳನ್ನು ಸರಿ ಮಾಡುವಿರಾ.? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನಂತರ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಪ್ರಚಾರದ ವೇಳೆ ನಿನಗೂ ಫ್ರೀ, ನನಗೂ ಫ್ರೀ, ಎಲ್ಲರಿಗೂ ಫ್ರೀ ಎಂದು ಅಬ್ಬರಿಸಿ ಬೊಬ್ಬೆರೆದು ಮತ ಹಾಕಿಸಿಕೊಂಡು ಅಧಿಕಾರಕ್ಕೇರಿದ ಮಾನ್ಯ ಸಿದ್ದರಾಮಯ್ಯ ನವರೇ, ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ, ಅರ್ಹ-ಅನರ್ಹ ಎಂಬ ಉಪಾಯ ಮಾಡಿ ಸರ್ಕಾರದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಕಳ್ಳಾಟವೇ? ಎಂದು ಕಿಡಿಕಾರಿದರು.
ನೀವು ನಂಬಿಸಿ ಕೈ ಕೊಟ್ಟ ಮತದಾರರೆಲ್ಲರೂ, ನಿಮ್ಮ ದುರಾಡಳಿತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಿಮಗೆಲ್ಲ ಜನ ಸರಿಯಾದ ಪಾಠ ಕಲಿಸುವ ಕಾಲ ದೂರವಿಲ್ಲ.! ಎಂದರು.