ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್ ಗೆ ಪಟ್ಟು: ಎಂ ಬಿ ಪಾಟೀಲ

Banglore:

Font size:

ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್ ಗೆ ಪಟ್ಟು: ಎಂ ಬಿ ಪಾಟೀಲ

ಬೆಂಗಳೂರು: ಸದ್ಯದಲ್ಲೇ ತಾವು ದೆಹಲಿಗೆ ಹೋಗುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಿಗಬೇಕಾಗಿರುವ ಡಿಫೆನ್ಸ್ ಕಾರಿಡಾರ್ ಕೊಡುವಂತೆ ಆಗ್ರಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಸೋಮವಾರ ಹೇಳಿದ್ದಾರೆ.

ಇತ್ತೀಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿನಲ್ಲಿರುವ ಎಚ್ಎಎಲ್ ಕಾರ್ಖಾನೆಯನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಕೋರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಾಯ್ಡು ಅವರು ಈ ವ್ಯವಸ್ಥೆಯನ್ನು ಚೆನ್ನಾಗಿ ಬಲ್ಲವರು. ಅವರು ತಮ್ಮಲ್ಲೂ ಎಚ್ಎಎಲ್ ಘಟಕ ಸ್ಥಾಪನೆಗೆ ಕೇಳಿರಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಒಂದು ವೇಳೆ ಅವರು ಎಚ್ಎಎಲ್ ಸ್ಥಳಾಂತರಕ್ಕೆ ಕೇಳಿದ್ದರೆ ಅದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ಎರಡು ವರ್ಷಗಳ ಹಿಂದೆ ಉತ್ತರಪ್ರದೇಶ ಮತ್ತು ತಮಿಳು‌ನಾಡಿಗೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಿತು. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ರಕ್ಷಣಾ ವಹಿವಾಟಿನಲ್ಲಿ ದೇಶಕ್ಕೆ ಶೇಕಡ 65ರಷ್ಟು ಕೊಡುಗೆ ನೀಡುತ್ತಿರುವ ಮತ್ತು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿ ಇರುವ ನಮ್ಮ ರಾಜ್ಯಕ್ಕೆ ಆ ಯೋಜ‌ನೆಯನ್ನು ಘೋಷಿಸದೆ ಇದ್ದುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು ತಮ್ಮಲ್ಲಿ ಉದ್ದಿಮೆ ಬೆಳೆಸಲು ಲೇಪಾಕ್ಷಿಯಲ್ಲಾದರೂ ಜಮೀನು ಕೊಡಲಿ, ಮಡಕಶಿರಾದಲ್ಲಾದರೂ ಭೂಮಿ ಕೊಡಲಿ, ಅದು ಅವರಿಗೆ ಬಿಟ್ಟಿದ್ದು. ಆದರೆ ನಮ್ಮಲ್ಲಿರುವ ಉದ್ಯಮಗಳನ್ನು ಎಳೆದುಕೊಂಡು ಹೋಗುವ ಆಲೋಚನೆಯನ್ನು ಅವರು ಮಾಡಿರಲಾರರು ಎಂದು ಭಾವಿಸಿರುವೆ. ರಾಜನಾಥ್ ಸಿಂಗ್ ಬಳಿಗೆ ಹೋಗುವಾಗ ಕೇಂದ್ರ ಸಂಪುಟದಲ್ಲಿ ಇರುವ ನಮ್ಮ ರಾಜ್ಯದ ಸಚಿವರುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಅದಕ್ಕೂ ಮೊದಲು ಮುಖ್ಯಮಂತ್ರಿಗಳು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳ ಜತೆ ನೀತಿ ಆಯೋಗದ ಸಭೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ವಿದ್ಯಮಾನದ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ನುಡಿದಿದ್ದಾರೆ.

Prev Post ಕಸದ ಶುಲ್ಕದ ಮೂಲಕ ಬೆಂಗಳೂರಿನ ಜನರಿಂದ ಹಣ ಲೂಟಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ
Next Post ಸಂಪುಟ ಸಹೋದ್ಯೋಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರಾದ ಕುಮಾರ ಸ್ವಾಮಿಯವರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.