ವ್ಯಾಪಾರದಲ್ಲಿ ಸ್ಪರ್ಧಾತ್ಮಕತೆಯ ಪರಿಗಣನೆ ಮುಖ್ಯ: ಎಂ ಬಿ ಪಾಟೀಲ

BANGALORE:

Font size:

ಕೆಎಸ್ಡಿಎಲ್ ತಂತ್ರಕ್ಕೆ ಸೀಮಿತ ದೃಷ್ಟಿಕೋನದ ಆರೋಪ ಬೇಡ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ರಾಜ್ಯದ ಅಸ್ಮಿತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ವಚನ ಪರಂಪರೆಯಿಂದ ಬಂದಿರುವ ನನಗೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಮೇಲೆ ಅಪಾರ ಗೌರವ ಮತ್ತು ಎಲ್ಲರಿಗಿಂತ ಹೆಚ್ಚಿನ ಬದ್ಧತೆ ಇದೆ. ಇಲ್ಲಿಯ ಕಲಾವಿದರ ಬಗ್ಗೆ ಅಭಿಮಾನವೂ ಇದೆ. ಆದರೆ, ವ್ಯಾಪಾರದ ಪ್ರಶ್ನೆ ಬಂದಾಗ ಇಲ್ಲಿಯ ಸ್ಪರ್ಧಾತ್ಮಕತೆಯನ್ನು ನೋಡಬೇಕು. ಹೀಗಾಗಿ ಪರಿಣತರ ತಂಡದ ತೀರ್ಮಾನದಂತೆ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದನ್ನು ನಕಾರಾತ್ಮಕವಾಗಿ ನೋಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ತಮನ್ನಾ ಅವರ ನೇಮಕಕ್ಕೆ ಕೆಲವರು ಕನ್ನಡದ ಹೆಸರು ಹೇಳಿಕೊಂಡು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಅವರು ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಾನು ಈ ಖಾತೆಯನ್ನು ವಹಿಸಿಕೊಂಡ ಮೇಲೆ ಕೆಎಸ್ಡಿಎಲ್ ನಲ್ಲಿ ಉತ್ಪಾದನೆ ಶೇಕಡ 40ರಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಾವೇನೂ ಹೊಸ ಯಂತ್ರೋಪಕರಣಗಳನ್ನು ಖರೀದಿಸಿಲ್ಲ. ಜತೆಗೆ ಎಫ್ ಎಂಸಿಜಿ ವಲಯದಲ್ಲಿ ಸಂಸ್ಥೆಯ ಬೆಳವಣಿಗೆ ಶೇಕಡ 15ರಷ್ಟಿದೆ. ಈ ವಿಚಾರದಲ್ಲಿ ಗೋದ್ರೇಜ್ (ಶೇ.11), ಹಿಂದೂಸ್ತಾನ್ ಲಿವರ್ಸ್ (ಶೇ 9), ಐಟಿಸಿ (ಶೇಕಡ 8), ವಿಪ್ರೋ (ಶೇಕಡ 7) ಮುಂತಾದ ಉದ್ದಿಮೆಗಳನ್ನೂ ಕೆಎಸ್ಡಿಎಲ್ ಹಿಂದಿಕ್ಕಿದೆ. ನಾವು ಕೆಎಸ್ಡಿಎಲ್ ವಹಿವಾಟನ್ನು ಮುಂದಿನ ಮೂರು ವರ್ಷಗಳಲ್ಲಿ 5,000 ಕೋಟಿ ರೂ.ಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಆಗ ಹಾಲಿವುಡ್ ನಟಿಯೊಬ್ಬರನ್ನೇ ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬರಲೆಂದು ನಾನು ಆಶಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ.

ತಮನ್ನಾ ಅವರನ್ನು ನೇಮಿಸಿಕೊಳ್ಳುವ ಮೊದಲು ನಾವು ಕನ್ನಡದವರೇ ಆದ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದೆವು. ಜೊತೆಗೆ ಶ್ರೀಲೀಲಾ, ಪೂಜಾ ಹೆಗಡೆ, ಕಿಯಾರ ಅಡ್ವಾಣಿ ಅವರನ್ನೂ ಕೇಳಲಾಗಿದೆ. ದೀಪಿಕಾ ಅವರು ಅವರದೇ ಉತ್ಪನ್ನಗಳ ಪ್ರಚಾರದಲ್ಲಿ ಇದ್ದಾರೆ. ಹೀಗಾಗಿ ಬರಲಿಲ್ಲ. ಉಳಿದವರು ಬೇರೆಬೇರೆ ಸೌಂದರ್ಯವರ್ಧಕಗಳು, ಕ್ರೀಮುಗಳು ಮತ್ತು ಸಾಬೂನುಗಳಿಗೆ ರೂಪದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ವರ್ಷ ಅವರಾರೂ ತಮಗೆ ಬಿಡುವಿಲ್ಲ ಎಂದು ತಿಳಿಸಿದರು. ಹೀಗಾಗಿ, ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ 28 ಮಿಲಿಯನ್ ಫಾಲೋಯರ್ಸ್ ಹೊಂದಿರುವ ತಮನ್ನಾ ಅವರನ್ನು ಅವರ ಅಖಿಲ ಭಾರತೀಯ ಮಟ್ಟದ ವರ್ಚಸ್ಸನ್ನು ನೋಡಿ ನೇಮಿಸಿಕೊಳ್ಳಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೆಎಸ್ಡಿಎಲ್ ಮೂಲಕ ಇತ್ತೀಚೆಗೆ 21 ಹೊಸ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ನಾವು ಪರಿಮಳಗಳ ಕ್ಷೇತ್ರಕ್ಕೂ ಕಾಲಿಡುತ್ತಿದ್ದೇವೆ. ಇದಕ್ಕೆಂದೇ ನಮ್ಮ ಅಧಿಕಾರಿಗಳನ್ನು ಅತ್ತರಿಗೆ ಹೆಸರಾಗಿರುವ ಉತ್ತರಪ್ರದೇಶದ ಕನೌಜ್ ಗೂ ಕಳಿಸಿಕೊಡಲಾಗಿತ್ತು. ವ್ಯಾಪಾರದ ಪ್ರಶ್ನೆ ಬಂದಾಗ ನಾವು ಅದಕ್ಕೆ ತಕ್ಕ ಕಾರ್ಯತಂತ್ರವನ್ನೇ ರೂಪಿಸಬೇಕಾಗುತ್ತದೆ. ಬ್ರ್ಯಾಂಡ್ ಅಂಬಾಸಿಡರ್ ನೇಮಕವನ್ನು ತಪ್ಪಾಗಿ ಭಾವಿಸಬಾರದು. ನಾವು ಅಧಿಕಾರಕ್ಕೆ ಬಂದಮೇಲೆ, ಕೆಎಸ್ಡಿಎಲ್ ವಹಿವಾಟು 1,700 ಕೋಟಿ ರೂ.ಗೂ ಹೆಚ್ಚಾಗಿದೆ. ಇದರ ಪೈಕಿ ರಾಜ್ಯದಲ್ಲಿ ನಡೆದಿರುವ ವಹಿವಾಟಿನ ಮೊತ್ತ 320 ಕೋಟಿ ರೂ. ಆಸುಪಾಸಿನಲ್ಲಿದೆಯಷ್ಟೆ ಎಂದು ಪಾಟೀಲ ಹೇಳಿದ್ದಾರೆ.

ಕೆಎಸ್ಡಿಎಲ್ ತರಹದಲ್ಲೇ ಎಂಎಸ್ಐಎಲ್ ಸಂಸ್ಥೆಗೂ ನಾವು ಹೊಸ ರೂಪ ನೀಡುತ್ತಿದ್ದು, ಸದ್ಯದಲ್ಲೇ ವಾರ್ಷಿಕ 10 ಸಾವಿರ ಕೋಟಿ ರೂ. ವಹಿವಾಟಿನ ಗುರಿಯುಳ್ಳ ಚಿಟ್ ಫಂಡ್ ಆರಂಭಿಸುತ್ತಿದ್ದೇವೆ. ಹುಬ್ಬಳ್ಳಿಯಲ್ಲಿರುವ ಎನ್ಜಿಎಫ್ ಅನ್ನು ಕೂಡ ಉಳಿಸಿಕೊಳ್ಳಬೇಕಾಗಿದೆ. ನಾವು ಅಖಿಲ ಭಾರತ ಮಟ್ಟವನ್ನು ಮೀರಿ ಜಾಗತಿಕ ಸ್ತರದಲ್ಲಿ ಯೋಚಿಸಬೇಕಾಗಿದೆ. ಕೆಎಸ್ಡಿಎಲ್ ಅನ್ನು ಕೇವಲ ಭಾರತವಲ್ಲ, ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿಸಬೇಕೆನ್ನುವುದು ನಮ್ಮ ಹೆಗ್ಗುರಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಇದ್ದರು.

Prev Post ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
Next Post ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ: ಸಿ.ಎಂ. ಸಿದ್ದರಾಮಯ್ಯ