ಒಂದೇ ದಿನ ಜನ್ಮದಿನ ಆಚರಿಸಿಕೊಂಡ ನಾಯಕರಿಬ್ಬರ ಭೇಟಿ; ಪರಸ್ಪರ ಶುಭಾಶಯ ಉಪ ರಾಷ್ಟ್ರಪತಿ ಭೇಟಿ ವೇಳೆ ಭಾವುಕರಾದ ಮಾಜಿ ಪ್ರಧಾನಿಗಳು
ನವದೆಹಲಿ: ಅದೊಂದು ಅಪರೂಪದಲ್ಲಿ ಅಪರೂಪದ ಸನ್ನಿವೇಶ. ಇಬ್ಬರು ಹಿರಿಯ ದಿಗ್ಗಜರ ಸಂಗಮ.
ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ ಧನಕರ್ ಮತ್ತು ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅವರುಗಳಿಬ್ಬರ ಹುಟ್ಟುಹಬ್ಬದ ದಿನ ಮೇ 18. ನಿನ್ನೆಯ ದಿನ (ಸೋಮವಾರ) ಈ ಇಬ್ಬರೂ ನಾಯಕರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು ಹಾಗೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು.
ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ಸಪ್ತರ್ ಜಂಗ್ ಲೇನ್ ರಸ್ತೆಯಲ್ಲಿರುವ ಮಾಜಿ ಪ್ರಧಾನಮಂತ್ರಿಗಳ ನಿವಾಸಕ್ಕೆ ತಮ್ಮ ಧರ್ಮಪತ್ನಿ ಶ್ರೀಮತಿ ಸುದೇಶ್ ಧನಕರ್ ಅವರೊಂದಿಗೆ ಭೇಟಿ ನೀಡಿದ ಉಪ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳಿಗೆ ಜನ್ಮದಿನದ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳು ಕೂಡ ಉಪ ರಾಷ್ಟ್ರಪತಿಗಳಿಗೆ ಜನ್ಮದಿನದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ರಾಷ್ಟ್ರದ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಉಭಯ ನಾಯಕರು, ಮುಖ್ಯವಾಗಿ ರೈತರ ಸಮಸ್ಯೆಗಳು, ಅವರಿಗಾಗಿ ನರೇಂದ್ರ ಮೋದಿ ಅವರ ಸರಕಾರ ರೂಪಿಸಿ ಜಾರಿಗೆ ತಂದಿರುವ ಕೃಷಿಪರ ಯೋಜನೆಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.
ಅಲ್ಲದೆ; ತಮ್ಮ ಹಾಗೂ ಮಾಜಿ ಪ್ರಧಾನಿಗಳ ನಡುವಿನ ಬಾಂಧವ್ಯವನ್ನು ಉಪ ರಾಷ್ಟ್ರಪತಿಗಳು ಸ್ಮರಿಸಿಕೊಂಡರು ಹಾಗೂ ರಾಜ್ಯಸಭೆಯಲ್ಲಿ ರೈತರು ಹಾಗೂ ರಾಷ್ಟ್ರ ಹಿತಾಸಕ್ತಿಯ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಚರ್ಚೆ ನಡೆಸಲು ಅವಕಾಶ ಕಲ್ಪಿಸುತ್ತಿರುವ ಉಪ ರಾಷ್ಟ್ರಪತಿಗಳಿಗೆ ವಿಶೇಷವಾಗಿ ಮಾಜಿ ಪ್ರಧಾನಿಗಳು ಕೃತಜ್ಞತೆ ಸಲ್ಲಿಸಿದರು.
ತಮ್ಮ ನಿವಾಸಕ್ಕೆ ಆಗಮಿಸಿ ಜನ್ಮದಿನ ಶುಭ ಕೋರಿದ ಉಪ ರಾಷ್ಟ್ರಪತಿ ದಂಪತಿಗೆ ಮಾಜಿ ಪ್ರಧಾನಿಗಳು ಅಭಿವಂದನೆ ಅರ್ಪಿಸಿದರು.
ನನ್ನ ಜನ್ಮದಿನ ಮತ್ತು ಮಾನ್ಯ ಉಪ ರಾಷ್ಟ್ರಪತಿಗಳು ಜನ್ಮದಿನ ಮೇ 18. ನನ್ನ ಜನ್ಮದಿನಕ್ಕೆ ಅವರು ಮೊದಲೇ ದೂರವಾಣಿ ಕರೆ ಮಾಡಿ ಶುಭಾಶಯ ಹೇಳಿದ್ದರು ಹಾಗೂ ಎಕ್ಸ್ ಖಾತೆಯಲ್ಲಿ ಶುಭಾಶಯವನ್ನೂ ಕೋರಿದ್ದರು. ಮಂಗಳವಾರ ಬೆಳಗ್ಗೆ ಉಪ ರಾಷ್ಟ್ರಪತಿಗಳು ನವದೆಹಲಿಯಲ್ಲಿರುವ ನನ್ನ ನಿವಾಸಕ್ಕೆ ತಮ್ಮ ಧರ್ಮಪತ್ನಿಯವರ ಸಮೇತ ಆಗಮಿಸಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ.
ಹೆಚ್.ಡಿ. ದೇವೇಗೌಡರು, ಮಾಜಿ ಪ್ರಧಾನಿಗಳು