ಯುವ ಸಂಭ್ರಮ–2026ಕ್ಕೆ ಅದ್ದೂರಿ ಚಾಲನೆ
ಯುವ ಸಂಭ್ರಮ–2026ಕ್ಕೆ ಅದ್ದೂರಿ ಚಾಲನೆ
ಮೈಸೂರು, ಸೆ. 28: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಆಯೋಜಿಸಲಾಗಿರುವ *‘ಯುವ ಸಂಭ್ರಮ–2026’*ಕ್ಕೆ ನಗರಾಭಿವೃದ್ಧಿ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶಾಸಕರು ಹಾಗೂ ಗಣ್ಯರೊಂದಿಗೆ ಇಂದು ಅದ್ದೂರಿಯಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಜ್ಞಾನಕ್ಕೆ ಹೆಸರಾದ ಮೈಸೂರಿನ ಸಾಂಸ್ಕೃತಿಕ ನೆಲದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಯುವ ಪ್ರತಿಭೆಗಳು ಸಂಗೀತ, ನೃತ್ಯ, ನಾಟಕ, ಜಾನಪದ ಹಾಗೂ ಸಮಕಾಲೀನ ಕಲೆಗಳ ಮೂಲಕ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
‘ಯುವ ಸಂಭ್ರಮ’ ಕೇವಲ ಮನರಂಜನೆಯ ಕಾರ್ಯಕ್ರಮವಲ್ಲ. ಯುವಕರ ಕನಸು, ಆತ್ಮವಿಶ್ವಾಸ ಹಾಗೂ ಪ್ರತಿಭೆಗೆ ಗೌರವ ನೀಡುವ ಅತ್ಯುತ್ತಮ ವೇದಿಕೆಯಾಗಿದೆ. ಕನ್ನಡ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಆಧುನಿಕತೆಯನ್ನು ಅಪ್ಪಿಕೊಳ್ಳುವುದು ಇಂದಿನ ಯುವಜನತೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಯುವಕರು ತಮ್ಮ ಪ್ರತಿಭೆಯನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರ ಸೀಮಿತಗೊಳಿಸದೆ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು. ಯುವಜನತೆಗೆ ಸೂಕ್ತ ಅವಕಾಶ ಹಾಗೂ ವೇದಿಕೆಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸಾರಿಗೆ ವೆಚ್ಚದ ಹೊರೆಯಿಂದ ಯಾವುದೇ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯದಿಂದ ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಯುವಜನತೆ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಸಾಮರಸ್ಯದ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಮಾಜಮುಖಿಯಾಗಿ ತೊಡಗಿಸಿಕೊಂಡಾಗ ಮಾತ್ರ ನಿಜವಾದ ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಯಲು ಸಾಧ್ಯ ಎಂದು ಸಚಿವರು ಹೇಳಿದರು.
ಗ್ರಾಮ ಪಂಚಾಯಿತಿ ಹಾಗೂ ನಗರ ಪಂಚಾಯಿತಿ ಮಟ್ಟದಲ್ಲಿ ಯುವಜನತೆಯನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ‘ಭಾರತ್ ಜೋಡೋ’ ಸಂಘಗಳನ್ನು ಸ್ಥಾಪಿಸಲಾಗಿದ್ದು, ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಯುವಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ‘ಚಿತ್ರಸಂತೆ–2026’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಜಿ.ಟಿ. ದೇವೇಗೌಡ, ಶ್ರೀ ಹರೀಶ್ ಗೌಡ, ಶ್ರೀ ಅನಿಲ್ ಚಿಕ್ಕಮಾದು, ಶ್ರೀ ತನ್ವೀರ್ ಸೇಠ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಆಯೂಬ್ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಗಾಯಕರಾದ ಶ್ರೀ ವಿಜಯ್ ಪ್ರಕಾಶ್, ನಟಿ ಸಪ್ತಮಿ ಗೌಡ, ಜಿಲ್ಲಾಧಿಕಾರಿ ಶ್ರೀ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಎಂ.ಕೆ. ಸವಿತ ಸೇರಿದಂತೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು







Comments
Leave a Comment