ಕಾಂಗ್ರೆಸ್ ಪ್ರೀತಿ, ಮೋದಿ ಜತೆ ಮದುವೆ ಎಂದು ಟೀಕಿಸಿದ್ದ ಖರ್ಗೆಗೆ ಹೆಚ್.ಡಿ. ದೇವೇಗೌಡರ ತಿರುಗೇಟು ರಾಜ್ಯಸಭೆಯಲ್ಲಿಯೇ ಖರ್ಗೆಗೆ ಖಡಕ್ ಉತ್ತರ ಕೊಟ್ಟ ಮಾಜಿ ಪ್ರಧಾನಿಗಳು

:

Font size:

ಕಾಂಗ್ರೆಸ್ ಎಸಗಿದ ದ್ರೋಹದ ವಿವರ ಕೊಟ್ಟ ಗೌಡರು ನನ್ನ ಮತ್ತು ಮೋದಿ ನಡುವಿನ ಮೈತ್ರಿ 2014ರಲ್ಲಿಯೇ ಆರಂಭವಾಯಿತು

ನವದೆಹಲಿ 23 ಮಾರ್ಚ್ 2026

ನಮ್ಮ ಜತೆ ಪ್ರೀತಿ ಹೊಂದಿದ್ದರು, ಮೋದಿ ಅವರ ಜತೆ ಮದುವೆಯಾದರು ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿಯೇ ಸೋಮವಾರ ತಿರುಗೇಟು ನೀಡಿದರು.

ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ದೇವೇಗೌಡರು, ನಾನು ಸದನದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಖರ್ಗೆ ಅವರು ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ. ಅವರು ನಾನೇನೂ ಅವರಿಗೆ, ಅವರ ಪಕ್ಷಕ್ಕೆ ದ್ರೋಹ ಬಗೆದಿದ್ದೇನೆ ಎಂದು ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ, ನಿಜವಾಗಿಯೂ ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿರುವುದು ನಮಗೆ, ನಮ್ಮ ಪಕ್ಷಕ್ಕೆ ಎಂದು ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷಕ್ಕೆ ಒಂದಲ್ಲ, ಎರಡಲ್ಲ.. ಅನೇಕ ಬಾರಿ ದ್ರೋಹ ಮಾಡಿದೆ. ಅದರ ಬಗ್ಗೆ ನಾನು ಸಾಕ್ಷಿ ಸಹಿತವಾಗಿ ಮಾತನಾಡಬಲ್ಲೆ. ಅದೆಲ್ಲವನ್ನು ಮರೆಮಾಚಲು ಖರ್ಗೆ ಅವರು ನನ್ನ ವಿಷಯ ಎಳೆದು ತಂದಿದ್ದಾರೆ. ಅದಕ್ಕೆ ನಾನು ಉತ್ತರ ನೀಡಬೇಕಿದೆ ಎಂದು ದೇವೇಗೌಡರು ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಕಾಲದ ಕರ್ನಾಟಕ ರಾಜ್ಯದ ರಾಜಕಾರಣವನ್ನು ಮೆಲುಕು ಹಾಕಿದ ಮಾಜಿ ಪ್ರಧಾನಿಗಳು; ನಿಜಲಿಂಗಪ್ಪ, ದೇವರಾಜ ಅರಸು, ಬಂಗಾರಪ್ಪ ಅವರಿಗೆ ಏನಾಯಿತು ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗೊತ್ತಿದೆ. ಅವರು ಹೇಗೆ ಅಧಿಕಾರ ಕಳೆದುಕೊಂಡರು ಎಂಬುದನ್ನು ಖರ್ಗೆ ಅವರು ಹೇಳಬೇಕಾಗುತ್ತದೆ. ಅವರೆಲ್ಲರೂ ಅಧಿಕಾರ ಕಳೆದುಕೊಂಡಿದ್ದಕ್ಕೆ ನಾವು ಸಾಕ್ಷಿಗಳಾಗಿದ್ದೆವು ಎಂದು ಟೀಕಾ ಪ್ರಹಾರ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ವ್ಯಕ್ತಿ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂದು ನಾವೆಲ್ಲರೂ ಆಶಿಸಿದ್ದೆವು. ಆದರೆ, ಅವರ ಸ್ವಂತ ಪಕ್ಷವೇ ಅವರನ್ನು ಸಿಎಂ ಆಗಲು ಬಿಡಲಿಲ್ಲ ಎಂಬ ಸಂಗತಿಯನ್ನು ಮಾಜಿ ಪ್ರಧಾನಿಗಳು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ನಿಜ ಹೇಳಬೇಕು ಎಂದರೆ, ನನ್ನ ಮತ್ತು ನರೇಂದ್ರ ಮೋದಿ ಅವರ ನಡುವಿನ ಮೈತ್ರಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಶುರುವಾಗಿದ್ದಲ್ಲ. 2014ರಲ್ಲಿಯೇ ಆರಂಭವಾಯಿತು. ನಾನು ಅವತ್ತಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ಪ್ರಚಾರ ನಡೆಸಿದ್ದೆ. ಅವರ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ್ದೆ. ಅವರು ಅಧಿಕಾರಕ್ಕೆ ಬಂದರೆ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದೆ. ಬಳಿಕ ಅವರು ಗೆದ್ದ ನಂತರ ನಾನು ನಿಜವಾಗಿಯೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದೆ. ಆದರೆ, ಮೋದಿ ಅವರು ಹಾಗೆ ಮಾಡಬೇಡಿ ಎಂದು ತಡೆದರು. ನಾನು ಅವತ್ತಿನ ಅವರ ನಡಳಿವಳಿಕೆಯಿಂದ ಪ್ರಭಾವಿತನಾದೆ ಎಂದು ದೇವೇಗೌಡರು ಹೇಳಿದರು.

ಆ ಘಟನೆ ನಡೆದ ನಂತರ ನಾನು ಅವರ ಮೈತ್ರಿಯಲ್ಲಿ ಇದ್ದೇನೆ. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಸದೃಢ ನಾಯಕತ್ವ ನೀಡಿದ್ದಾರೆ. ಜನರು ಕೂಡ ಅವರ ಮೇಲೆ ಅಪರಿಮಿತ ವಿಶ್ವಾಸ ಇರಿಸಿ ಸತತವಾಗಿ ಆಯ್ಕೆ ಮಾಡುತ್ತಾ ಬರುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.

2018ರಲ್ಲಿ ಕಾಂಗ್ರೆಸ್ ಪಕ್ಷದ ಜತೆ ನಮ್ಮ ಪಕ್ಷ ಮೈತ್ರಿ ಹೊಂದಿದ್ದ ಕಾರಣಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಸಿಎಂ ಆಗದಂತೆ ತಡೆಯಿತು. ಆಗ ಮತ್ತೆ ಮನೆ ಬಾಗಿಲಿಗೆ ಬಂದು ಮೈತ್ರಿ ಹಸ್ತ ಚಾಚಿದ ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವಂತೆ ಒತ್ತಡ ಹೇರಿತು. ಮತ್ತೆ ಒಂದೇ ವರ್ಷದಲ್ಲಿ ಕಾಂಗ್ರೆಸ್ ನಮಗೆ ದ್ರೋಹ ಬಗೆಯಿತು. ಈ ಎಲ್ಲಾ ವಿವರಗಳು ಖರ್ಗೆ ಅವರಿಗೆ ಗೊತ್ತಿವೆ ಎಂದು ದೇವೇಗೌಡರು ಹೇಳಿದರು.

ಈ ಸದನದಲ್ಲಿ ಖರ್ಗೆ ಅವರು ಮಾತನಾಡಿದ ಸಂದರ್ಭದಲ್ಲಿ ನಾನು ಹಾಜರು ಇರಲಿಲ್ಲ. ಯುಗಾದಿ ಹಬ್ಬ ದಕ್ಷಿಣ ಭಾರತದಲ್ಲಿಯೇ ದೊಡ್ಡ ಹಬ್ಬ, ಹೀಗಾಗಿ ನಾನು ಬೆಂಗಳೂರಿಗೆ ಹೋಗಬೇಕಿತ್ತು. ಆ ಸಂದರ್ಭದಲ್ಲಿ ಖರ್ಗೆ ಅವರು ನಮ್ಮ ಮತ್ತು ಮೋದಿ ಅವರ ನಡುವಿನ ಮೈತ್ರಿ ಬಗ್ಗೆ ಮಾತಾಡಿದ್ದಾರೆ. ಅದಕ್ಕೆ ನಾನು ಉತ್ತರ ಕೊಡಬೇಕಿತ್ತು ಎಂದು ಅವರು ಹೇಳಿದರು.

1962ರಲ್ಲಿ ನಾನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡುವುದಾಗಿ ಹೇಳಿತ್ತು. ನೀಲಂ ಸಂಜೀವರೆಡ್ಡಿ ಅವತ್ತಿನ ಎಐಸಿಸಿ ಅಧ್ಯಕ್ಷರಾಗಿದ್ದರು. ಆದರೆ, ನನಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತು. ನನ್ನ ರಾಜಕೀಯದ ಅಂತ್ಯಕಾಲದಲ್ಲಿ ನಾನಿದ್ದೇನೆ. ಈಗಲೂ ನಾನು ರಾಜ್ಯಸಭೆ ಸದಸ್ಯನಾಗಿ ಇಲ್ಲಿ ಕೂತಿದ್ದೇನೆ. ಇನ್ನೊಂದು ತಿಂಗಳಲ್ಲಿ ಈ ಸದಸ್ಯತ್ವದ ಅವಧಿ ಮುಗಿಯುತ್ತದೆ. ಹೀಗಾಗಿ ನಾನು ಖರ್ಗೆ ಅವರು ಎತ್ತಿರುವ ಪ್ರಶ್ನೆಗೆ ಉತ್ತರ ಕೊಡಬೇಕಿದೆ ಎಂದು ಅವರು ಒತ್ತಿ ಹೇಳಿದರು.

Comments

Leave a Comment

Prev Post ಚಾಲನಾ ತರಬೇತಿ ಪಡೆದಿದ್ದ 20 ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತ ಎಲೆಕ್ಟ್ರಿಕ್‌ ಆಟೋ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ

ರೈತರ ಸಬಲೀಕರಣಕ್ಕಾಗಿ "PM ಕುಸುಮ್-2.0'ಗೆ ಕೇಂದ್ರ ಸಿದ್ಧತೆ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ * 500 GW ಪಳೆಯುಳಿಕೆ ರಹಿತ ಇಂಧನ ಗುರಿ ಸಾಧಿಸಲು ಕೃಷಿ ಭೂಮಿ, ಛಾವಣಿಗಳು ಮತ್ತು ಗ್ರಾಮೀಣ ಉದ್ಯಮಗಳಲ್ಲಿ ವಿಕೇಂದ್ರೀಕೃತ ನವೀಕರಿಸಿದ ಇಂಧನ ಸಂಪನ್ಮೂಲಗಳು ಅಗತ್ಯ. * PM-KUSUM ಅಡಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವತಂತ್ರ ಸೌರ ಪಂಪ್ ಸ್ಥಾಪನೆ * 13 ಲಕ್ಷ ಗ್ರಿಡ್-ಸಂಪರ್ಕಿತ ಪಂಪ್‌ಗಳ ಸೌರೀಕರಣ

ಸೋಮವಾರದಿಂದಲೇ ತಂಬಾಕು ಖರೀದಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಭರವಸೆ ಕೊಟ್ಟ ಕೇಂದ್ರ ಸಚಿವ ಪಿಯೂಷ್ ಗೋಯಲ್

ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆಗೆ ವಾಣಿಜ್ಯ ಸಚಿವರ ಸೂಚನೆ ಸಭೆಯಲ್ಲಿ ಮೈಸೂರು, ಚಾಮರಾಜನಗರ ಹಾಸನ ಜಿಲ್ಲೆಗಳ ಜನಪ್ರತಿನಿಧಿಗಳು, ನಾಯಕರು ಭಾಗಿ ಸಚಿವ ಹೆಚ್ಡಿಕೆ ಅವರ ಪಾರ್ಲಿಮೆಂಟ್ ಭವನದ ಕಚೇರಿಯಲ್ಲಿ ನಡೆದ ಸಭೆ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಳಕಳಿಗೆ ಕೇಂದ್ರ ಸ್ಪಂದನೆ ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆಗೆ ಷರತ್ತಿನ ಒಪ್ಪಿಗೆ ಕೊಟ್ಟ ಕೇಂದ್ರ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಳಕಳಿಗೆ ಕೇಂದ್ರ ಸ್ಪಂದನೆ ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆಗೆ ಷರತ್ತಿನ ಒಪ್ಪಿಗೆ ಕೊಟ್ಟ ಕೇಂದ್ರ

ನಾಡು, ನುಡಿ, ಜಲ ವಿಚಾರದಲ್ಲಿ ಪಕ್ಷ ಭೇದ ಮರೆತು ಒಂದಾಗಿರುತ್ತೇವೆ:ಬಸವರಾಜ ಬೊಮ್ಮಾಯಿ

ನಾಡು, ನುಡಿ, ಜಲ ವಿಚಾರದಲ್ಲಿ ಪಕ್ಷ ಭೇದ ಮರೆತು ಒಂದಾಗಿರುತ್ತೇವೆ:ಬಸವರಾಜ ಬೊಮ್ಮಾಯಿ

Read all News