ಒಳಾಂಗಣ ಕ್ರೀಡಾಂಗಣ ಕಾಮಗಾರಿ ಶೀಘ್ರವೇ ಆರಂಭ ಪ್ರಧಾನಿ ಮೋದಿ, ಸಚಿವ ಮನ್ಸೂಖ್ ಮಾಂಡವಿಯಾ ಅವರಿಗೆ ಧನ್ಯವಾದ ಹೇಳಿದ ಹೆಚ್ಡಿಕೆ
ಮಂಡ್ಯ 14 ಮಾರ್ಚ್ 2026
ಕೇಂದ್ರ ಸರಕಾರದ ಖೇಲೋ ಇಂಡಿಯಾ ಯಜನೆಯ ಅಡಿಯಲ್ಲಿ ಮಂಡ್ಯಕ್ಕೆ ಮಂಜೂರಾಗಿರುವ ₹14 ಕೋಟಿ ವೆಚ್ಚದ ಬಹುಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರದ ಯುವಜನ ಸಬಲೀಕರಣ, ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವೀಯ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಭೂಮಿಪೂಜೆ ನೆರವೇರಿಸಿ ಅಡಿಗಲ್ಲು ಹಾಕಿದರು.
ಮಂಡ್ಯದ ವಿಸಿ ಫಾರಂನಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೆಸಿದ ಸಚಿವರಿಬ್ಬರು, 'ಖೇಲೋ ಇಂಡಿಯಾ! ವೈಬ್ರೆಂಟ್ ಮಂಡ್ಯ' ನಿನಾದಕ್ಕೆ ಪೂರಕವಾಗಿ ಮಂಡ್ಯ ಜಿಲ್ಲೆಯಲ್ಲಿ ಕ್ರೀಡೆಯು ಉಜ್ವಲವಾಗಿ ಬೆಳೆದು ಹೆಚ್ಚು ಪ್ರಮಾಣದಲ್ಲಿ ಚಾಂಪಿಯನ್ ಗಳು ಹೊರಬರಲಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಿಬ್ಬರೂ ಭೂಮಿಪೂಜೆಯ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆ.ಆರ್. ಪೇಟೆ ಶಾಸಕ ಮಂಜುನಾಥ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲೆಯ ಉನ್ನತ ಅಧಿಕಾರಿಗಳು ಹಾಜರಿದ್ದರು.
ಕ್ರೀಡೆಯಲ್ಲಿ ಸಾಧನೆ; ಮಂಡ್ಯವನ್ನು ಕೊಂಡಾಡಿದ ಮಾಂಡವೀಯ:
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮನ್ಸುಖ್ ಮಾಂಡವೀಯ ಅವರು; ಖೇಲೋ ಇಂಡಿಯಾ ಯೋಜನೆಯು ಭಾರತದ ತಳಮಟ್ಟದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿ ರೂಪಿಸಲು ಕೇಂದ್ರ ಸರಕಾರ ಜಾರಿಗೆ ತಂದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದರು.
ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳು ಹಾಗೂ ಎನ್ಡಿಎ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಪರಿಶ್ರಮದಿಂದ ಮಂಡ್ಯದಲ್ಲಿ ಈ ಸುಸಜ್ಜಿತ ಕ್ರೀಡಾಂಗಣ ಬರುತ್ತಿದೆ ಎಂದ ಕ್ರೀಡಾ ಸಚಿವರು; ಕುಮಾರಸ್ವಾಮಿ ಅವರೇ, ಜನರಿಗಾಗಿ ನೀವು ಮಾಡಿರುವ ಕೆಲಸವು ಜನರು ನಿಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಯಲ್ಲಿಯೇ ಕಾಣುತ್ತಿದೆ ಎಂದು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದರು.
ವಿಶೇಷಚೇತನರ ಬಗ್ಗೆ ನೀವು ಹೊಂದಿರುವ ಮಮತೆ, ಬದ್ಧತೆಯನ್ನು ನಾನು ಕಣ್ಣಾರೆ ನೋಡುತ್ತಿದ್ದೇನೆ. ನನಗೆ ಬಹಳ ಸಂತೋಷ ಉಂಟು ಮಾಡಿದೆ. ನೀವು ಮಾಡುತ್ತಿರುವ ಈ ಕೆಲಸ ಶ್ಲಾಘನಾರ್ಹ, ನೀವು ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಮೂಲಕ ವಿಕಲಚೇತನರಿಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಪರಿಸರಕ್ಕೆ ಕೂಡ ಒಳ್ಳೆಯದು ಮಾಡುತ್ತಿದ್ದೀರಿ ಎಂದು ಮಾಂಡವೀಯ ಅವರು ಶ್ಲಾಘಿಸಿದರು.
ಮಂಡ್ಯ ನೆಲದಿಂದ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳು ಬಂದಿದ್ದಾರೆ. ಆ ಪೈಕಿ ನಾನು ವಿಕಾಸಗೌಡ, ಕೆ.ಆರ್. ಶಿಲ್ಪಾ ಅವರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಇಂತಹ ಅನೇಕ ಕ್ರೀಡಾಪಟುಗಳು ಮಂಡ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮುಖ್ಯವಾಗಿ ವೀಲ್ ಚೇರ್ ಟೆನಿಸ್ ಆಟಗಾರ್ತಿ, ಭಾರತ ನಂಬರ್ ಒನ್ ವೀಲ್ ಚೇರ್ ಟೆನಿಸ್ ಆಟಗಾರ್ತಿ ಆಗಿರುವ ಶಿಲ್ಪಾ ಅವರು ಭಾರತದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗುತ್ತಿದ್ದಾರೆ. ಇಂತಹ ಅಸಂಖ್ಯಾತ ಪ್ರತಿಭೆಗಳು ಇಲ್ಲಿಂದ ಬರಬೇಕು ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.
ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಕಳೆದ ಹನ್ನೊಂದು ವರ್ಷಗಳಲ್ಲಿ ಕ್ರೀಡಾ ಪೂರಕ ವ್ಯವಸ್ಥೆ ಹೆಚ್ಚಿಸಲು ಗುರುತರವಾಗಿ ಕೆಲಸ ಮಾಡಿದೆ. ಕಳೆದ ಬಜೆಟ್ ನಲ್ಲಿ ಕ್ರೀಡಾ ಮೂಲಸೌಕರ್ಯ ವೃದ್ಧಿಗೆ ₹4,000 ಕೋಟಿ ಹಂಚಿಕೆ ಮಾಡಿದೆ.
ಹತ್ತು ವರ್ಷಗಳ ಹಿಂದೆ ಈ ಉದ್ದೇಶಕ್ಕೆ ಕೇವಲ ₹1200 ಕೋಟಿ ಮಾತ್ರ ಕೊಡಲಾಗುತ್ತಿತ್ತು. ಅದರ ಪ್ರಮಾಣ ಈಗ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದು ಅವರು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಶಾಸಕ ಮಂಜುನಾಥ, ಮಾಜಿ ಶಾಸಕ ಡಾ. ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ತಿತರಿದ್ದರು.
ವಿಕಲಚೇತನರಿಗೆ ಎಲೆಕ್ಟ್ರಿಕ್ ವಾಹನಗಳ ವಿತರಣೆ
ವೇದಿಕೆಯ ಸಭೆಯ ನಂತರ 388 ಮಂದಿ ವಿಕಲಚೇತನರಿಗೆ ಟಿಸಿಎಸ್ ಕಂಪನಿ ಮತ್ತು ಭಾರತೀಯ ಉಕ್ಕು ಪ್ರಾಧಿಕಾರ (SAIL) ತಮ್ಮ ಸಿಎಸ್ ಆರ್ ನಿಧಿಯಲ್ಲಿ ನೀಡಿರುವ tvsqub9 ಎಲೆಕ್ಟ್ರಿಕ್ ವಾಹನವನ್ನು ವಿತರಣೆ ಮಾಡಲಾಯಿತು. ತದನಂತರ ಇನ್ಫೋಸಿಸ್ ಕಂಪನಿ ನೀಡಿರುವ 500 ಕಂಪ್ಯೂಟರ್ ಗಳು, 100 ಲ್ಯಾಪ್ ಟಾಪ್ ಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಾಂತರ ಮಾಡಲಾಯಿತು. ಹಿಂದುಜಾ ಕಂಪನಿ ಸಿಎಸ್ ಆರ್ ನಿಧಿಯಲ್ಲಿ ನೀಡಿರುವ ಅತ್ಯಾಧುನಿಕ ಆಂಬ್ಯುಲೆನ್ಸ್ ಅನ್ನು ಮಂಡ್ಯದ ಮಿಮ್ಸ್ ಸಂಸ್ಥೆಗೆ ನೀಡಲಾಯಿತು.
ಬಾವುಕರಾದ ಹೆಚ್ಡಿಕೆ:
ವಿಕಲಚೇತನರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು ಭಾವೋದ್ವೇಗಕ್ಕೆ ಒಳಗಾದರು. ವಾಹನಗಳನ್ನು ಸ್ವೀಕರಿಸುತ್ತಿದ್ದ ವಿಕಲಚೇತನರು ತಮಗೇ ಕೃತಜ್ಞತೆ ಹೇಳುವಾಗ ಕಣ್ಣಲ್ಲಿ ನೀರು ತಂಬಿಕೊಂಡ ಸಚಿವರು, ಇಷ್ಟು ದೂರ ಬಂದು ವಾಹನಗಳನ್ನು ಸ್ವೀಕರಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಈ ವಿರಳ ಸಂದರ್ಭಕ್ಕೆ ಕೇಂದ್ರದ ಸಚಿವರಾದ ಮನ್ಸುಖ್ ಮಾಂಡವೀಯ ಅವರು, ಸ್ವಾಮೀಜಿ ಅವರು ಮತ್ತು ಇನ್ನಿತರ ಗಣ್ಯರು ಸಾಕ್ಷಿಯಾದರು.
ಬೃಹತ್ ಬೆಲ್ಲದ ಹಾಕಿ ಸಚಿವರೊಬ್ಬರನ್ನು ಸ್ವಾಗತಿಸಿದ ಅಭಿಮಾನಿಗಳು:
ಒಳಾಂಗಣ ಕ್ರೀಡಾಂಗಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಕೇಂದ್ರದ ಇಬ್ಬರೂ ಸಚಿವರನ್ನು ವೇದಿಕೆಯ ಕಾರ್ಯಕ್ರಮಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಈ ಸಂದರ್ಭದಲ್ಲಿ ವಿಸಿ ಫಾರಂ ಗೇಟ್ ನಲ್ಲಿ ಬೃಹತ್ ಬೆಲ್ಲದ ಹರವನ್ನು ಹಾರ ಬರಮಾಡಿಕೊಳ್ಳಲಾಯಿತು. ಇಷ್ಟೊಂದು ದೊಡ್ಡ ಪ್ರಮಾಣದ ಬೆಲ್ಲದ ಹಾರದ ಮೂಲಕ ಸಿಕ್ಕಿದ ಸ್ವಾಗತವನ್ನು ಕಂಡು ಮಾಂಡವೀಯ ಅವರು ಚಕಿತರಾದರು. ಮಂಡ್ಯದ ಬೆಲ್ಲದ ಶ್ರೇಷ್ಠತೆಯ ಬಗ್ಗೆ ಕುಮಾರಸ್ವಾಮಿ ಅವರು ಮಾಂಡವೀಯ ಅವರಿಗೆ ವಿವರಣೆ ನೀಡಿದರು.
ಮಂಡ್ಯ 14 ಮಾರ್ಚ್ 2026
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರುವ ಕೆಲಸ ಪ್ರಗತಿಯಲ್ಲಿದ್ದು, ಅದಷ್ಟು ಬೇಗ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರವನ್ನು ತರುವ ಕೆಲಸ ಪ್ರಗತಿಯಲ್ಲಿದೆ. ಜಾಗ ಹಂಚಿಕೆಯ ಪತ್ರ ನಮ್ಮ ಕೈ ಸೇರಿದ ಕೂಡಲೇ ಕೇಂದ್ರದ ಪರಿಣಿತರ ತಂಡ ಮಂಡ್ಯ ಜಿಲ್ಲೆಗೆ ಬಂದು ಪರಿಶೀಲನೆ ನಡೆಸಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ವಿಸಿ ಫಾರಂನಲ್ಲಿ ₹14 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಬೇಡಿಕೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ನಾನು ಮಾತು ಕೊಟ್ಟಿದ್ದೇನೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ARAI ಪರೀಕ್ಷಾ ಕೇಂದ್ರದ ಕೆಲಸಗಳು ದೆಹಲಿ ಮಟ್ಟದಲ್ಲಿ ವೇಗದಿಂದ ನಡೆಯುತ್ತಿವೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ನುಡಿದರು.
ಮಂಡ್ಯದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಬೇಕು ಎಂಬುದು ಬಹುದಿನಗಳ ಬೇಡಿಕೆ. ಅದನ್ನು ಈಡೇರಿಸುತ್ತಿದ್ದೇವೆ. ಈಗ ಭೂಮಿಪೂಜೆ ನೆರವೇರಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಕಾಮಗಾರಿ ಶುರುವಾಗಲಿದೆ. ಹಾಗೆಯೇ ಅಷ್ಟೇ ವೇಗವಾಗಿ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.
ತಮ್ಮ ಮನವಿಯನ್ನು ಪುರಸ್ಕರಿಸಿ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಮಂಜೂರಾತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರದ ಕ್ರೀಡಾ ಸಚಿವರಾದ ಮನ್ಸೂಖ್ ಮಾಂಡವಿಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಮನವಿಗೆ ಸ್ಪಂದಿಸಿ ಮಂಡ್ಯ ಜಿಲ್ಲೆಗೆ ಖೇಲೋ ಇಂಡಿಯಾ ಯೋಜನೆಯಡಿ ಸ್ಟೇಡಿಯಂ ನೀಡಿದ್ದಾರೆ. ಅವರ ಕಾಳಜಿಯನ್ನು ನಾನು ಮರೆಯಲಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಟಿಸಿಎಸ್, ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರ (SAIL), ಇನ್ಫೋಸಿಸ್, ಹಿಂದೂಜಾ, ಹೆಚ್ ಎಂಟಿ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಲ್ಲಿ ಅನುದಾನ ನೀಡಿವೆ. ಆ ಮೂಲಕ
380ಕ್ಕೂ ವಿಕಲಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕ್ ವಾಹನಗಳು, ಮಂಡ್ಯದ 600 ಶಾಲೆಗಳಿಗೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಹಾಗೂ ಮಂಡ್ಯದ ಮಿಮ್ಸ್ ಗೆ ಸುಸಜ್ಜಿತ ಆಂಬ್ಯುಲೆನ್ಸ್ ನೀಡಲಾಗಿದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿಸಿವೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನ ಸಬಲೀಕರಣಕ್ಕೆ ನರೇಂದ್ರ ಮೋದಿ ಅವರ ಸರಕಾರ ಅತಿಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಪ್ರತಿ ಸಂಪುಟ ಸಭೆಯಲ್ಲಿ ಯುವಜನರ ಕಲ್ಯಾಣಕ್ಕೆ ಪ್ರಧಾನಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸೂಚನೆಗಳನ್ನು ಮನ್ಸೂಖ್ ಮಾಂಡವಿಯಾ ಅವರು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಕೇಂದ್ರ ಸಚಿವರು ನುಡಿದರು.
ಮಂಡ್ಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಕೊಡಲಾಗುತ್ತಿದೆ. ಈಗಾಗಲೇ ಸಿಎಸ್ಆರ್ ಅನುದಾನದಡಿ 96 ಶಾಲೆಗಳ ನವೀಕರಣಕ್ಕೆ ಅನುದಾನ ನೀಡಲಾಗಿದೆ. ನಿಮ್ಮೆಲ್ಲರ ನಿರೀಕ್ಷೆ ಹುಸಿಗೊಳಿಸದೆ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ನನ್ನ ಇಲಾಖೆಯಿಂದಲೇ ಆಗುತ್ತಿದ್ದು, ARAI ಘಟಕ ಸ್ಥಾಪನೆ ಆಗಲಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಯುವಜನರಿಗೆ ಉದ್ಯೋಗ ಸಿಗಲಿದೆ ಎಂದು ಅವರು ಹೇಳಿದರು.




Comments
Leave a Comment