ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.
From Jayaram Udupi
ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.
ಮುಲ್ಕಿ/ ದಕ್ಷಿಣ ಕನ್ನಡ:
ಮುಲ್ಕಿ ಸುಂದರಾಂ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಶನಿವಾರ ಮುಲ್ಕಿ ಸುಂದರಾಂ ಶೆಟ್ಟಿ ಸಭಾಭವನದಲ್ಲಿ ಜರುಗಿತು.
ಮುನ್ನೂರು ಕುಟುಂಬಗಳಿಗೆ ಒಟ್ಟು ಐವತ್ತು ಲಕ್ಷ ರೂಪಾಯಿ ಮೌಲ್ಯದ ಬೆಂಬಲವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಮುಲ್ಕಿ ಸುಂದರಾಂ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ನಮ್ಮ ಸಮಾಜದ ಓರ್ವ ಕಣ್ಮಣಿ, ಮುಲ್ಕಿಯ ಮಾಣಿಕ್ಯ ಸುಂದರಾಂ ಶೆಟ್ಟಿ ಅವರ ಹೆಸರಿನಲ್ಲಿ ಟ್ರಸ್ಟ್ ಅಧ್ಯಕ್ಷನಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ ಎಂದರು.
ಮುಲ್ಕಿಯಲ್ಲಿ ಈ ಸಭಾಭವನವನ್ನು ನಿರ್ಮಿಸುವ ಜವಾಬ್ದಾರಿಯನ್ನು ಆರ್.ಎನ್. ಶೆಟ್ಟಿ, ನಿಟ್ಟೆ ವಿನಯ್ ಹೆಗ್ಡೆ ಅವರ ಸಮ್ಮುಖದಲ್ಲಿ ನನ್ನ ಮೇಲೆ ಹೊರಿಸಲಾಯಿತು. ನನ್ನ ತಂದೆ ಮುಲ್ಕಿ ಸುಂದರಾಂ ಶೆಟ್ಟಿಯವರನ್ನು ಭೇಟಿಯಾಗಿದ್ದರು.ಅವರು ತಮ್ಮ ಹದಿನೈದು ನಿಮಿಷದ ಭೇಟಿಯನ್ನು ಆಗಾಗ ನೆನಪಿಸಿಕೊಂಡು ನನಗೆ ಹೇಳುತ್ತಿದ್ದರು. ನನ್ನ ತಂದೆಯ ಮೇಲೆ ಅಗಾಧ ಪ್ರಭಾವ ಬೀರಿದ ಸುಂದರಾಂ ಶೆಟ್ಟಿ ಅವರನ್ನು ನೋಡಬೇಕು ಎಂಬ ಆಸೆ ಇತ್ತು.ಆದರೆ ಅದು ಈಡೇರಲಿಲ್ಲ. ಅವರ ನೆನಪಿನ ಟ್ರಸ್ಟ್ ಜವಾಬ್ದಾರಿ ನನ್ನ ಮೇಲೆ ಹೊರಿಸಲ್ಪಟ್ಟಾಗ ನಾನು ಆ ಭಾವನಾತ್ಮಕ ಕಾರಣದಿಂದ ಸ್ವೀಕರಿಸಿದೆ ಎಂದು ಡಾ. ಪ್ರಕಾಶ್ ಶೆಟ್ಟಿ ತಾವು ಟ್ರಸ್ಟ್ ಜವಾಬ್ದಾರಿ ವಹಿಸಿಕೊಂಡ ಹಿಂದಿನ ಕಾರಣಗಳನ್ನು ವಿವರಿಸಿದರು.
ಸಭಾಭವನ ಆದ ಮೇಲೆ ಅನೇಕರು ಟ್ರಸ್ಟ್ ತಮ್ಮದು ಎನ್ನುತ್ತಿದ್ದಾರೆ. ಆರು ಸಹಕಾರಿ ಬ್ಯಾಂಕ್ ಗಳನ್ನು ವಿಜಯ ಬ್ಯಾಂಕಿನೊಳಗೆ ಸೇರಿಸಿಕೊಂಡು ೯ ಸಾವಿರ ಮಂದಿಗೆ ಕೆಲಸ ನೀಡಿದ ಸುಂದರಾಂ ಶೆಟ್ಟಿ ಅವರನ್ನು ಸ್ಮರಿಸುವ ಕೆಲಸ ನಾವು ಮಾಡುವಾಗ, ಮೂವತ್ತು ವರ್ಷ ಕಾಲ ಅವರನ್ನು ಮರೆತು ಬಿಟ್ಟ ಜನ ಒಳ್ಳೆಯ ಕೆಲಸಕ್ಕೆ ಅಡ್ಡಿಮಾಡಲು ಹೊರಟಿದ್ದಾರೆ ಎಂದು ಡಾ.ಶೆಟ್ಟಿ ಮನದ ನೋವು ತೋಡಿಕೊಂಡರು. ಸಭಾಭವನಕ್ಕೆ ಆರ್.ಎನ್. ಶೆಟ್ಟಿ ೫ ಕೋಟಿ ರೂಪಾಯಿ ಮತ್ತು ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ಸರಕಾರದಿಂದ ೫ ಕೋಟಿ ರೂಪಾಯಿ ನೆರವನ್ನು ಆರಂಭಿಕ ಹಂತದಲ್ಲಿಯೇ ನೀಡಿದ್ದನ್ನು ಅವರು ಸ್ಮರಿಸಿದರು.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಬ್ಯಾಕ್ ಟು ಊರು ಚಿಂತನೆಯನ್ನು ಶ್ಲಾಘಿಸಿದ ಡಾ. ಪ್ರಕಾಶ್ ಶೆಟ್ಟಿ ತಾವು ಗೋಲ್ಡ್ ಫಿಂಚ್ ಸಿಟಿಯಲ್ಲಿ ಏಳು ಮಿಲಿಯನ್ ಚದರಡಿ ಸ್ಥಳಾವಕಾಶ ಇರುವ ಐ.ಟಿ.ಪಾರ್ಕ್ ನಿರ್ಮಾಣ ಮಾಡುತ್ತಿರುವುದಾಗಿಯೂ ಇದೇ ಸಂದರ್ಭ ಪ್ರಕಟಿಸಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಈ ವರ್ಷ ತಮ್ಮ ಮಹತ್ವಾಕಾಂಕ್ಷೆಯ ಬೊಲ್ಪು ಕಾರ್ಯಕ್ರಮದಲ್ಲಿ ಹತ್ತು ಐಡಿಯಾಗಳನ್ನು ಆಯ್ಕೆ ಮಾಡಲಾಗಿದೆ.ಸುಂದರಾಂ ಶೆಟ್ಟಿ ಅವರ ಮಾದರಿಯನ್ನು ಇಲ್ಲಿ ಸೃಷ್ಟಿಸುವುದು ತಮ್ಮ ಬಯಕೆ ಎಂದರು.
ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಎ ಉಮಾನಾಥ್ ಕೋಟ್ಯಾನ್ ಮಾತನಾಡಿ, “ಸುಂದರಾಂ ಶೆಟ್ಟಿ ಅವರು ತಮ್ಮ ಬಳಿ ಬಂದವರನ್ನು ಅವರವರ ಅರ್ಹತೆಗೆ ಅನುಗುಣವಾಗಿ ಕೆಲಸ ನೀಡಿ ಜೀವನೋಪಾಯ ಕಲ್ಪಿಸಿದರು. ಅವರೋರ್ವ ಅನುಕರಣೀಯ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ಎಂದರು.
ದೈಜಿ ವರ್ಲ್ಡ್ ನ ವಾಲ್ಟರ್ ನಂದಳಿಕೆ ಮಾತಾಡಿ, “ಮುಲ್ಕಿ ಸುಂದರಾಂ ಶೆಟ್ಟಿಯವರಂತೆಯೇ ಬದುಕುತ್ತಿರುವ ಪ್ರಕಾಶ್ ಶೆಟ್ಟಿ ಅವರದ್ದು ಅಪರೂಪದ ವ್ಯಕ್ತಿತ್ವ. ಇಂದಿಲ್ಲಿ ಸಹಾಯಹಸ್ತ ಪಡೆದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಸಾಧನೆಯನ್ನು ಮಾಡಿ ಸಮಾಜದ ಇನ್ನಷ್ಟು ಜನರಿಗೆ ನೆರವಾಗಬೇಕು” ಎಂದರು.
ವೇದಿಕೆಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಪುತ್ರ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ನ ಟ್ರಸ್ಟಿ ಬಾಲಕೃಷ್ಣ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಹಾಗೂ ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ಗುರ್ಮೆ ವಂದಿಸಿದರು.
ಈ ಬಾರಿ ಮುಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ 300 ಕುಟುಂಬಗಳಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ ಒಟ್ಟು 50 ಲಕ್ಷ ರೂಪಾಯಿಗಳ ಸಹಾಯ ಧನವನ್ನು ವಿತರಿಸಲಾಯಿತು.ಸಮಾರಂಭದ ಕಾರ್ಯಕ್ರಮ ಆಯೋಜನೆಗಾಗಿ ದುಡಿದ 'ಯಥಾರ್ಥ"ದ ಈಶ್ವರ್ ಶೆಟ್ಟಿ ತಂಡವನ್ನು ಡಾ.ಪ್ರಕಾಶ್ ಶೆಟ್ಟಿ ಅಭಿನಂದಿಸಿದರು.



Comments
Leave a Comment