ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬಾಗಲಕೋಟೆ, ಮಾ.14:
“ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ಅಣೆಕಟ್ಟಿನ ನೀರು ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರ ಪ್ರದೇಶದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಾಜ್ಯದ ಸಂಸದರ ಜತೆ ದೆಹಲಿಯ ಕರ್ನಾಟಕ ಭವನದಲ್ಲಿ ಬರುವ ಮಂಗಳವಾರ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
“ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಂಧ್ರ ಪ್ರದೇಶದವರು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ. ನ್ಯಾಯಾಧೀಕರಣ ಆದೇಶದ ಪ್ರಕಾರ ನಮ್ಮ ಪಾಲಿನ ನೀರಿನ ಬಳಕೆಗೆ ಯೋಜನೆ ಮಾಡುತ್ತಿದ್ದು, ಈಗಾಗಲೇ 26 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಆರಂಭಿಸಿದ್ದೇವೆ” ಎಂದು ಡಿಸಿಎಂ ಅವರು ವಿವರಿಸಿದರು.
“ನಾವು ಈಗಲೇ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುತ್ತಿಲ್ಲ. 2010 ರಲ್ಲಿ ಆಗಿರುವ ಆದೇಶದ ಅನುಸಾರ ನಮ್ಮ ಪಾಲಿನ ನೀರು ಬಳಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಆಂಧ್ರ ಪ್ರದೇಶ ಸರ್ಕಾರ ತಗಾದೆ ತೆಗೆದಿದೆ. ಇದರ ಜತೆಗೆ, ತುಂಗಭದ್ರಾ ಅಣೆಕಟ್ಟೆಯಿಂದ ನಮಗೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆಂಧ್ರ ಸರಕಾರ ನಮಗೆ ಸಹಕಾರ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸಂಸದರ ಜತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ನಾನು, ಸಚಿವರಾದ ಹೆಚ್.ಕೆ ಪಾಟೀಲ್, ಎಂ.ಬಿ. ಪಾಟೀಲ್, ಬೋಸರಾಜು ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.



Comments
Leave a Comment