ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ
ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ನೇಮಕಾತಿಗಳನ್ನು ಕಾಂಗ್ರೆಸ್ ಸರ್ಕಾರ ತಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದೆ. ನಮ್ಮ ಸರ್ಕಾರದ ಸಾಧನೆಯನ್ನು ಅವರ ಸಾಧನೆಗಳಂತೆ ಪಟ್ಟಿ ಮಾಡಿ ಇಡೀ ರಾಜ್ಯದ ಜನರನ್ನು ವಂಚನೆ ಮಾಡುತ್ತಿದೆ ಎಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ವಿಧಾನಸೌಧ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೇಮಕಾತಿ ಸಂಬಂಧ ಸರ್ಕಾರ ಸದನಕ್ಕೆ ತಪ್ಪು ಮಾಹಿತಿಯನ್ನು ಮುಖ್ಯಮಂತ್ರಿಗಳು ಹಾಗೂ ಸಚಿವರು ನೀಡುತ್ತಿರುವುದು ವಿಪರ್ಯಾಸ. ಸರ್ಕಾರವೇ ಜನರಿಗೆ ವಂಚನೆ ಮಾಡಲು ಮುಂದಾದರೆ ಯಾರು ಉತ್ತರ ಕೊಡ್ತಾರೆ, ನ್ಯಾಯ ಕೊಡ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ನೀಡದೆ ಸರ್ಕಾರ ಅನ್ಯಾಯ, ಮೋಸ ಮಾಡಿದೆ. ಹುದ್ದೆ ಯಾಕೆ ತುಂಬಿಲ್ಲ ಎಂಬುದನ್ನು ವಿಧಾನ ಪರಿಷತ್‍ನಲ್ಲಿ ನಿಲುವಳಿ ಸೂಚನೆ ಮೂಲಕ ಪ್ರಶ್ನೆ ಮಾಡಿದ್ದೇವೆ ಎಂದು ನುಡಿದರು.
ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳ ಪರವಾಗಿ ಬಿಜೆಪಿ ನಿಲ್ಲಲಿದೆ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನೂ ಮಾಡುತ್ತೆ. ಈ ಸರ್ಕಾರದಿಂದ ದಲಿತರಿಗೂ ದೋಖಾ ಆಗಿದೆ, ಯುವಜನರಿಗೂ ದೋಖಾ ಆಗಿದೆ, ವಿದ್ಯಾರ್ಥಿಗಳಿಗೆ ದೋಖಾ ಆಗಿದೆ. ಒಟ್ಟಾರೆ ಇದೊಂದು ದೋಖಾ ಸರ್ಕಾರ ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಈ ಸರ್ಕಾರ, ಅವರನ್ನು ವಂಚಿಸುವ ಕೆಲಸವನ್ನು ಮಾಡ್ತಾ ಇದೆ. ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳನ್ನು ತುಂಬಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯದಲ್ಲಿ ಯುವಕರ ಪರವಾಗಿ ಹೋರಾಟ ಮಾಡುತ್ತಿದೆ ಎಂದು ವಿವರಿಸಿದರು.
ಧಾರವಾಡದಲ್ಲಿ ಕಳೆದ ತಿಂಗಳು ಉದ್ಯೋಗಕ್ಕಾಗಿ ಬೃಹತ್ ಪ್ರತಿಭಟನೆ ನಡೆಯಿತು. 50 ಸಾವಿರಕ್ಕೂ ಹೆಚ್ಚು ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡಿದಾಗ ನಾನೂ ಬೆಂಬಲ ನೀಡಿದ್ದೆ. ಬಿಜೆಪಿ ಹೋರಾಟಕ್ಕೆ ಧುಮುಕಿದ ಕೂಡಲೇ ಸರ್ಕಾರ ತರಾತುರಿಯಲ್ಲಿ 56 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಹೇಳಿ ಒಂದು ತಿಂಗಳ ಗಡುವಿನ ವಾಗ್ದಾನ ನೀಡಿದ್ದರು ಎಂದು ನೆನಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ ನಾವು ಪ್ರಶ್ನೆ ಮಾಡಿದಾಗ 30 ರಿಂದ 35 ಸಾವಿರ ಹುದ್ದೆ ತುಂಬಿದ್ದೇವೆ ಅಂತ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದರು.
2025 ರ ರವರೆಗೆ ಈ ಕಾಂಗ್ರೆಸ್ ಸರ್ಕಾರ ಒಂದು ಹುದ್ದೆಯನ್ನೂ ತುಂಬಿರಲಿಲ್ಲ. ನೇಮಕಾತಿ ಬಗ್ಗೆ ಕೇಳಿದರೆ ಪರೀಕ್ಷೆ ನಡೆಯುತ್ತಿದೆ, ಪರೀಕ್ಷೆ ನಿಗದಿಯಾಗಿದೆ ಎಂಬ ಬೇರೆ ಬೇರೆ ಸಬೂಬನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಡುಗೆ ಅನಿಲ ಸಮಸ್ಯೆ ಕಾಂಗ್ರೆಸ್‍ನವರಿಗೆ ಅರ್ಥ ಆಗಲ್ಲ...
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ಕಚ್ಚಾತೈಲ ದೊರೆಯದೆ ಅಡುಗೆ ಅನಿಲಕ್ಕೆ ಕೊರತೆಯಾಗಿದೆ. ಇದು ದೇಶದ, ಪ್ರಪಂಚದ ಸಮಸ್ಯೆ. ಇದು ಎಲ್ಲರಿಗೂ ಅರ್ಥವಾಗುತ್ತೆ. ಆದರೆ ಕಾಂಗ್ರೆಸ್‍ನವರಿಗೆ ಅರ್ಥವಾಗಲ್ಲ. ಅಷ್ಟು ಬುದ್ಧಿವಂತರು ಅವರಲ್ಲಿ ಇಲ್ಲ ಎಂದರು.
ಪ್ರತಿಭಟನೆ ಮಾಡಬೇಕು ಎಂಬ ಒಂದೇ ಕಾರಣದಿಂದ ರಸ್ತೆಯಲ್ಲಿ ಅಡುಗೆ ಮಾಡ್ತ ಇದ್ದಾರೆ. ಅವರಿಗೆ ಮನೆಯಲ್ಲಿ ಅಡುಗೆ ಮಾಡಿ ಗೊತ್ತಿಲ್ಲ. ಅಡುಗೆ ಅನಿಲ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿಕೊಂಡ ಪ್ರಜ್ಞಾಹೀನ ಕಾಂಗ್ರೆಸ್ ಇದು ಎಂದು ದೂರಿದರು.





Comments
Leave a Comment