ಜಿಲ್ಲೆಯಲ್ಲಿ ಕುಡಿಯುವ ನೀರು ಅಭಾವವಾಗದಂತೆ ಮುಂಜಾಗ್ರತವಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
14 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜು; ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಜಿಲ್ಲೆಯಲ್ಲಿ ಕುಡಿಯುವ ನೀರು ಅಭಾವವಾಗದಂತೆ ಮುಂಜಾಗ್ರತವಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ ,ಏ.2 - ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಕುರಿತು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತದ ಕೈಗೊಂಡ ಮುಂಜಾಗೃತಾ ಕ್ರಮದಿಂದಾಗಿ ತಕ್ಷಣ ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಜನರಿಗೆ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ಮುನ್ನೆಚರಿಕೆ ವಹಿಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೇಸಿಗೆಯ ಪೂರ್ವದಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಗ್ರಾಮಗಳ ಸಮೀಕ್ಷೆ ಮಾಡಿ, ವಿವಿಧ ತಾಲೂಕುಗಳ 90 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳೆಂದು ಗುರುತಿಸಿತ್ತು. ಮತ್ತು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಚಿಟಾದಲ್ಲಿ ತಕ್ಷಣ ಪರಿಹರಿಸಿ, ಸುಗಮವಾಗಿ ಕುಡಿಯುವ ನೀರು ಸರಬರಾಜು ಮಾಡಲು ಆಯಾ ಗ್ರಾಮ ವ್ಯಾಪ್ತಿಯ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಅಂದಾಜು 186 ಕೊಳವೆಬಾವಿಗಳ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಪಡೆಯಲು ಕ್ರಮವಹಿಸಲಾಗಿತ್ತು. ಅದರಂತೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಲ್ಲಿ ತಕ್ಷಣ ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಧಾರವಾಡ ತಾಲೂಕಿನಲ್ಲಿ ಒಟ್ಟು 115 ಗ್ರಾಮಗಳು ಇದ್ದು, ಅವುಗಳ ಪೈಕಿ 30 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ, ಆ ಗ್ರಾಮಗಳಲ್ಲಿ 60 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಮಾಲಿಕರೊಂದಿಗೆ ನೀರು ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈಗ ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ, ಮುಗದ, ಮನಗುಂಡಿ, ಶಿಬಾರಗಟ್ಟಿ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನಲ್ಲಿ ಒಟ್ಟು 46 ಗ್ರಾಮಗಳು ಇದ್ದು, ಅವುಗಳ ಪೈಕಿ 19 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ, ಆ ಗ್ರಾಮಗಳಲ್ಲಿ 30 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರಸ್ತುತ ಹುಬ್ಬಳ್ಳಿ ತಾಲೂಕಿನ ನೂಲ್ವಿ, ಅದರಗುಂಚಿ, ಕುರಡಿಕೆರೆ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ.
ಕಲಘಟಗಿ ತಾಲೂಕಿನಲ್ಲಿ ಒಟ್ಟು 87 ಗ್ರಾಮಗಳು ಇದ್ದು, ಅವುಗಳ ಪೈಕಿ 16 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ, ಆ ಗ್ರಾಮಗಳಲ್ಲಿನ 46 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಮಾಲಿಕರೊಂದಿಗೆ ನೀರು ಸರಬರಾಜುಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರಸ್ತುತ ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡ, ಬಿ.ಹುಲಿಕಟ್ಟಿ, ದ್ಯಾಮನಕೊಂಡ, ಮುಕ್ಕಲ, ಹಿರೆ ಹುಣಸಿಕಟ್ಟಿ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 14 ಗ್ರಾಮಗಳಲ್ಲಿ 16 ಖಾಸಗಿ ಕೊಳವೆ ಬಾವಿಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅದರಂತೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಕುಂದಗೋಳ ತಾಲೂಕಿನ 9 ಗ್ರಾಮಗಳಿಗೆ 48 ಖಾಸಗಿ ಕೊಳವೆಬಾವಿಗಳು, ಅಳ್ನಾವರ ತಾಲೂಕಿನ 4 ಗ್ರಾಮಗಳಿಗೆ 2 ಖಾಸಗಿ ಕೊಳವೆಬಾವಿಗಳನ್ನು ಮುಂಜಾಗ್ರತಿಯಾಗಿ ಗುರುತಿಸಲಾಗಿದೆ. ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಕೆರೆ ಹಾಗೂ ಇತರ ಜಲಮೂಲಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Comments
Leave a Comment