PRABHAVAA.COM

ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ವೇಗ: ವರ್ಷಕ್ಕೆ ಎರಡು ಬಾರಿ ಕಡ್ಡಾಯ ಇಲಾಖಾ ಮುಂಬಡ್ತಿ ಸಭೆ ನಡೆಸಲು ಶಿಕ್ಷಣ ಇಲಾಖೆಯ ಸುತ್ತೋಲೆ

Bengaluru Urban:

Font size:

ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ವೇಗ: ವರ್ಷಕ್ಕೆ ಎರಡು ಬಾರಿ ಕಡ್ಡಾಯ ಇಲಾಖಾ ಮುಂಬಡ್ತಿ ಸಭೆ ನಡೆಸಲು ಶಿಕ್ಷಣ ಇಲಾಖೆಯ ಸುತ್ತೋಲೆ

ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ವೇಗ: ವರ್ಷಕ್ಕೆ ಎರಡು ಬಾರಿ ಕಡ್ಡಾಯ ಇಲಾಖಾ ಮುಂಬಡ್ತಿ ಸಭೆ ನಡೆಸಲು ಶಿಕ್ಷಣ ಇಲಾಖೆಯ ಸುತ್ತೋಲೆ

for link : https://prabhavaa.com/media/documents/teachers_promotion.pdf

ಬೆಂಗಳೂರು, ಅ 18-ಶಿಕ್ಷಣ ಇಲಾಖೆಯ ಎಲ್ಲಾ ವೃಂದಗಳ ಅಧಿಕಾರಿ, ಶಿಕ್ಷಕರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಆಯುಕ್ತರ ಕಚೇರಿ ಮಹತ್ವದ ಸುತ್ತೋಲೆ ಹೊರಡಿಸಿದೆ. ಇಲಾಖಾ ಮುಂಬಡ್ತಿ ಸಮಿತಿಗಳು (ಡಿಪಿಸಿ) ಅನುಸರಿಸಬೇಕಾದ ಕಾರ್ಯವಿಧಾನ ಹಾಗೂ ಕಾಲಮಿತಿಯನ್ನು ಸ್ಪಷ್ಟಪಡಿಸಿರುವ ಈ ಸುತ್ತೋಲೆಯಲ್ಲಿ, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮುಂಬಡ್ತಿ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರ ಈಗಾಗಲೇ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಇಲಾಖಾ ಮುಂಬಡ್ತಿ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ನಡೆಸಿ ಅರ್ಹ ನೌಕರರಿಗೆ ಬಡ್ತಿ ಕಲ್ಪಿಸಬೇಕಾಗಿದೆ. ಆದರೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಹಾಗೂ ಇಲಾಖಾ ಮುಂಬಡ್ತಿ ಸಮಿತಿಗಳು ಈ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ಬಡ್ತಿಗಳು ವಿಳಂಬವಾಗುತ್ತಿವೆ ಎಂಬ ಅಂಶ ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಇಲಾಖಾ ಮುಂಬಡ್ತಿ ಸಮಿತಿಗಳಿಗೆ ಕಟ್ಟುನಿಟ್ಟಿನ ವೇಳಾಪಟ್ಟಿಯನ್ನು ನಿಗದಿಪಡಿಸಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯ ಪ್ರಕಾರ, ಇಲಾಖೆಗಳು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಖಾಲಿ ಇರುವ ಹಾಗೂ ಮುಂದಿನ ಆರು ತಿಂಗಳ ಅವಧಿಯಲ್ಲಿ ನಿವೃತ್ತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಲಿಯಾಗಲಿರುವ ಹುದ್ದೆಗಳನ್ನು ಮುಂಚಿತವಾಗಿಯೇ ಗುರುತಿಸಿ ಬಡ್ತಿ ಪ್ರಕ್ರಿಯೆ ಆರಂಭಿಸಬೇಕಾಗಿದೆ. ಬಡ್ತಿ ನೀಡುವ ಕಾರ್ಯವನ್ನು ವರ್ಷದಲ್ಲಿ ಎರಡು ಹಂತಗಳಲ್ಲಿ ಪೂರ್ಣಗೊಳಿಸಬೇಕು. ಮೊದಲ ಹಂತವು ಜನವರಿಯಿಂದ ಜೂನ್ ಅಂತ್ಯದವರೆಗೆ ಮತ್ತು ಎರಡನೇ ಹಂತವು ಜುಲೈದಿಂದ ಡಿಸೆಂಬರ್ ಅಂತ್ಯದವರೆಗೆ ಜಾರಿಯಲ್ಲಿರಲಿದೆ.

ಮೊದಲ ಅವಧಿಯಲ್ಲಿ ಜನವರಿ 5ರೊಳಗೆ ನಿವೃತ್ತಿಯಾಗಲಿರುವ ಸಿಬ್ಬಂದಿಯ ಪಟ್ಟಿ ಪ್ರಕಟಿಸಬೇಕು. ಜನವರಿ 10ರೊಳಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಹಾಗೂ ಜನವರಿ 30ರೊಳಗೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಫೆಬ್ರವರಿ ಅಂತ್ಯದೊಳಗೆ ಪದೋನ್ನತಿಗೆ ಲಭ್ಯವಾಗುವ ಹುದ್ದೆಗಳನ್ನು ಅಂತಿಮಗೊಳಿಸಿ, ಅರ್ಹ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಪ್ರಕಟಿಸಬೇಕು. ನಂತರ ಬಡ್ತಿ ಪ್ರಸ್ತಾವನೆಗಳ ಪರಿಶೀಲನೆ ನಡೆಸಿ ಮೇ ಮೊದಲ ವಾರದಲ್ಲಿ ಇಲಾಖಾ ಮುಂಬಡ್ತಿ ಸಮಿತಿಯ ಸಭೆ ನಡೆಸಬೇಕು. ಮೇ ತಿಂಗಳ ಅಂತ್ಯದೊಳಗೆ ಸಂಪೂರ್ಣ ಬಡ್ತಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕಾಗಿದೆ.

ಎರಡನೇ ಅವಧಿಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಲಭ್ಯವಾಗಲಿರುವ ಪದೋನ್ನತಿ ಹುದ್ದೆಗಳನ್ನು ಆಗಸ್ಟ್ ಅಂತ್ಯದೊಳಗೆ ಗುರುತಿಸಿ ಅಂತಿಮಗೊಳಿಸಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಬಡ್ತಿಗೆ ಅರ್ಹರ ಪಟ್ಟಿಯನ್ನು ಪ್ರಕಟಿಸಬೇಕು. ಅಕ್ಟೋಬರ್ ಅಂತ್ಯದೊಳಗೆ ಪ್ರಸ್ತಾವನೆಗಳ ಪರಿಶೀಲನೆ ಪೂರ್ಣಗೊಳಿಸಿ, ನವೆಂಬರ್ 15ರೊಳಗೆ ಇಲಾಖಾ ಮುಂಬಡ್ತಿ ಸಮಿತಿಯ ಸಭೆ ನಡೆಸಬೇಕು. ನವೆಂಬರ್ ಅಂತ್ಯದೊಳಗೆ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಮತ್ತು ಮುಂಬಡ್ತಿ ಸಮಿತಿಗಳು ರಾಜ್ಯ ಸರ್ಕಾರ ಹೊರಡಿಸಿರುವ ಕಾಯ್ದೆ, ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮುಂಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ ಹಾಗೂ ಅರ್ಹ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಬಡ್ತಿ ದೊರೆಯುವಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ವೇಳಾಪಟ್ಟಿಯನ್ನು ರೂಪಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಅವರು ಈ ಸುತ್ತೋಲೆಗೆ ಡಿಜಿಟಲ್ ಸಹಿ ಹಾಕಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ವಿಭಾಗೀಯ ಸಹ ನಿರ್ದೇಶಕರಿಗೆ ಅನುಷ್ಠಾನದ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ಈ ಕ್ರಮದಿಂದ ಹಲವು ವರ್ಷಗಳಿಂದ ಬಡ್ತಿ ನಿರೀಕ್ಷೆಯಲ್ಲಿರುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ಶೀಘ್ರದಲ್ಲೇ ಅನುಕೂಲವಾಗುವ ನಿರೀಕ್ಷೆ ಮೂಡಿದೆ.

Comments

Leave a Comment

Prev Post ರೊಚ್ಚಿಗೆದ್ದು ರಸ್ತೆಗಿಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು ಬೆಂಗಳೂರಿನ ಹೆಮ್ಮೆ ಜ್ಯೋತಿ ನಿವಾಸ್ ಕಾಲೇಜು

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

Read all News