ನೂತನ ರಾಜ್ಯಪಾಲರಿಗೆ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಬುಭಖ್ರು.
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ
ನೂತನ ರಾಜ್ಯಪಾಲರಿಗೆ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಬುಭಖ್ರು.
ಬೆಂಗಳೂರು, ಅಕ್ಟೋಬರ್ 16 (ಕರ್ನಾಟಕ ವಾರ್ತೆ) :
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ವಿಬು ಭಖ್ರು ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಹಾಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಇಂದು ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಈ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಪ್ರವಾಸೋದ್ಯಮ ಹಾಗೂ ಇಂದನ ಸಚಿವರಾದ ಕೆ.ಜೆ. ಜಾರ್ಜ್, ಗೃಹ ಸಚಿವರಾದ ಪ್ರಿಯಂಕ್ ಖರ್ಗೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾಧಿ ಟಿ. ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್ ಶಾಸಕರು, ರಾಜ್ಯಸಭೆ ಮತ್ತು ಲೋಕಸಭೆ ಸಂಸದರು, ಗಣ್ಯರು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಹಿರಿಯ ಅಧಿಕಾರಿಗಳು, ಉಪಸ್ಥಿತರಿದ್ದರು.
ಡಾ. ಸುಧಾ ಯಾದವ್ ಅವರ ವಿವರ ಹಾಗೂ ಹಿನ್ನೆಲೆ:
ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲೆ: ಡಾ. ಸುಧಾ ಯಾದವ್ ಅವರು ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ಅಲಂಕರಿಸಿದ್ದು, ಈ ಹಿಂದೆ 1999ರಲ್ಲಿ ವಿ.ಎಸ್. ರಮಾದೇವಿ ಅವರು ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು.
ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ: ಇವರ ಪತಿ ಸುಖಬೀರ್ ಸಿಂಗ್ ಯಾದವ್ ಅವರು ಗಡಿ ಭದ್ರತಾ ಪಡೆಯ (BSF) ಉಪ ಕಮಾಂಡೆಂಟ್ ಆಗಿದ್ದು, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳ ಫಿರಂಗಿ ದಾಳಿಗೆ ಎದುರಾಗಿ ಹೋರಾಡಿ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.
ಉನ್ನತ ಶಿಕ್ಷಣ ಹಾಗೂ ಸಾಧನೆ: ಸುಧಾ ಯಾದವ್ ಅವರು ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಮುಗಿಸಿ ಚಿನ್ನದ ಪದಕ ಗಳಿಸಿದ್ದು, ಪಿಎಚ್ಡಿ ಪದವೀಧರೆಯಾಗಿದ್ದಾರೆ.
ರಾಜಕೀಯ ಹಾಗೂ ಸಾಂಸ್ಥಿಕ ಅನುಭವ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ರಾಜಕೀಯ ಪ್ರವೇಶಿಸಿದ ಇವರು, 1999 ರಿಂದ 2004 ರವರೆಗೆ ಹರ್ಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆಯಾದ 2ನೇ ಮಹಿಳೆ (ಸುಷ್ಮಾ ಸ್ವರಾಜ್ ಅವರ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಹಾಗೂ ಕೇಂದ್ರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ






Comments
Leave a Comment