ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮಕ್ಕೆ ಹೊಸ ಮಾರ್ಗಸೂಚಿ; ಶಿಕ್ಷಣ ವಲಯದಲ್ಲಿ ಚರ್ಚೆ
ಇಂಗ್ಲಿಷ್ ಶಿಕ್ಷಕರ ನೇಮಕಾತಿ ಅರ್ಹತೆ ಸಡಿಲಿಸಿದ ಸರ್ಕಾರ?
ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮಕ್ಕೆ ಹೊಸ ಮಾರ್ಗಸೂಚಿ; ಶಿಕ್ಷಣ ವಲಯದಲ್ಲಿ ಚರ್ಚೆ
ಬೆಂಗಳೂರು, ಅ.11- ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮ ಜಾರಿಗೊಳಿಸಲು ಅತಿಥಿ ಶಿಕ್ಷಕರ ನೇಮಕಾತಿ ಸಂಬಂಧ ರಾಜ್ಯ ಸರ್ಕಾರ ಅರ್ಹತಾ ಮಾನದಂಡದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಇದು ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ, ಆಯ್ದ ಶಾಲೆಗಳಲ್ಲಿ 6 ತಿಂಗಳ ಅವಧಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ನಡೆಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ, ಅಭ್ಯರ್ಥಿಗಳು ಇಂಗ್ಲಿಷ್ ವಿಷಯದಲ್ಲಿ ಪರಿಣಿತಿ ಹೊಂದಿರಬೇಕು. ಕಲಾ ಪದವಿಯಲ್ಲಿ Optional English ಅಧ್ಯಯನ ಮಾಡಿರಬೇಕು ಅಥವಾ English Honours ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಆದರೆ ಇದೀಗ ಹೊಸ ಸುತ್ತೋಲೆಯ ಮೂಲಕ, ಪ್ರಾಥಮಿಕ ತರಗತಿಯಿಂದ ಪದವಿ ಹಂತದವರೆಗೆ ಇಂಗ್ಲಿಷ್ ಅನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಿರುವ ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಅಭ್ಯರ್ಥಿಗಳನ್ನೂ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವಿವಾದಕ್ಕೆ ಕಾರಣವಾಗುವ ಸಾಧ್ಯತೆ
ಸರ್ಕಾರದ ಈ ನಿರ್ಧಾರವು ಶಿಕ್ಷಣ ತಜ್ಞರು ಹಾಗೂ ಶಿಕ್ಷಕರ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇಂಗ್ಲಿಷ್ ವಿಷಯದಲ್ಲಿ ವಿಶೇಷ ಶೈಕ್ಷಣಿಕ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಬದಿಗೊತ್ತಿ, ಕೇವಲ ಭಾಷಾ ಜ್ಞಾನ ಮತ್ತು ಮಾತನಾಡುವ ಸಾಮರ್ಥ್ಯದ ಆಧಾರದ ಮೇಲೆ ನೇಮಕ ಮಾಡುವುದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನೊಂದೆಡೆ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಅರ್ಹ ಇಂಗ್ಲಿಷ್ ಶಿಕ್ಷಕರ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ತ್ವರಿತ ನೇಮಕಕ್ಕೆ ಸೂಚನೆ
ಸಮಗ್ರ ಶಿಕ್ಷಣ ಕರ್ನಾಟಕವು ಸಂಬಂಧಿತ ಶಾಲೆಗಳ ಎಸ್‌ಡಿಎಂಸಿ ಗಳಿಗೆ ಅತಿಥಿ ಶಿಕ್ಷಕರನ್ನು ಕೂಡಲೇ ನೇಮಕ ಮಾಡಿಕೊಂಡು, ಅದರ ಮಾಹಿತಿಯನ್ನು ಇ-ಮೇಲ್ ಮೂಲಕ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದೆ.
ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮವು ವಿದ್ಯಾರ್ಥಿಗಳಿಗೆ ನೆರವಾಗುತ್ತದೆಯೇ ಅಥವಾ ಹೊಸ ವಿವಾದಕ್ಕೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.







Comments
Leave a Comment