ಹಾಯ್ ಅಂದ್ರೆ ಹಲೋ ಅನ್ನಬೇಡಿ ಅಂತ ಹೇಳಿದ್ದು ಯಾರು? ಹಾಯ್ ಹೇಳಿಸಿ ಟ್ರ್ಯಾಪ್ ಮಾಡಿಸೋದು ಯಾರು? - ನಿಖಿಲ್ ಪ್ರಶ್ನೆ
ನೆಲಮಂಗಲ, ಅ. 9-ಹಾಯ್-ಹಲೋ ಪಿತಾಮಹ ಯಾರು ಅಂತ ಜಗತ್ತು ನೋಡಿದೆ. ಹಾಯ್, ಹಲೋ ಅಂತ ಹೇಳಿಸೋರು ಯಾರು? ಇದು ಟ್ರ್ಯಾಪ್ ರಾಜಕಾರಣ, ಇದು ಟ್ರ್ಯಾಪ್ ಸರ್ಕಾರ. ಸ್ಟಿಂಗ್, ಟ್ರ್ಯಾಪ್ ಆಪರೇಷನ್ ಅನ್ನು ರಾಜ್ಯದಲ್ಲಿ ಯಾವ ಯಾವ ಸಂದರ್ಭದಲ್ಲಿ ಮಾಡಿಕೊಂಡು ಬಂದಿದ್ದಾರೆ ಅಂತ ರಾಜ್ಯದ ಜನತೆಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಸ್ಟಿಂಗ್ ಆಪರೇಷನ್ ಮತ್ತು ಟ್ರ್ಯಾಪ್ ರಾಜಕಾರಣದ ಬಗ್ಗೆ ನೆಲಮಂಗಲದಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯಲ್ಲಿ ಮಾತನಾಡಿದ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಹಾಯ್ ಅಂದ್ರೆ ಹಲೋ ಅನ್ನಬೇಡಿ, ಹಲೋ ಅಂದ್ರೆ ಹಾಯ್ ಅನ್ನಬೇಡಿ ಅಂತ ಹೇಳಿದೋರು ಯಾರು? ಹಾಯ್ ಅಂತ ಹೇಳಿಸಿ ಟ್ರ್ಯಾಪ್ ಮಾಡಿಸೋದು ಯಾರು? ಇವೆಲ್ಲವನ್ನೂ ಸಮಾಜ ನೋಡಿದೆ" ಎಂದು ಅವರು ಕಿಡಿಕಾರಿದರು.
ನೀವು ನ್ಯಾಯಯುತವಾಗಿ ಬದುಕಿದ್ದರೆ ಕ್ಯಾಮೆರಾ ಯಾರು ಬಂದು ಹಿಡಿದು ನಿಮ್ಮನ್ನ ಸ್ಟಿಂಗ್ ಆಪರೇಷನ್ ಮಾಡ್ತಾರೆ ಸ್ವಾಮಿ? ಅಂದರೆ ನಿಮ್ಮ ಸಚಿವರಲ್ಲಿ ಪ್ರಾಮಾಣಿಕತೆ ಇಲ್ವಾ? ರಾಜ್ಯದ ಮುಖ್ಯಮಂತ್ರಿಗಳು ನೀವು, ಇಂಟೆಲಿಜೆನ್ಸ್ ನಿಮ್ಮ ಅಂಗಳದಲ್ಲಿದೆ. ನೀವು ಸಕ್ರಿಯವಾಗಿ ಕೆಲಸ ಮಾಡಿದ್ರೆ ಇಂತಹ ಪರಿಸ್ಥಿತಿ ಯಾಕೆ ಬರ್ತಿತ್ತು? ಎಂದು ಅವರು ಪ್ರಶ್ನಿಸಿದರು.
ಇನ್ನು ಯಾರ್ಯಾರನ್ನು ಯಾವ ರೀತಿ ಮಟ್ಟ ಹಾಕಬೇಕು, ಅವರ ವೀಕ್ನೆಸ್ ಇಟ್ಟುಕೊಂಡು ರಾಜಕಾರಣ ಮಾಡಬೇಕು ಎಂದು ಮುಖ್ಯಮಂತ್ರಿಗಳೇ ಹೇಳಿದ ಮಾತಿದು. ಪ್ರಾಮಾಣಿಕವಾಗಿ ಕೆಲಸ ಮಾಡಿ, ಭಯ ಏಕೆ ಪಡ್ತೀರಾ? ಸರ್ಕಾರಕ್ಕೆ ತನ್ನದೇ ಸಚಿವರ ಮೇಲೆ ನಂಬಿಕೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದಿಂದ ಕಣ್ಣೀರಿನಲ್ಲಿ ರೈತರು:
ತಾಲ್ಲೂಕು ಕಚೇರಿಗಳಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಈ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ನೆರವಿಗೆ ಧಾವಿಸಬೇಕು. ತಾಲ್ಲೂಕು ಆಫೀಸ್‌ನಲ್ಲಿ ರೈತರಿಗೆ ಪೋಡಿ ಮಾಡಿಸಲು ಲಂಚ ಕೇಳುತ್ತಿದ್ದಾರೆ.
ರೈತರ ಸಾಲಮನ್ನಾಕ್ಕೆ ಆಗ್ರಹ:
"ರಾಜ್ಯದ ರೈತರ ಸಾಲವನ್ನು ಕೂಡಲೇ ಮನ್ನಾ ಮಾಡಬೇಕು. ಅನ್ನದಾತರ ಕಣ್ಣೀರು ಒರೆಸುವ ಕೆಲಸ ಈ ಸರ್ಕಾರದಿಂದ ಆಗುತ್ತಿಲ್ಲ. ಗುಣಮಟ್ಟದ ಬಿತ್ತನೆ ಬೀಜಗಳು ಸಹ ರೈತರಿಗೆ ಸಿಗುತ್ತಿಲ್ಲ. ಎಕರೆಗೆ ಕನಿಷ್ಠ 25 ಸಾವಿರ ರೂ. ಬರ ಪರಿಹಾರ ನೀಡಬೇಕು. ನಾಲ್ಕೂವರೆ ಲಕ್ಷ ಕೋಟಿ ಸಾಲ ಮಾಡಿ ಸರ್ಕಾರ ಭಾಗ್ಯಗಳನ್ನು ಕೊಡುತ್ತಿದೆ, ಆದರೆ ರೈತರ ಬಗ್ಗೆ ಕಾಳಜಿ ಇಲ್ಲ. ಇಂತಹ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು? ಇದು ಕಾಂಗ್ರೆಸ್ ಸರ್ಕಾರವಲ್ಲ, ಕೇವಲ ಬಂಡವಾಳಶಾಹಿಗಳ ಪರ ಇರುವ ಸರ್ಕಾರ. ನಾವು ಇಲ್ಲಿಗೆ ಮತ ಕೇಳಲು ಬಂದಿಲ್ಲ, ರೈತರ ಪರವಾಗಿ ಹೋರಾಟಕ್ಕೆ ಬಂದಿದ್ದೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೀಲ್ಸ್ ನಿಂದ ಸಮಸ್ಯೆ ಪರಿಹಾರವಿಲ್ಲ:
"ಕೇವಲ ರೀಲ್ಸ್ ಮಾಡುವುದರಿಂದ ಜನರ ಕಷ್ಟ-ನಷ್ಟಗಳು ದೂರವಾಗುವುದಿಲ್ಲ. ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧದ ಅಲೆ ಎದ್ದಿದೆ. ಇಂದಿನ ನಾಡಿನ ಜನತೆ ಅತ್ಯಂತ ಪ್ರಬುದ್ಧರಾಗಿದ್ದು ತಕ್ಕ ಉತ್ತರ ನೀಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ" ಎಂದು ಹೇಳಿದರು.
"ಕಾಂಗ್ರೆಸ್ ಭಾರತ್ ಜೋಡೋ 2.0 ಮಾಡಿದ್ದು ಯಾಕೆ ಗೊತ್ತಾ? 136 ಸೀಟ್ ಅಲ್ಲಿ ಎಲ್ಲರೂ ಮನೆಗೆ ಹೋಗ್ತಾರೆ, ಹಾಗಾಗಿ ಸೋತಿರೋ ಕಡೆ ಗಟ್ಟಿಸಿಕೊಳ್ಳೋಕೆ" ಎಂದು ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಮಠಾಧೀಶರು ರಾಯಭಾರಿಗಳಾಗಿ ಮುಖ್ಯಮಂತ್ರಿಗಳ ಸೇವೆ ಮಾಡಬೇಕಂತೆ.ಇಷ್ಟು ದುರಹಂಕಾರ, ಇಷ್ಟು ದರ್ಪ ಇರೋ ಮುಖ್ಯಮಂತ್ರಿಯನ್ನು ಯಾವತ್ತೂ ನೋಡಿರಲಿಲ್ಲ ಎಂದು ಅವರು ಕಿಡಿಕಾರಿದರು.
|ನೆಲಮಂಗಲದಲ್ಲಿ ರೈತ ಸ್ವಾಭಿಮಾನ ಯಾತ್ರೆ
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನೆಲಮಂಗಲದಲ್ಲಿ ಬೃಹತ್ ರೈತ ಸ್ವಾಭಿಮಾನ ಯಾತ್ರೆ ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜರುಗಿದ ಈ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಸಹಸ್ರಾರು ರೈತ ಮಹಿಳೆಯರು, ರೈತರು ಹಾಗೂ ರೈತ ಮುಖಂಡರು ಎತ್ತಿನ ಬಂಡಿಯ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಇದೇ ವೇಳೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರೈತರ ಕಲ್ಯಾಣಕ್ಕಾಗಿ ಪ್ರಾರ್ಥಿಸಿ, ನೆಲಮಂಗಲದ ಟಿ.ಬಿ. ಬಸ್ ನಿಲ್ದಾಣದಿಂದ ಮಾಜಿ ಶಾಸಕರಾದ ಡಾ. ಶ್ರೀನಿವಾಸ ಮೂರ್ತಿ ಅವರೊಂದಿಗೆ ಯಾತ್ರೆಗೆ ಚಾಲನೆ ನೀಡಿ, ತಾಲ್ಲೂಕು ಕಚೇರಿ ಬಳಿಯ ಶ್ರೀ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯವರೆಗೆ ಸಾವಿರಾರು ಅನ್ನದಾತರೊಂದಿಗೆ ಹೆಜ್ಜೆ ಹಾಕಿದರು.
ಈ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಮಾಜಿ ಸಚಿವರಾದ ಡಾ. ಶ್ರೀನಿವಾಸಮೂರ್ತಿ, ಎಲ್.ಎನ್. ನಾರಾಯಣಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಇ. ಕೃಷ್ಣಪ್ಪ ಸೇರಿದಂತೆ ಜೆಡಿಎಸ್ ನ ಹಲವು ಮುಖಂಡರು, ಕಾರ್ಯಕರ್ತರು ಮತ್ತು ನೂರಾರು ರೈತರು ಉಪಸ್ಥಿತರಿದ್ದರು.






Comments
Leave a Comment