ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಇದು ಅಚ್ಛೇ ದಿನವೇ ಅಥವಾ ಕಚ್ಚಾ ದಿನವೇ?
ಬೆಂಗಳೂರು, ಮಾ. 31 — ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಉಜ್ವಲ ಯೋಜನೆ ಬದಲಾಗಿ ಜನರಿಗೆ ಸೌದೆ ಒಲೆ ಯೋಜನೆ ನೀಡಲಾಗಿದೆ. ಅಚ್ಛೇ ದಿನಗಳೆಂದು ಘೋಷಿಸಿದ ಕೇಂದ್ರ ಸರ್ಕಾರ ಈಗ ಜನರನ್ನು ಕಚ್ಚಾ ದಿನಗಳತ್ತ ತಳ್ಳುತ್ತಿದೆ” ಎಂದು ಅವರು ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಜನರು ಬೆಲೆ ಏರಿಕೆಯಿಂದ ಪರದಾಡುತ್ತಿದ್ದಾರೆ, ಹೊಟೇಲ್‌ಗಳು ಬಂದ್ ಆಗುತ್ತಿವೆ, ಜನರು ವಿದ್ಯುತ್ ಒಲೆ ಬಳಸುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು. ಕಳೆದ ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ 10% ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲದೆ ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ, ಔಷಧಗಳ ಬೆಲೆ, ಪ್ಲಾಸ್ಟಿಕ್ ಪೈಪ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಬದುಕನ್ನು ಕಷ್ಟಪಡಿಸುತ್ತಿದೆ ಎಂದು ಅವರು ಆರೋಪಿಸಿದರು. “ಮೋದಿ ಸರ್ಕಾರ ಪ್ರತಿದಿನ ಜನರ ಜೇಬಿನಿಂದ ಹಣ ತೆಗೆಯುತ್ತಿದೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ 900 ಕೋಟಿ ವಸೂಲಿ ಮಾಡಿದೆ. ಅದೇ ಹಣ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಬಳಸಬಹುದಿತ್ತು” ಎಂದು ಅವರು ಹೇಳಿದರು.
ಸಿಮೆಂಟ್ ಬೆಲೆ 50 ರಿಂದ 100 ರೂಪಾಯಿ ಹೆಚ್ಚಳವಾಗಿದ್ದು, ಕಬ್ಬಿಣದ ಬೆಲೆ 47 ಸಾವಿರದಿಂದ 59 ಸಾವಿರಕ್ಕೆ ಏರಿಕೆಯಾಗಿದೆ. ಇದರಿಂದ ಮನೆ ಕಟ್ಟುವ ಸಾಮಾನ್ಯ ಜನರ ಕನಸು ದೂರವಾಗುತ್ತಿದೆ, ಸರ್ಕಾರದ ಕಾಮಗಾರಿಗಳಿಗೂ ಹಿನ್ನಡೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿಮಾನ ಪ್ರಯಾಣದ ದರವನ್ನು ಶೇ 18ರಷ್ಟು ಏರಿಸಲಾಗಿದೆ ಎಂದು ಅವರು ಉದಾಹರಿಸಿದರು.
ಅರಣ್ಯಗಳಿಗೆ ಪ್ರವೇಶ ನಿರ್ಬಂಧಿಸಿರುವುದರಿಂದ ಸೌದೆ ಅಭಾವ ಹೆಚ್ಚಾಗಲಿದೆ. ಹಳ್ಳಿಗಳಲ್ಲೂ ಗ್ಯಾಸ್ ಬಳಕೆ ಹೆಚ್ಚಾಗಿರುವುದರಿಂದ ಸೌದೆ ಬಳಕೆ ಕಡಿಮೆಯಾಗಿದೆ. ಬ್ಲಾಕ್ ಮಾರ್ಕೆಟ್‌ನಲ್ಲಿ ಗೃಹಬಳಕೆ ಗ್ಯಾಸ್ 2 ಸಾವಿರದವರೆಗೆ, ವಾಣಿಜ್ಯ ಗ್ಯಾಸ್ 4 ಸಾವಿರದವರೆಗೆ ಏರಿಕೆಯಾಗಿದೆ ಎಂದು ಅವರು ಆರೋಪಿಸಿದರು.
“ಜನರನ್ನು ಕೇಂದ್ರ ಸರ್ಕಾರ ಫೂಲ್ ಮಾಡುತ್ತಿದೆ. ನಾವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ರಕ್ಷಣೆ ನೀಡಿದ್ದೇವೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರವೂ ಪರ್ಯಾಯ ವ್ಯವಸ್ಥೆ ಮಾಡಬೇಕು. ಜನಸಾಮಾನ್ಯರ ಬವಣೆಗೆ ಬೆಲೆ ಏರಿಕೆಯ ಹೊಡೆತ ನೀಡುತ್ತಿರುವ ಕೇಂದ್ರ ಸರ್ಕಾರ ಜನರೊಂದಿಗೆ ನಿಲ್ಲಬೇಕು” ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.




Comments
Leave a Comment