ದೀರ್ಘಾವಧಿ ಇಂಧನ ಭದ್ರತೆಯ ಕಾರ್ಯತಂತ್ರಕ್ಕೆ ಒತ್ತು: ಇಂಧನ ಸಚಿವ ಕೆ.ಜೆ. ಜಾರ್ಜ್
]
ಎಸ್ಕಾಂಗಳ ಆರ್ಥಿಕ ಸ್ಥಿತಿ ಬಲಪಡಿಸಲು ಕ್ರಮ
ಬೆಂಗಳೂರು, ಅಕ್ಟೋಬರ್ 1, 2026: ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಬೇಡಿಕೆ ಅವಧಿಯಲ್ಲಿನ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ವಿಸ್ತರಣೆ, ಕುಸುಮ್ ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣಕ್ಕೆ ವೇಗ ನೀಡುವ ಜತೆಗೆ ಮುಖ್ಯಮಂತ್ರಿ ಸೌರ ಕೃಷಿ ಯೋಜನೆ (ಸಿಎಂ-ಸ್ಕೈ) ಅನುಷ್ಠಾನದ ಮೂಲಕ ದೀರ್ಘಾವಧಿಯ ಇಂಧನ ಭದ್ರತೆಯ ಕಾರ್ಯತಂತ್ರವನ್ನು ಬಲಪಡಿಸಲಾಗುತ್ತಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಬೆಳಕು ಭವನದಲ್ಲಿ ನಡೆದ ಇಂಧನ ಇಲಾಖೆಯ ದೀರ್ಘಾವಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, "ವಿಶೇಷವಾಗಿ ಗರಿಷ್ಠ ಬೇಡಿಕೆಯ ಅವಧಿಯಲ್ಲಿ ವಿದ್ಯುತ್ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವ ಜತೆಗೆ, ರಾಜ್ಯದ ವಿದ್ಯುತ್ ವ್ಯವಸ್ಥೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸಲು ಬಹು ಆಯಾಮದ ಕಾರ್ಯತಂತ್ರವನ್ನು ಕೈಗೊಳ್ಳಲಾಗುತ್ತಿದೆ," ಎಂದು ಹೇಳಿದರು.
“ದೀರ್ಘಾವಧಿಯ ಇಂಧನ ಭದ್ರತೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿ ಇಂಧನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ನವೀಕರಿಸಬಹುದಾದ ಇಂಧನವನ್ನು ವಿದ್ಯುತ್ ಗ್ರಿಡ್‌ಗೆ ಸಂಯೋಜಿಸುವಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಅಳವಡಿಕೆಗೆ ಒತ್ತು ನೀಡಲಾಗಿದೆ. ಕೆಪಿಟಿಸಿಎಲ್ ಮತ್ತು ಕ್ರೆಡಲ್ ಮೂಲಕ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೇ, ಕೆಪಿಟಿಸಿಎಲ್‌ನ 500 ಮೆಗಾ ವ್ಯಾಟ್/1,000 ಮೆಗಾ ವ್ಯಾಟ್ ಪರ್ ಅವರ್ ಸಾಮರ್ಥ್ಯದ ಯೋಜನೆಗಳು ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿವೆ,"ಎಂದರು.
"ಪಾವಗಡ ಸೋಲಾರ್ ಪಾರ್ಕ್‌ನಲ್ಲಿ 250 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯೊಂದಿಗೆ 1,100 ಮೆಗಾ ವ್ಯಾಟ್ ಪರ್ ಅವರ್ ಸಾಮರ್ಥ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಯೋಜನೆಯನ್ನು ಕ್ರೆಡಲ್ ಕೈಗೆತ್ತಿಕೊಂಡಿದೆ. ಇದಲ್ಲದೇ, ಕುಷ್ಟಗಿಯಲ್ಲಿ 250 ಮೆಗಾ ವ್ಯಾಟ್/500 ಮೆಗಾ ವ್ಯಾಟ್ ಪರ್ ಅವರ್ ಹಾಗೂ ಹುಲಿಯೂರುದುರ್ಗದಲ್ಲಿ 200 ಮೆಗಾ ವ್ಯಾಟ್/400 ಮೆಗಾ ವ್ಯಾಟ್ ಪರ್ ಅವರ್ ಸಾಮರ್ಥ್ಯವನ್ನು ಒಳಗೊಂಡ ಒಟ್ಟು 900 ಮೆಗಾ ವ್ಯಾಟ್ ಪರ್ ಅವರ್ ಸಾಮರ್ಥ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಯೋಜನೆಯನ್ನು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ,"ಎಂದು ಸಚಿವರು ವಿವರಿಸಿದರು.
"ಕುಸುಮ್ ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣದಲ್ಲೂ ರಾಜ್ಯ ಪ್ರಗತಿ ಸಾಧಿಸಿದ್ದು, ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಲು ರಾಜ್ಯ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. 2026ರ ಸೆಪ್ಟೆಂಬರ್ 25 ವೇಳೆಗೆ ಒಟ್ಟು 2,767 ಮೆಗಾವ್ಯಾಟ್ ಸಾಮರ್ಥ್ಯದ 439 ಕುಸುಮ್ ಸಿ ಯೋಜನೆಗಳಿಗೆ ಕಾರ್ಯಾದೇಶ ಪತ್ರಗಳನ್ನು ನೀಡಲಾಗಿದೆ. ಈ ಪೈಕಿ 694 ಮೆಗಾವ್ಯಾಟ್ ಸಾಮರ್ಥ್ಯದ 122 ಯೋಜನೆಗಳು ಈಗಾಗಲೇ ಕಾರ್ಯಾರಂಭಗೊಂಡಿವೆ.2026ರ ಮಾರ್ಚ್‌ವರೆಗೆ 395 ಮೆಗಾವ್ಯಾಟ್ ಹಾಗೂ ಏಪ್ರಿಲ್ 2026ರಿಂದ ಇದುವರೆಗೆ ಮತ್ತೆ 299 ಮೆಗಾ ವ್ಯಾಟ್ ಸಾಮರ್ಥ್ಯದ ಯೋಜನೆಗಳು ಕಾರ್ಯಾರಂಭಗೊಂಡಿವೆ,” ಎಂದು ಇಂಧನ ಸಚಿವರು ಹೇಳಿದರು.
"ಮುಖ್ಯಮಂತ್ರಿ ಸೌರ ಕೃಷಿ ಯೋಜನೆಯನ್ನು ರಾಜ್ಯಾದ್ಯಂತ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 919 ಮೆಗಾ ವ್ಯಾಟ್ ಸಾಮರ್ಥ್ಯದ 159 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು 1,003.85 ಮೆಗಾವ್ಯಾಟ್ ಸಾಮರ್ಥ್ಯದ 119 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕುಸುಮ್ ಬಿ ಮತ್ತು ಸಿ ಹಾಗೂ ಸಿಎಂ ಸ್ಕೈ ಯೋಜನೆಗಳ ಮೂಲಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವ ಜತೆಗೆ ಕೃಷಿ ವಲಯಕ್ಕೂ ಬೆಂಬಲ ನೀಡುವುದು ಇಲಾಖೆಯ ಉದ್ದೇಶ, ಈ ನಿಟ್ಟಿನಲ್ಲಿ ಎಲ್ಲಾ ಎಸ್ಕಾಂಗಳು ನಿಗದಿತ ಗುರಿ ಸಾಧಿಸಿಸಲು ಸೂಚನೆ ನೀಡಲಾಗಿದೆ,"ಎಂದರು
ಬೇಸಿಗೆಗೆ ಸಜ್ಜು
“ಮುಂಬರುವ ತಿಂಗಳುಗಳಲ್ಲಿ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ರಾಜ್ಯವು ಸಂಪೂರ್ಣ ಸನ್ನದ್ಧವಾಗಿದೆ. ನಿರೀಕ್ಷಿತ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ. ಹಿಂದಿನಂತೆಯೇ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳೊಂದಿಗೆ ವಿನಿಮಯ ವ್ಯವಸ್ಥೆಯ ಮೂಲಕ ವಿದ್ಯುತ್ ಪಡೆದುಕೊಳ್ಳುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ,” ಎಂದು ಸಚಿವರು
“ಉಷ್ಣ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ರಾಜ್ಯವು ಹಲವು ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿಯೇ ಕೆಪಿಸಿಎಲ್‌ನ ಉಷ್ಣ ವಿದ್ಯುತ್ ಘಟಕಗಳ ವಾರ್ಷಿಕ ನಿರ್ವಹಣಾ ಕಾರ್ಯವನ್ನು ಮುಂದೂಡಲಾಗಿದ್ದು, ಎಲ್ಲಾ ಘಟಕಗಳು ವಿದ್ಯುತ್ ಉತ್ಪಾದನೆಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಕಷ್ಟು ಪ್ರಮಾಣದ ಕಲ್ಲಿದ್ದಲು ದಾಸ್ತಾನು ಮಾಡಲಾಗುತ್ತಿದೆ. ಇದಲ್ಲದೆ, ಬೇಡಿಕೆಗೆ ಅನುಗುಣವಾಗಿ ರಾಜ್ಯದ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ನವೆಂಬರ್‌ನಿಂದ ಪವರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುವುದು,” ಎಂದು ಅವರು ಹೇಳಿದರು.
ಎಸ್ಕಾಂಗಳ ಆರ್ಥಿಕ ಸ್ಥಿತಿ ಬಲಪಡಿಸಲು ಒತ್ತು
“ಬೆಸ್ಕಾಂ ಮತ್ತು ಮೆಸ್ಕಾಂ ಲಾಭದ ಹಾದಿಯಲ್ಲಿದ್ದು, ಹೆಸ್ಕಾಂ, ಸೆಸ್ಕ್ ಹಾಗೂ ಜೆಸ್ಕಾಂ ಸಹ ಆರ್ಥಿಕ ಸದೃಢತೆ ಸಾಧಿಸಬೇಕಿದೆ. ಇದಕ್ಕಾಗಿ ಆದಾಯ ಸಂಗ್ರಹವನ್ನು ಮತ್ತಷ್ಟು ಬಲಪಡಿಸಿ, ಬಾಕಿ ಇರುವ ವಿದ್ಯುತ್ ಬಿಲ್‌ಗಳ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಸಬ್ಸಿಡಿಗಳು ಸಕಾಲದಲ್ಲಿ ಬಿಡುಗಡೆ ಆಗುವುದನ್ನು ಖಚಿತಪಡಿಸಿಕೊಳ್ಳುವಂತೆ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ,” ಎಂದು ಇಂಧನ ಸಚಿವರು ಹೇಳಿದರು.
ವಿದ್ಯುತ್ ಬೇಡಿಕೆ ಪೂರೈಸಲು ರಾಜ್ಯ ಸಂಪೂರ್ಣ ಸನ್ನದ್ಧ: ಗೌರವ್ ಗುಪ್ತ
“ಮುಂಬರುವ ದಿನಗಳಲ್ಲಿ ವಿದ್ಯುತ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯವು ಸಂಪೂರ್ಣ ಸನ್ನದ್ಧವಾಗಿದೆ. ರಾಜ್ಯದ ಪ್ರಸ್ತುತ ವಿದ್ಯುತ್ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಇದೆ. ಎಲ್ ನಿನೊ ಪರಿಣಾಮದಿಂದಾಗಿ ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಬೇಡಿಕೆ ಶೇ.30ರಷ್ಟು ಹೆಚ್ಚಾಗಿತ್ತು. ಬೇಡಿಕೆಯಲ್ಲಿ ತೀವ್ರ ಏರಿಕೆಯಾದರೂ, ಹೆಚ್ಚುವರಿ ವಿದ್ಯುತ್ ಲೋಡ್ ಪೂರೈಸಿದ್ದೇವೆ. ಹೆಚ್ವುವರಿಯಾಗಿ 3000 ಮೆಗಾವ್ಯಾಟ್‌ಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಸರಬರಾಜು ಮಾಡಲಾಗಿದೆ,” ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದರು.
“ನವೆಂಬರ್ 1ರಿಂದ ರಾಜ್ಯಕ್ಕೆ 1,000 ಮೆ.ವ್ಯಾ. ವಿದ್ಯುತ್ ಲಭ್ಯವಾಗಲಿದೆ. ಇದಲ್ಲದೆ, ಇತರ ವಿದ್ಯುತ್ ಉತ್ಪಾದಕರಿಂದ ಹೆಚ್ಚುವರಿಯಾಗಿ 230 ಮೆ.ವ್ಯಾ. ವಿದ್ಯುತ್ ಅನ್ನು ಮುಂಗಡವಾಗಿ ಪಡೆಯಲಾಗುತ್ತಿದೆ. ಕೇಂದ್ರೀಯ ವ್ಯವಸ್ಥೆಯಿಂದ(ಪೂರ್ವ ಗ್ರಿಡ್) ರಾಜ್ಯಕ್ಕೆ ಹೆಚ್ಚುವರಿಯಾಗಿ 236 ಮೆಗಾವ್ಯಾಟ್ ವಿದ್ಯುತ್ ಹಂಚಿಕೆ ಆಗಿದೆ. ಇದಲ್ಲದೆ, ಕೇಂದ್ರ ಸರ್ಕಾರವು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಸೆಕ್ಷನ್ 11ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದು, ಇದು ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿ ಹೆಚ್ಚಿನ ವಿದ್ಯುತ್ ಲಭ್ಯವಾಗುವಂತೆ ಮಾಡಲಿದೆ,"ಎಂದು ಗೌರವ್ ಗುಪ್ತ ಹೇಳಿದರು.
ಸಭೆಯಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪಿ., ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಶಂಕರ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕಿ ದಿವ್ಯ ಪ್ರಭು ಜಿ.ಆರ್.ಜೆ., ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್.ಅರ್ಚನಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಎನ್., ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಶಾ ಸೇರಿದಂತೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







Comments
Leave a Comment