ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರ ತಾ.ನ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಪತ್ರ
ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರ ತಾ.ನ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಪತ್ರ
ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದ ತಾವು ಪ್ರತಿನಿಧಿಸುತ್ತಿರುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ಗ್ರಾಮಗಳ 5,600 ಎಕರೆ ಮುಳುಗಡೆ ಆಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 1,000 ಎಕರೆಗಾದರೂ ಪರಿಹಾರ ಕೊಡಬೇಕು ಎಂದು ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಜಲಸಂಪನ್ಮೂಲ ಸಚಿವ ಎನ್.ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಅವರು, ಅಣೆಕಟ್ಟೆಯನ್ನು ಈಗಿರುವ 519.60 ಮೀಟರ್ ನಿಂದ 524.256 ಮೀಟರ್ ಗೆ ಎತ್ತರಿಸಲಾಗುತ್ತಿದೆ. ಇದರಿಂದಾಗಿ 184 ಗ್ರಾಮಗಳ 75,563 ಎಕರೆ ಮುಳುಗಡೆ ಆಗುತ್ತಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ 31 ಗ್ರಾಮಗಳಿದ್ದು, ಬಬಲೇಶ್ವರ ವಿಧಾನಸಭೆ ಕ್ಷೇತ್ರದ 15 ಹಳ್ಳಿಗಳಿವೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ 5,600 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಸದ್ಯ ಪ್ರಸ್ತಾಪಿಸಿರುವ ಅಂದಾಜು 3,000 ಕೋಟಿ ರೂಪಾಯಿ ಪಾವತಿ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಜಮೀನುಗಳಿಗೆ ಕನಿಷ್ಠ 500 ಕೋಟಿ ಮೀಸಲಿಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಇದರಲ್ಲಿ ಈಗಾಗಲೇ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಚಿಕ್ಕಗಲಗಲಿ, ಶಿರಬೂರು, ಹೊಸೂರು ಮತ್ತು ಕಣಬೂರು ಗ್ರಾಮಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ, ಮೊದಲ ಸುತ್ತಿನಲ್ಲಿ 500 ಕೋಟಿ ರೂ.ಗಳಷ್ಟು ಪರಿಹಾರ ಕೊಡಬೇಕು. ಉಳಿದ 10 ಗ್ರಾಮಗಳಿಗೆ ಕೂಡ ಅಧಿಸೂಚನೆ ಹೊರಡಿಸಿ, ಪರಿಹಾರ ವಿತರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ ಮನವಿ ಮಾಡಿದ್ದಾರೆ.






Comments
Leave a Comment