ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಜತೆಗೆ ಹೆಚ್ಚುವರಿ 2 ಟಿಕೆಟ್ ಖರೀದಿಗೆ ಅವಕಾಶ
ಬೆಂಗಳೂರು, ಮಾರ್ಚ್ 30: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ರಿಕೆಟ್ ಪಂದ್ಯಾವಳಿಗಳ ಟಿಕೆಟ್ ಹಂಚಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಶಾಸಕರಿಗೆ ಐಪಿಎಲ್ ಪಂದ್ಯಗಳಿಗೆ ಮೂರು ಟಿಕೆಟ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎರಡು ಉಚಿತ ಟಿಕೆಟ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹೆಚ್ಚುವರಿ ಎರಡು ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ಕೆಎಸ್‌ಸಿಎ ಅಧ್ಯಕ್ಷರು, ಪದಾಧಿಕಾರಿಗಳು, ಆರ್‌ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಯಾರಿಗಾದರೂ ಟಿಕೆಟ್ ಬೇಕಿಲ್ಲದಿದ್ದರೆ ಅವರು ಲಿಖಿತವಾಗಿ ತಿಳಿಸಬಹುದು. ಬಲವಂತ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಶಾಸಕರ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅನೇಕ ಬೇಡಿಕೆಗಳು ಬರುತ್ತವೆ. ಎಲ್ಲವನ್ನು ಈಡೇರಿಸಲು ಸಾಧ್ಯವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಇತರ ರಾಜ್ಯಗಳಲ್ಲಿ 50-60% ಟಿಕೆಟ್‌ಗಳನ್ನು ಅಧಿಕಾರಿಗಳಿಗೆ ನೀಡಲಾಗುತ್ತದೆ. ನಮ್ಮಲ್ಲಿ ಹಸ್ತಕ್ಷೇಪ ಕಡಿಮೆ ಇದೆ” ಎಂದರು.
ಕ್ರೀಡಾಂಗಣದಲ್ಲಿ ಆಸನ ಸಂಖ್ಯೆ ಹೆಚ್ಚಳದ ಕುರಿತು ಅವರು, “20 ಸಾವಿರ ಆಸನ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಅನುಮೋದನೆ ನೀಡಲಾಗುವುದು” ಎಂದು ಹೇಳಿದರು.
ಐಪಿಎಲ್ ಪಂದ್ಯಾವಳಿಯಲ್ಲಿ ಶಾಸಕರು ಹಾಗೂ ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಬೇಡಿಕೆಯ ಬಗ್ಗೆ, “ಅದು ಕೆಎಸ್‌ಸಿಎ ನಿರ್ಧಾರ. ಅವರ ವ್ಯವಹಾರಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರ ಈಗಾಗಲೇ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದು, ಕೆಎಸ್‌ಸಿಎಗೂ ಜಾಗ ನೀಡಲಾಗಿದೆ ಎಂದು ಅವರು ತಿಳಿಸಿದರು. “ತುಮಕೂರು, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಜಾಗ ನೀಡಲಾಗಿದೆ. ಸೂರ್ಯನಗರದಲ್ಲಿ ನಿರ್ಮಾಣ ನಡೆಯುತ್ತಿದೆ” ಎಂದರು.
ರಾಜಕೀಯ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅವರು, “ನಾಳೆಯಿಂದ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಏಪ್ರಿಲ್ 5-6ರಂದು ಕೇರಳದಲ್ಲಿ ಪ್ರಚಾರ ನಡೆಸುತ್ತೇನೆ” ಎಂದು ಹೇಳಿದರು.
ಗ್ಯಾಸ್ ಅಭಾವದ ಕುರಿತು, “ಮಂಗಳವಾರ ಬೆಳಗ್ಗೆ 9.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ವಿಷಯದಲ್ಲಿ ಮಾತನಾಡುತ್ತೇವೆ” ಎಂದು ತಿಳಿಸಿದರು.
ಅಸ್ಸಾಂ ಚುನಾವಣೆಯ ಕುರಿತು ಅವರು, “ನಾವು ನುಡಿದಂತೆ ನಡೆಯುತ್ತೇವೆ. ಜನರಿಗೆ ಕೊಟ್ಟ ಮಾತುಗಳನ್ನು ಪಾಲಿಸುತ್ತೇವೆ. ಬಿಜೆಪಿ ಸುಳ್ಳು ಭರವಸೆ ನೀಡುತ್ತದೆ, ಆದರೆ ನಾವು ಜನರಿಗೆ ನಿಜವಾದ ಯೋಜನೆಗಳನ್ನು ನೀಡುತ್ತೇವೆ” ಎಂದು ಹೇಳಿದರು.
ಅಸ್ಸಾಂ ಪ್ರವಾಸದ ವೇಳೆ ಸ್ಥಳೀಯ ಆಹಾರವನ್ನು ಸವಿದ ಅನುಭವವನ್ನು ಹಂಚಿಕೊಂಡ ಅವರು, “ಈ ಬಾರಿ ಸ್ಥಳೀಯ ಸಸ್ಯಾಹಾರವನ್ನು ಸವಿದೆ. ಸ್ನೇಹಿತರು ಮಾಂಸಾಹಾರವನ್ನು ಆನಂದಿಸಿದರು” ಎಂದರು.
ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ ಬಗ್ಗೆ, “ದೇವರನ್ನು ಭೇಟಿ ಮಾಡಿ ಪ್ರಾರ್ಥನೆ ಮಾಡಬೇಕು” ಎಂದು ಹೇಳಿದರು.
ಅಸ್ಸಾಂ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಅವರು, “ನಾವು ಮೂರನೇ ಎರಡರಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ ಮೂರನೇ ಒಂದರಷ್ಟು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುತ್ತದೆ” ಎಂದು ಹೇಳಿದರು.



Comments
Leave a Comment