ಎಸ್.ಐ.ಆರ್. ಸ್ಥಗಿತಗೊಳಿಸಿ: ನಟ ಪ್ರಕಾಶ್ ರಾಜ್ ಆಗ್ರಹ
From ; Jayram Udupi
ಮಂಗಳೂರು:
ಮತದಾರರ ಹಕ್ಕಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಹಳೆಯ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು ಎಂದು ನಟ ಪ್ರಕಾಶ್ ರಾಜ್ ಆಗ್ರಹಿಸಿದರು.
ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಐ.ಆರ್. ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುವ ಆತಂಕ ಎದುರಾಗಿದೆ. ಬದುಕಿರುವವರನ್ನೇ ‘ಮೃತರು’, ಮನೆ ಬದಲಾಯಿಸದವರನ್ನು ‘ಶಿಫ್ಟೆಡ್’ ಹಾಗೂ ಮನೆಯಲ್ಲಿ ಲಭ್ಯವಿಲ್ಲದವರನ್ನು ‘ಅಬ್ಸೆಂಟ್’ ಎಂದು ಗುರುತಿಸಿರುವ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ 5.5 ಕೋಟಿಗೂ ಅಧಿಕ ಮತದಾರರಿದ್ದು, ಅಲ್ಪಾವಧಿಯಲ್ಲಿ ಎಸ್.ಐ.ಆರ್.
ಪ್ರಕ್ರಿಯೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಮುನ್ನ ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್ ನೀಡಬೇಕು. ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಉಂಟಾಗಿರುವ ಲೋಪಗಳ ಕುರಿತು ರಾಜ್ಯದ ವಿವಿಧ ಭಾಗಗಳಲ್ಲಿ ಸಾಮಾಜಿಕ ಆಡಿಟ್ ನಡೆಸಲಾಗುತ್ತಿದೆ. ಸುಮಾರು 100 ಮತಗಟ್ಟೆಗಳಲ್ಲಿ ಪರಿಶೀಲನೆ ನಡೆಸಿ, ಮತದಾರರ ಸಮಸ್ಯೆಗಳನ್ನು ದಾಖಲೆ ಹಾಗೂ ಸಾಕ್ಷ್ಯಗಳೊಂದಿಗೆ ಸಂಗ್ರಹಿಸಲಾಗುತ್ತಿದೆ. ಈ ದಾಖಲೆಗಳನ್ನು ಸರ್ಕಾರ ಹಾಗೂ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಪ್ರಕಾಶ್ ರಾಜ್ ತಿಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ವಿಕೇಂದ್ರೀಕರಣ ಅಗತ್ಯ. ಇದು ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧದ ಹೋರಾಟವಲ್ಲ; ಮತದಾರರ ಹಕ್ಕಿನ ರಕ್ಷಣೆಯ ಪ್ರಶ್ನೆಯಾಗಿದೆ. SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಹಿಂದಿನ ಮತದಾರರ ಪಟ್ಟಿಯನ್ನು ಆಧಾರವಾಗಿಸಿಕೊಂಡು ಅರ್ಹ ಮತದಾರರ ಹಕ್ಕುಗಳನ್ನು ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನವೆಂಬರ್‌ನಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳು ಒತ್ತಾಯಿಸಬೇಕು ಎಂದು ಪ್ರಕಾಶ್ ರಾಜ್ ಹೇಳಿದರು. ಚುನಾವಣಾ ಆಯೋಗದ ಇತ್ತೀಚಿನ ನಿರ್ಧಾರಗಳು, ನಿಯಮಗಳು ಹಾಗೂ SIR ಪ್ರಕ್ರಿಯೆಯ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕು. ಮತದಾರರ ಹಕ್ಕುಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಚುನಾವಣಾ ಆಯೋಗ ಸ್ಪಷ್ಟ ಉತ್ತರ ನೀಡಬೇಕು ಎಂದೂ ಅವರು ಆಗ್ರಹಿಸಿದರು.







Comments
Leave a Comment